ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಸದ್ಯ ರಾಮಾಯಣ ಸಿನಿಮಾ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ. ಈ ಚಿತ್ರದಲ್ಲಿ ಸಾಯಿ ಪಲ್ಲವಿ ಸೀತೆ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಸೀತೆಯಾಗಿ ಅವರ ಲುಕ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಸೀತೆ ಪಾತ್ರಕ್ಕೆ ಅವರ ಲುಕ್ ಸೂಕ್ತವಾಗಿಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಸಾಯಿ ಪಲ್ಲವಿ ಮೇಕಪ್ ಕೂಡ ಚರ್ಚೆಗೆ ಗ್ರಾಸವಾಗಿದೆ.
ವಿ ದಿ ವುಮೆನ್ ಕಾರ್ಯಕ್ರಮದಲ್ಲಿ ಪತ್ರಕರ್ತೆ ಬರ್ಖಾ ದತ್ ಜೊತೆ ಮಾತನಾಡಿದ ಸಾಯಿ ಪಲ್ಲವಿ, ಸೀತೆ ಪಾತ್ರಕ್ಕೆ ತಮ್ಮನ್ನು ಆಯ್ಕೆ ಮಾಡಿದ್ದರ ಬಗ್ಗೆ ಮತ್ತು ತಮ್ಮ ಲುಕ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರುತ್ತಿರುವ ಕಾಮೆಂಟ್‌ಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಸೀತಾ ಮಾತೆ ಹೇಗಿರಬೇಕು ಎಂಬುದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಮಾತನಾಡಿದ ಸಾಯಿ ಪಲ್ಲವಿ, ಇಂಥ ಟೀಕೆಗಳಿಂದ ಆತ್ಮವಿಶ್ವಾಸ ಕುಗ್ಗಬಾರದು ಎಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಡೆಯುವ ಚರ್ಚೆಗಳು ನನಗೆ ಗೊತ್ತು. ಸೀತಾ ಮಾತೆ ಎಷ್ಟು ಸುಂದರವಾಗಿರಬೇಕು ಅನ್ನೋ ಕಾಮೆಂಟ್‌ಗಳನ್ನು ನೋಡಿದ್ದೇನೆ. ಆದರೆ, ಇಂಥ ಮಾತುಗಳಿಂದ ನಿಮ್ಮ ಆತ್ಮವಿಶ್ವಾಸ ಕಡಿಮೆಯಾದರೆ, ಸಮಸ್ಯೆ ನಿಮ್ಮಲ್ಲೇ ಇದೆ ಎಂದರ್ಥ.
ನಿಮ್ಮನ್ನು ನೀವೇ ಮಾನಸಿಕವಾಗಿ ಗಟ್ಟಿ ಮಾಡಿಕೊಳ್ಳಬೇಕು ಎಂದಿದ್ದಾರೆ. ಪ್ರತಿಯೊಬ್ಬರಿಗೂ ಅವರದೇ ಆದ ಅಭಿಪ್ರಾಯ ಇರುತ್ತೆ. ಆದರೆ, ಬೇರೆಯವರ ಅಭಿಪ್ರಾಯಗಳಿಂದ ನಮ್ಮ ಆತ್ಮವಿಶ್ವಾಸ ಹಾಳಾಗಬಾರದು. ನಮ್ಮೊಳಗೆ ಆತ್ಮವಿಶ್ವಾಸ ಮತ್ತು ಧೈರ್ಯ ಇದ್ರೆ ಪ್ರಪಂಚದ ಟೀಕೆಗಳನ್ನು ಎದುರಿಸಬಹುದು ಎಂದಿದ್ದಾರೆ.
