ವಾರಾಣಸಿ: ತಮಿಳುನಾಡು ಮತ್ತು ಕಾಶಿ ನಡುವಿನ ಸಾಂಸ್ಕೃತಿಕ, ಭಾಷಿಕ ಹಾಗೂ ನಾಗರಿಕತೆಯ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಆಯೋಜಿಸಿರುವ 'ಕಾಶಿ- ತಮಿಳು ಸಂಗಮಂ 5.0' ಕಾರ್ಯಕ್ರಮಕ್ಕೆ ಶನಿವಾರ ಇಲ್ಲಿ ಚಾಲನೆ ನೀಡಲಾಯಿತು.

ಕೇಂದ್ರ ಶಿಕ್ಷಣ ಸಚಿವಾಲಯದ ಆಶ್ರಯದಲ್ಲಿ ಡಿಸೆಂಬರ್ 12ರವರೆಗೆ ನಡೆಯಲಿರುವ ಕಾರ್ಯಕ್ರಮವನ್ನು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು. ಇದೇ ವೇಳೆ, 10 ವಿದೇಶಿ ಭಾಷೆಗಳು ಸೇರಿದಂತೆ 50 ಭಾಷೆಗಳಲ್ಲಿ ತಿರುಕ್ಕುರಳ್ ಅನುವಾದಗಳನ್ನು ಉಪರಾಷ್ಟ್ರಪತಿ ಬಿಡುಗಡೆ ಮಾಡಿದರು. 

ಕಾರ್ಯಕ್ರಮದಲ್ಲಿ ಮಾತನಾಡಿದ ಅತಿಥಿಗಳು, ‘ಕಾಶಿಯಲ್ಲಿ ಗಂಗೆಯಿದ್ದರೆ, ತಮಿಳುನಾಡಿನಲ್ಲಿ ಕಾವೇರಿ ನದಿಯಿದೆ. ಆದರೆ, ಈ ಎರಡೂ ನದಿಗಳ ದಡದಲ್ಲಿ ಹರಿಯುವ ಸಾಂಸ್ಕೃತಿಕ ಮೌಲ್ಯಗಳ ಧಾರೆಯು ಒಂದೇ ಆಗಿದೆ’ ಎಂದು ಅಭಿಪ್ರಾಯಪಟ್ಟರು. 

‘ವಾರಾಣಸಿಯ ಕೇದಾರ ಘಾಟ್, ಹನುಮಾನ್ ಘಾಟ್ ಮತ್ತು ಹರಿಶ್ಚಂದ್ರ ಘಾಟ್ ಪ್ರದೇಶಗಳಲ್ಲಿ ತಮಿಳು ಸಂಸ್ಕೃತಿಯ ಛಾಪು ಇಂದಿಗೂ ಎದ್ದು ಕಾಣುತ್ತದೆ; ಈ ಪ್ರದೇಶಗಳನ್ನು ಅನೇಕರು ಮಿನಿ ತಮಿಳುನಾಡು ಎಂದೇ ಬಣ್ಣಿಸುತ್ತಾರೆʼ ಎಂದು ಯೋಗಿ ಆದಿತ್ಯನಾಥ್‌ ಹೇಳಿದರು.

ವಾರಾಣಸಿಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ತಮಿಳುನಾಡಿನಿಂದ ವಿದ್ಯಾರ್ಥಿಗಳು, ಶಿಕ್ಷಕರು, ಸಾಹಿತಿಗಳು, ಕೃಷಿಕರು, ಕುಶಲಕರ್ಮಿಗಳು, ಮಹಿಳೆಯರು ಹಾಗೂ ಆಧ್ಯಾತ್ಮಿಕ ನಾಯಕರು ಸೇರಿದಂತೆ ಸುಮಾರು 1,400 ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.

ʼಈ ಬಾರಿಯ ಸಂಗಮಂನ ಧ್ಯೇಯವಾಕ್ಯ ‘ತಿರುಕ್ಕುರಳ್ ಪಯಿಲ್ವೋಮ್ – ತಿರುಕ್ಕುರಳ್ ಅಭ್ಯಾಸ ಕರೇನ್’ (ತಿರುಕ್ಕುರಳ್ ಕಲಿಯೋಣ) ಎಂಬುದಾಗಿದೆ. ತಮಿಳು ಕವಿ ತಿರುವಳ್ಳುವರ್ ರಚಿಸಿರುವ ತಿರುಕ್ಕುರಳ್‌ನ 1,330 ದ್ವಿಪದಿಗಳಲ್ಲಿರುವ ನೈತಿಕತೆ, ಆಡಳಿತ, ಮಾನವ ಸಂಬಂಧ, ಕರುಣೆ ಮತ್ತು ಶಿಸ್ತಿನ ಮೌಲ್ಯಗಳನ್ನು ವಿದ್ಯಾರ್ಥಿಗಳು ಹಾಗೂ ಯುವಜನರಿಗೆ ಪರಿಚಯಿಸುವುದು ಇದರ ಉದ್ದೇಶ ಎಂದು ಪ್ರಲ್ಹಾದ ಜೋಶಿ ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ದೇಶದ 1,000 ಶಿಕ್ಷಣ ಸಂಸ್ಥೆಗಳಲ್ಲಿ ತಿರುಕ್ಕುರಳ್ ಅಧ್ಯಯನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಒಂದು ತಿಂಗಳ ಸಂಶೋಧನೆ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗಾಗಿ ತಲಾ ₹10 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತದೆ.

