ಮಂಗಳೂರು: ‘ಯಾವ ಸಮಾಜದಲ್ಲಿ ಸಂವಾದ ನಿಂತು ಹೋಗುತ್ತದೆಯೋ ಅಲ್ಲಿ ಸರ್ವಾಧಿಕಾರ ಉದಯವಾಗುತ್ತದೆ. ಶ್ರೇಷ್ಠತೆಯ ವ್ಯಸನಗಳು ಹುಟ್ಟುತ್ತವೆ. ಜ್ಞಾನ, ವಿಶ್ವ ವಿದ್ಯಾಲಯಗಳು, ಧರ್ಮಗಳು, ಕಲೆಗಳೆಲ್ಲವೂ ಕುಬ್ಜವಾಗುತ್ತವೆ. ಸಂವಾದ ಸಂಸ್ಕೃತಿಯನ್ನು ಕಳೆದುಕೊಳ್ಳುವುದೇ ದೊಡ್ಡ ಸಮಸ್ಯೆ. ಮಾತುಕತೆಯೇ ಸಾಧ್ಯವಿಲ್ಲದ, ಸಂವಾದ ಸೋತ ಭಾರತವನ್ನು ನಾವು ಕಾಣುತ್ತಿದ್ದೇವೆ. ಸಂಪರ್ಕ ಸಾಧನಗಳು ಸುಲಭವಾಗಿ ಲಭಿಸುವ ಕಾಲದಲ್ಲಿ ಸಂವಾದ ಕಡಿದು ಬಿದ್ದಿರುವುದು ಬೇಸರದ ಸಂಗತಿ’ ಎಂದು ಸಾಹಿತಿ ರಹಮತ್ ತರೀಕೆರೆ ಅಭಿಪ್ರಾಯಪಟ್ಟರು.
ಅಭಿಮತ ಮಂಗಳೂರು ಮತ್ತು ಭಗತ್ ಸಿಂಗ್ ಮೆಮೊರಿಯಲ್ ಕಲ್ಚರಲ್ ಟ್ರಸ್ಟ್ ಆಶ್ರಯದಲ್ಲಿ ಇಲ್ಲಿ ಹಮ್ಮಿಕೊಂಡಿರುವ ‘ಜನನುಡಿ–2026: ಯುವಜನ ರಾಜಕಾರಣ, ದಿಕ್ಕು– ಭವಿಷ್ಯ– ಸವಾಲು’ ಕುರಿತ ಎರಡು ದಿನಗಳ ಸಮ್ಮೇಳನವನ್ನು ಉದ್ಘಾಟಿಸಿ ಅವರು ಶನಿವಾರ ಮಾತನಾಡಿದರು.
‘ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಚಳವಳಿಯ ಹಿಂದೆ ಜಾಲತಾಣಗಳ ಹಾಗೂ ತಂತ್ರಜ್ಞಾನದ ಸಹಾಯ ಇದೆ. ಆದರೆ ಇದೇ ಜಾಲತಾಣಗಳು, ಇದೇ ತಂತ್ರಜ್ಞಾನಗಳು ದ್ವೇಷವನ್ನು ಹರಡುವ ಸಂಸ್ಕೃತಿಯನ್ನು ಕೂಡ ಸೃಷ್ಟಿಸಿವೆ. ದ್ವೇಷ ಹರಡುವ ಗ್ಯಾಂಗ್ಗಳು ಎಲ್ಲ ಧರ್ಮಗಳಲ್ಲೂ ಇವೆ. ಅರೆ ತಿಳಿವಳಿಕೆಯ, ಜ್ಞಾನವಿರೋಧಿಯಾದ, ಸಹನೆ ಇಲ್ಲದ ಇಂತಹ ಜೆನ್-ಜಿ ತಲೆಮಾರುಗಳಿಗೆ ಸಂವಾದವಾಗಲೀ ಸಂಬಂಧವಾಗಲೀ ಬೇಕಾಗಿಲ್ಲ. ತಮ್ಮ ಸಿದ್ಧಾಂತ, ತಮ್ಮ ಧರ್ಮವೇ ಬಹಳ ಮುಖ್ಯ. ಮುಖರಹಿತವಾಗಿ, ನಕಲಿ ಗುರುತು ಬಳಸಿ ಯುದ್ಧ ಮಾಡುವ ಸೌಲಭ್ಯವೂ ಅವುಗಳ ಮುಂದಿದೆ. ಇದರಿಂದಾಗಿ ಮನಸ್ಸು, ಆಲೋಚನಾ ಕ್ರಮ, ಭಾಷೆ ಅತ್ಯಂತ ಮಲಿನವಾಗಿದೆ. ಕೊಳಕು ಭಾಷೆಯನ್ನು ಪ್ರವಾಹದ ರೀತಿ ಜಾಲತಾಣಗಳಲ್ಲಿ ಹರಿಯ ಬಿಡಲಾಗುತ್ತಿದೆ. ತನ್ನ ಎಲ್ಲ ಆರ್ಥಿಕ ಪ್ರಗತಿ ಮತ್ತು ಬಿಕ್ಕಟ್ಟುಗಳ ಜೊತೆಗೆ ಭಾರತವು ಸಂವಾದವೇ ಸಾಧ್ಯವಿಲ್ಲದ ಈ ಭಾಷಿಕ, ಸೈದ್ಧಾಂತಿಕ ಮತ್ತು ಮನಸ್ಸಿನ ಮಾಲಿನ್ಯದ ಜೊತೆಗೆ ಹೋರಾಡಬೇಕಿದೆ. ಇದು ತುಂಬಾ ಕಷ್ಟ' ಎಂದರು.