ಸೀತೆ ಪಾತ್ರದಲ್ಲಿ ನಟಿಸಿದ ಮೇಲೆ ನಿಮ್ಮ ಜೀವನದಲ್ಲಿ ಏನಾದ್ರೂ ಬದಲಾವಣೆ ಆಗಿದ್ಯಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಸಾಯಿ ಪಲ್ಲವಿ, ಪ್ರತಿಯೊಂದು ಸಿನಿಮಾದ ಪಾತ್ರವೂ ಕಲಾವಿದರ ಮೇಲೆ ಒಂದಲ್ಲ ಒಂದು ರೀತಿ ಪ್ರಭಾವ ಬೀರುತ್ತೆ ಎಂದಿದ್ದಾರೆ. ನನ್ನ ಜೀವನ ಯಾವತ್ತೂ ಒಂದು ಸಿನಿಮಾದಿಂದ ಇನ್ನೊಂದು ಸಿನಿಮಾಗೆ ಹೋಗುವ ಪಯಣವಾಗಿದೆ. ಪ್ರತಿ ಪಾತ್ರವೂ ನಿಮ್ಮೊಳಗೆ ಕೆಲವು ಬದಲಾವಣೆಗಳನ್ನು ತರುತ್ತೆ. ಆ ಪಾತ್ರದ ಒಂದು ಸಣ್ಣ ಭಾಗವನ್ನು ನಿಮ್ಮ ಹೃದಯದಲ್ಲಿ ಇಟ್ಟುಕೊಂಡಿರುತ್ತೀರಾ. ನನ್ನಲ್ಲೂ ಕೆಲವು ಬದಲಾವಣೆಗಳಾಗಿವೆ. ಆದರೆ, ಅವೆಲ್ಲವೂ ವೈಯಕ್ತಿಕ ಎಂದಿದ್ದಾರೆ.
ನನ್ನ ಸಿನಿಮಾ ಜರ್ನಿಯ ಆರಂಭದಲ್ಲಿ ನನ್ನ ಲುಕ್ ಬಗ್ಗೆ ನನಗೂ ಇನ್ಸೆಕ್ಯೂರಿಟಿ ಇತ್ತು. ಆದರೆ, ದಿನ ಕಳೆದಂತೆ ಪ್ರೇಕ್ಷಕರಿಗೂ ಕಲಾವಿದರಿಗೂ ಮಧ್ಯೆ ಒಂಥರಾ ಕನೆಕ್ಷನ್ ಇರುತ್ತೆ ಅನ್ನೋದು ಅರ್ಥ ಆಯ್ತು. ವೀಕ್ಷಕರು ರಿಯಲ್ ಆಗಿರೋದನ್ನ ನೋಡಲು ಇಷ್ಟಪಡ್ತಾರೆ. ಅದಕ್ಕಾಗಿಯೇ ರಿಯಲ್ ಸನ್ನಿವೇಶಗಳಲ್ಲಿ ಬದುಕುವ ರಿಯಲ್ ಮಹಿಳೆಯರ ಪಾತ್ರಗಳನ್ನು ಆರಿಸಿಕೊಂಡೆ ಎಂದಿದ್ದಾರೆ.
ಮುಖಕ್ಕೆ ಫೌಂಡೇಶನ್ ಅಥವಾ ಕನ್ಸೀಲರ್ ಹಚ್ಚಿದಾಗ ಬೇರೆ ವ್ಯಕ್ತಿಯಂತೆ ಕಾಣುವ ಫೀಲ್ ಬರುತ್ತೆ. ಅದಕ್ಕೆ ನ್ಯಾಚುರಲ್ ಲುಕ್‌ನಲ್ಲೇ ಇರಲು ಇಷ್ಟಪಡುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: Ramayana Movieಯಂತೆ ಫಟಾಫಟ್ ಸಾವಿರ ಕೋಟಿ ಬಾಚಿದ 8 ಸಿನಿಮಾ ಇವೇ ನೋಡಿ: ಕನ್ನಡದ್ದು ಎಷ್ಟಿವೆ ಗೊತ್ತಾ?
ಇದನ್ನೂ ಓದಿ: Sai Pallavi: ಸಾಯಿ ಪಲ್ಲವಿ ಕಣ್ಣಲ್ಲಿ ನೀರು ತರಿಸಿತ್ತು ಆ ಒಂದು ಘಟನೆ! ರಾಮಾಯಣ ಸೆಟ್‌ನಲ್ಲಿ ನಡೆದಿದ್ದೇನು?

