ಬೆಂಗಳೂರು: ‘ಒಂದೂವರೆ ವರ್ಷದ ಮಗುವಿಗೆ ಅರಿವಳಿಕೆ ನೀಡುವಲ್ಲಿ ಆಗಿರುವ ಲೋಪವನ್ನು ಮುಚ್ಚಿಹಾಕಲು ಕ್ಲೌಡ್‌ನೈನ್‌ ಆಸ್ಪತ್ರೆ ಯತ್ನಿಸುತ್ತಿದೆ. ಆಗಿರುವ ತಪ್ಪನ್ನು ಸರಿಪಡಿಸದೇ ಇದ್ದರೆ, ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಕ್ಲೌಡ್‌ನೈನ್‌ ಆಸ್ಪತ್ರೆ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದರು.

ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ಆಸ್ಪತ್ರೆಯ ನಾಗರಬಾವಿ ಶಾಖೆಯಲ್ಲಿ ಈಚೆಗೆ ಕಿವಿನೋವಿನ ಚಿಕಿತ್ಸೆಗೆಂದು ದಾಖಲಾಗಿದ್ದ ಮಗುವಿಗೆ ತಜ್ಞ ವೈದ್ಯರ ಅನುಪಸ್ಥಿತಿಯಲ್ಲಿ ಅರಿವಳಿಕೆ ನೀಡಿದ್ದರಿಂದಾಗಿ, ಮಗು ಕೋಮಾ ಸ್ಥಿತಿಗೆ ಹೋಗಿದೆ. ಆದರೆ, ತಮ್ಮಿಂದಾಗಿರುವ ಲೋಪವನ್ನು ಆಸ್ಪತ್ರೆಯು ಒಪ್ಪಿಕೊಳ್ಳುತ್ತಿಲ್ಲ’ ಎಂದು ಆರೋಪಿಸಿದರು.

‘ನಾಗರಬಾವಿ ಆಸ್ಪತ್ರೆಯಲ್ಲಿ ಲೋಪವಾದ ಕೂಡಲೇ ಮಗುವನ್ನು ಜಯನಗರದ ಶಾಖೆಗೆ ವರ್ಗಾಯಿಸಿದ್ದಾರೆ. ಹಲವು ದಿನಗಳ ಚಿಕಿತ್ಸೆಯ ನಂತರವೂ ಮಗು ಕೋಮಾದಿಂದ ಹೊರಬಂದಿಲ್ಲ. ಅದನ್ನು ಪ್ರಶ್ನಿಸಿದ ಮಗುವಿನ ಪೋಷಕರನ್ನು ಆಸ್ಪತ್ರೆ ಸಿಬ್ಬಂದಿ ಹೀನಾಯವಾಗಿ ನಡೆಸಿಕೊಂಡಿದ್ದಾರೆ’ ಎಂದು ಕಿಡಿಕಾರಿದರು.

‘ಭಾನುವಾರ ಸಂಜೆ ವೇಳೆಗೆ ಆಸ್ಪತ್ರೆ ಆಡಳಿತ ಮಂಡಳಿಯವರು ಮಗುವಿನ ಪೋಷಕರು ಮತ್ತು ನನ್ನನ್ನು ಭೇಟಿ ಮಾಡಿ, ತಪ್ಪನ್ನು ಒಪ್ಪಿಕೊಳ್ಳಬೇಕು. ಇಲ್ಲದಿದ್ದಲ್ಲಿ ಆಸ್ಪತ್ರೆ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡುತ್ತೇವೆ. ಅದಕ್ಕಾಗಿ ಸಿದ್ದತೆ ಮಾಡಿಕೊಳ್ಳಲಾಗಿದೆ’ ಎಂದು ತಿಳಿಸಿದರು.