ಬೆಂಗಳೂರು: ‘ಎನ್‌ಡಿಎ ಸರ್ಕಾರವು ತರಲು ಹೊರಟಿರುವ ಕ್ಷೇತ್ರ ಮರುವಿಂಗಡಣೆ ಮಸೂದೆಯಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗಲಿದೆ. ಈ ಬಗ್ಗೆ ಚರ್ಚಿಸಲು ಭಾನುವಾರ (ನ. 29) ದೆಹಲಿಯಲ್ಲಿ ಸಭೆ ನಡೆಯಲಿದೆ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕೇಂದ್ರದ ಮಸೂದೆಯ ಪ್ರತಿ ಸಿಕ್ಕಾಗಲಷ್ಟೇ ಎಷ್ಟು ಅನ್ಯಾಯವಾಗಲಿದೆ ಎಂಬುದು ಗೊತ್ತಾಗಲಿದೆ. ಮಸೂದೆಯ ಬಗ್ಗೆ ಸಮಾಲೋಚನೆ ನಡೆಸಲಿರುವ ಸಭೆಯಲ್ಲಿ ಮುಖ್ಯಮಂತ್ರಿಗಳಾದ ತೆಲಂಗಾಣದ ರೇವಂತ ರೆಡ್ಡಿ ಮತ್ತು ಕೇರಳಂನ ವಿ.ಡಿ.ಸತೀಶನ್‌ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

‘ದಕ್ಷಿಣ ಭಾರತದ ರಾಜ್ಯಗಳು ದೇಶದ ಆರ್ಥಿಕತೆಗೆ ಶಕ್ತಿ ತುಂಬುತ್ತಿವೆ. ಆದರೆ, ಎನ್‌ಡಿಎ ಸರ್ಕಾರವು ದಕ್ಷಿಣದ ರಾಜ್ಯಗಳಿಗೇ ಅನ್ಯಾಯ ಮಾಡುತ್ತಿದೆ. ಒಮ್ಮೆ ಮಸೂದೆ ಬಿದ್ದುಹೋದ ನಂತರ ಸರ್ವಪಕ್ಷ ಸಭೆ ಕರೆದು ಚರ್ಚಿಸುವ ಕೆಲಸ ಮಾಡಬೇಕಿತ್ತು. ಆದರೆ ಅದು ಯಾವುದನ್ನೂ ಮಾಡದೆ, ಮತ್ತೆ ಮಸೂದೆ ಮಂಡನೆಗೆ ಸಿದ್ಧತೆ ಮಾಡಿಕೊಂಡಿದೆ’ ಎಂದು ದೂರಿದರು.

‘ಮಹಿಳಾ ಮೀಸಲಾತಿ ಮಸೂದೆ ಈಗಾಗಲೇ ಅಂಗೀಕಾರವಾಗಿದೆ. ಆದರೆ, ಅದರ ನೆಪದಲ್ಲಿ ಕ್ಷೇತ್ರ ಮರುವಿಂಗಡಣೆ ಮಸೂದೆ ತರಲಾಗುತ್ತಿದೆ. ನಮ್ಮ ವಿರೋಧ ಇರುವುದು ಕ್ಷೇತ್ರ ಮರುವಿಂಗಡಣೆ ಮಸೂದೆಗೇ ಹೊರತು ಮಹಿಳಾ ಮೀಸಲಾತಿಗಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.