ಇದಲ್ಲದೆ, ತಮಿಳುನಾಡಿನ 50 ಶಿಕ್ಷಕರು ಉತ್ತರ ಪ್ರದೇಶದ ಶಾಲೆಗಳಿಗೆ ಭೇಟಿ ನೀಡಿ ತಿರುಕ್ಕುರಳ್ ಬೋಧಿಸಲಿದ್ದಾರೆ. ವಾರಾಣಸಿಯಲ್ಲಿ ಓದು, ಕಥೆ ಹೇಳುವಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಶೈಕ್ಷಣಿಕ ವಿಚಾರ ಸಂಕಿರಣ ಹಾಗೂ ಕರಕುಶಲ ವಸ್ತುಗಳ ಪ್ರದರ್ಶನ ನಡೆಯಲಿದೆ.

ಪ್ರತಿನಿಧಿಗಳು ವಾರಾಣಸಿ, ಪ್ರಯಾಗ್‌ರಾಜ್ ಮತ್ತು ಅಯೋಧ್ಯೆಯ ಪ್ರಮುಖ ಧಾರ್ಮಿಕ ಹಾಗೂ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗವಹಿಸಲಿದ್ದಾರೆ.

ಕಾಶಿ ಮತ್ತು ತಮಿಳುನಾಡು ಸಾವಿರಾರು ವರ್ಷಗಳ ನಾಗರಿಕತಾ ಬಾಂಧವ್ಯ ಹಂಚಿಕೊಂಡಿವೆ. ಕಾಶಿ ತಮಿಳು ಸಂಗಮಂ ಕೇವಲ ಸಾಂಸ್ಕೃತಿಕ ಕಾರ್ಯಕ್ರಮವಲ್ಲ, ರಾಷ್ಟ್ರೀಯ ಏಕತೆಯನ್ನು ಬಲಪಡಿಸುವ ಆಂದೋಲನ.  ಸಿ.ಪಿ.ರಾಧಾಕೃಷ್ಣನ್‌, ಉಪ ರಾಷ್ಟ್ರಪತಿ 

ಭಾರತ ಇಂದು ನಾನಾ ಭಾಷೆ, ಪರಂಪರೆ, ಸಾಂಸ್ಕೃತಿಕ ಬೆಸುಗೆ ಜತೆಗೆ ಅಭಿವೃದ್ಧಿ, ಆರ್ಥಿಕವಾಗಿಯೂ ಶ್ರೇಷ್ಠ ಭಾರತವಾಗಿ ಕಂಗೊಳಿಸುತ್ತಿದೆ.  ಪ್ರಲ್ಹಾದ ಜೋಶಿ, ಕೇಂದ್ರ ಸಚಿವ 

ಕಾಶಿ-ತಮಿಳು ಸಂಗಮಂ 2022ರಲ್ಲಿ ಕೆಲವೇ ನೂರು ಜನರನ್ನು ಒಟ್ಟುಗೂಡಿಸಿದ ಒಂದು ಸಾಂಸ್ಕೃತಿಕ ಪ್ರಯೋಗವಾಗಿ ಆರಂಭಗೊಂಡಿತು. ಇಂದು ಸಾವಿರಾರು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಂಶೋಧಕರನ್ನು ಆಕರ್ಷಿಸುವ ಒಂದು ಚಳವಳಿಯಾಗಿ ರೂಪುಗೊಂಡಿದೆ. ಇದು ದೇಶದಾದ್ಯಂತ ಭಾಷೆಗಳು, ಸಂಪ್ರದಾಯಗಳು ಮತ್ತು ಸಂಸ್ಕೃತಿಗಳನ್ನು ಬೆಸೆಯುವ ಸೇತುವೆಯಾಗಿ ಹೊರಹೊಮ್ಮಿದೆ.  ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶ ಮುಖ್ಯಮಂತ್ರಿ