'ನಮ್ಮ ಸಮಾಜಗಳಲ್ಲಿ, ಧರ್ಮಗಳಲ್ಲಿ ಆತ್ಮವಿಮರ್ಶೆಯ ಭಾವ ಕಡಿಮೆಯಾಗುತ್ತಿದೆ. ದ್ವೇಷ ಹರಡುವಿಕೆಯ ಬಲಿಪಶುಗಳು ಮುಸಲ್ಮಾನರು. ಬಲಿಪಶು ಭಾವವು ಅವರಲ್ಲಿ ಆರೋಗ್ಯಕರ ಸಿದ್ಧಾಂತಗಳ ಜೊತೆಗೆ ಸಂವಾದ ನಡೆಸಲು ದೊಡ್ಡ ನೆಗೆತವನ್ನು ಕೊಡಬೇಕಿತ್ತು. ಆತ್ಮವಿಮರ್ಶೆಗೆ ಪ್ರೇರೇಪಣೆ ನೀಡಬೇಕಿತ್ತು. ಮುಸ್ಲಿಮರಲ್ಲೂ ಒಂದು ವರ್ಗ ಆತ್ಮವಿಮರ್ಶೆಯಿಂದ ವಿಮುಖವಾಗಿದೆ. ಮಹಿಳೆಯರಲ್ಲಿ ಒಂದು ಧ್ವನಿ, ಅಭಿಪ್ರಾಯ, ದೃಷ್ಟಿಕೋನ ಇದೆ. ಆದರೆ, ಮಹಿಳೆಯರ ಸಮಸ್ಯೆ ಬಗ್ಗೆ ಮಹಿಳೆಯರು ಮಾತನಾಡುವುದಿಲ್ಲ. ಅವರ ಪರವಾಗಿ ಗಂಡಸರೇ ಮಾತನಾಡಬೇಕಾದ ಸ್ಥಿತಿ ಇದೆ’ ಎಂದರು
‘ಧರ್ಮದ್ವೇಷದ ಹೆಸರಿನಲ್ಲಿ ರಾಜಕೀಯ ನಡೆಯುತ್ತಿರುವ ಸಂದರ್ಭದಲ್ಲೂ ದೇಶದ ಎಲ್ಲ ಧಾರ್ಮಿಕ ಸಮುದಾಯಗಳು ಒಟ್ಟಿಗೆ ಸಾಗುವ ಭಾರತ ಕಟ್ಟಲು ಸಾಧ್ಯ ಇದೆ ಎಂಬ ದೊಡ್ಡ ವಿವೇಕವನ್ನು ಯುವಜನರು ತೋರಿಸಿದ್ದಾರೆ. ಇದಕ್ಕೆ ಹೆಣ್ಣು ಮಕ್ಕಳು ತಮ್ಮ ಚಿಂತನೆಯನ್ನು ಧಾರೆ ಎರೆದು ಧ್ವನಿಗೂಡಿಸಿದ್ದಾರೆ. ಪರೀಕ್ಷೆಯ ಅವಾಂತರಗಳಿಂದ ಶುರುವಾದ ಈ ಹೋರಾಟವನ್ನು, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಸೇರಿದಂತೆ ಅನೇಕ ವಿಚಾರಗಳಿಗೆ ವಿಸ್ತರಿಸಿ ಪ್ರಭುತ್ವ ಬದಲಾವಣೆಗೆ ಒತ್ತಾಯಿಸುವ ಮಟ್ಟಕ್ಕೆ ಬೆಳೆಸಿದ್ದಾರೆ. ಇಂತಹ ಒಂದು ಶಕ್ತಿಯನ್ನು, ಚೈತನ್ಯವನ್ನು, ಕಸುವನ್ನು ಪ್ರಕಟಿಸಿರುವ ಈ ಹೊಸ ತಲೆಮಾರಿನ ಜೊತೆಗೆ ನಮ್ಮ ತಲೆಮಾರಿನವರು, ನಮಗೆ ವಯಸ್ಸಾಗಿದೆ, ಅನುಭವ ಇದೆ, ತಿಳಿವಳಿಕೆ ಇದೆ ಎಂಬ ಅಹಂ ಬಿಟ್ಟು ಕೈಜೋಡಿಸಬೇಕಿದೆ’ ಎಂದರು.
‘ಜಗತ್ತಿನಲ್ಲಿ ದೊಡ್ಡ ವಿದ್ಯಮಾನಗಳು ಸಣ್ಣ ಸಣ್ಣ ಸಂಗತಿಗಳಿಂದಲೇ ಶುರುವಾಗಿ ಕ್ರಮೇಣ ದೊಡ್ಡ ಪ್ರವಾಹವಾಗಿ ಹರಿದಿವೆ. ಒಂದು ಪ್ರವಾಹವಾಗಿ ಹೊಮ್ಮಿರುವ ಈ ಹೊಸ ತಲೆಮಾರಿನ ರಾಜಕೀಯ ಪ್ರಜ್ಞೆಯನ್ನು, ಭಾರತೀಯ ಪರಿಕಲ್ಪನೆಯನ್ನು ಸರಿದಾರಿಯಲ್ಲಿ ಒಯ್ಯುವುದು ಹೇಗೆ, ಈ ಪ್ರವಾಹವನ್ನು ಗದ್ದೆಗಳಿಗೆ ಹರಿಸಿ ಹೊಸ ಬೆಳೆಯನ್ನು ಬೆಳೆಯುವುದು ಹೇಗೆ, ಸಂಭ್ರಮ ಮತ್ತು ಸಿನಿಕತೆ ಇಲ್ಲದೆಯೇ ಇವರ ಜೊತೆಗೆ ಕೈಜೋಡಿಸುವುದು ಹೇಗೆ ಎಂಬುದು ನಮ್ಮ ಮುಂದಿರುವ ಸವಾಲು. ಇಂತಹ ಸಂವಾದಕ್ಕಾಗಿ, ಹೊಸ ಭಾಷೆ, ಹೊಸ ನುಡಿಗಟ್ಟನ್ನು, ಹೊಸ ಸಿದ್ಧಾಂತಗಳನ್ನು, ಹೊಸ ತಾತ್ವಿಕ ವಿವೇಕವನ್ನು ಕಂಡು ಕೊಳ್ಳಬೇಕಾಗಿದೆ. ಇದಕ್ಕೆ ಜನನುಡಿ ವೇದಿಕೆಯಾಗಲಿ’ ಎಂದು ಅವರು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಮೂಡ್ನಾಕೋಡು ಚಿನ್ನಸ್ವಾಮಿ, ‘ಎಲ್ಲರೂ ಸಮಾನಾಗಿ ಬೆಳೆಯುವ ಅವಕಾಶವನ್ನು ಮತ್ತು ಸ್ವಾತಂತ್ರ್ಯವನ್ನು ವಿರೋಧಿಸಿದ ಜನರ ಕೈಯಲ್ಲಿ ಸಿಲುಕಿ ಸಂವಿಧಾನ ನರಳುತ್ತಿದೆ. ಎಲ್ಲರಿಗೂ ಸಮಾನ ಘನತೆ, ಅವಕಾಶ ಸಮಾನ ನ್ಯಾಯ ಒದಗಿಸಿದರೆ, ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆ ಕಾಪಾಡಿದರೆ ಮಾತ್ರ ನಮ್ಮ ಪ್ರಜಾಪ್ರಭುತ್ವಕ್ಕೆ ಅರ್ಥಬರುತ್ತದೆ. ನಮ್ಮಲ್ಲಿ ಸಾಂವಿಧಾನಿಕ ನೈತಿಕತೆ ಇದೆಯೇ. ಸ್ವಾಯತ್ತ ಸಂಸ್ಥೆಗಳು, ನ್ಯಾಯಾಂಗ, ಮಾಧ್ಯಮ ಸ್ವತಂತ್ರವಾಗಿಲ್ಲ. ಇದು ಯಾವುದೂ ಇಲ್ಲದಿರುವಾಗ ಪ್ರಜಾಪ್ರಭುತ್ವ ಎಲ್ಲಿದೆ’ ಎಂದು ಪ್ರಶ್ನಿಸಿದರು.
‘ಕೇಂದ್ರ ಸರ್ಕಾರ ಚುನಾವಣಾ ಆಯೋಗವನ್ನು ಕಬ್ಜ ಮಾಡಿದೆ. 2023ರಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ಆಯೋಗವನ್ನು ರಚಿಸುವ ಸಮಿತಿಯಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರನ್ನೆ ಕಿತ್ತು ಹಾಕಿದ್ದನ್ನು ಫ್ಯಾಸಿಸಂ ಎನ್ನದೇ ಬೇರೆ ಏನು ಹೇಳಲು ಸಾಧ್ಯ’ ಎಂದರು.
‘ಹೊಸ ಇತಿಹಾಸಕಾರರು ಸೃಷ್ಟಿಯಾಗಿದ್ದು, ಅವರು ಹೊಸ ಸುಳ್ಳುಗಳನ್ನು ಬರೆಯುತ್ತಿದ್ದಾರೆ. 900 ವರ್ಷ ಆಳಿದ ಮೊಗಲರ ಹೆಸರೇ ಇತಿಹಾಸದ ಪಠ್ಯದಲ್ಲಿಲ್ಲ. ಇವೆಲ್ಲ ಬಹಳ ಕಾಲ ನಿಲ್ಲುತ್ತದೆ ಅನಿಸುವುದಿಲ್ಲ. ವಿಶ್ವವಿದ್ಯಾಲಯಗಳಲ್ಲಿ, ಉನ್ನತ ಶಿಕ್ಷಣದಲ್ಲಿ ತಮ್ಮ ಹಿಂದುತ್ವದ ಕಾರ್ಯಸೂಚಿ ತುರುಕಿದ್ದಾರೆ. ಎನ್ಸಿಆರ್ಟಿಯ ಪಠ್ಯಗಳನ್ನು ಸುಳ್ಳುಗಳಿಂದ ಮುಕ್ತಗೊಳಿಸುವುದು ದೊಡ್ಡ ಸವಾಲು’ ಎಂದರು.
ದೇಶದಲ್ಲಿ ಜಾತಿ ಪೂರ್ವಗ್ರಹ ಇಲ್ಲದೇ ಏನೂ ನಡೆಯದು. ಜೆನ್ಜಿ ಸಮುದಾಯದಲ್ಲಿ ಜಾತಿ ವ್ಯವಸ್ಥೆ ಸಡಿಲ ಆಗಿದೆ. ಇದು ಬದಲಾವಣೆ ಗಾಳಿ ಬೀಸುತ್ತಿರುವುದಕ್ಕೆ ಉದಾಹರಣೆ ಎಂದರು.
ವಿಚಾರವಾದಿ ಪ್ರೊ.ನರೇಂದ್ರ ನಾಯಕ್, ಸಾಮಾಜಿಕ ಕಾರ್ಯಕರ್ತರಾದ ಡಾ.ರಮೇಶ್ ಬೆಳ್ಳಂಕೊಂಡ, ಡಾ.ಅಮರ್ ಕುಮಾರ್, ಸಮುದಾಯ ಸಂಘಟನೆಯ ವಾಸುದೇವ ಉಚ್ಚಿಲ ಅವರನ್ನು ಸನ್ಮಾನಿಸಲಾಯಿತು.
ದೆಹಲಿಯ ವಿದ್ಯಾರ್ಥಿ ಚಳವಳಿಯ ಪ್ರತಿನಿಧಿ ಶರಣ್ಯಾ ವರ್ಮ, ನಿವೃತ್ತ ಐಎಎಸ್ ಅಧಿಕಾರಿ ಎ.ಬಿ.ಇಬ್ರಾಹಿಂ ಮಾತನಾಡಿದರು. ಲವಿತ್ರ ವಸ್ತ್ರದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮನೋಜ್ ವಾಮಂಜೂರು ಕಾರ್ಯಕ್ರಮ ನಿರೂಪಿಸಿದರು.

‘ಹತ್ತಿಕ್ಕಿದರೆ ಹೊಸ ರೂಪ ಪಡೆಯಲಿದೆ ಪ್ರತಿರೋಧ’
‘ಸರ್ಕಾರಗಳು ಬರುತ್ತವೆ ಹೋಗುತ್ತವೆ. ಭಿನ್ನ ಧ್ವನಿಗಳನ್ನು ಹತ್ತಿಕ್ಕುವ ಇತಿಹಾಸವನ್ನು ಅಳಿಸಿ ಹಾಕುವ ಪ್ರಜಾಸತ್ತಾತ್ಮಕ ಜಾಗಗಳನ್ನು ನಿರ್ಬಂಧಿಸುವ ಅಧಿಕಾರಸ್ಥರನ್ನು ಪ್ರಶ್ನಿಸುವವರ ಉತ್ಸಾಹಕ್ಕೆ ತಣ್ಣೀರೆರಚುವ ಪ್ರಯತ್ನಗಳು ಸದಾ ನಡೆಯುತ್ತವೆ. ಆದರೆ ಪ್ರತಿರೋಧ ಹತ್ತಿಕ್ಕಿದ ಮಾತ್ರಕ್ಕೆ ಅದು ಕಣ್ಮರೆ ಆಗುವುದಿಲ್ಲ. ಅದು ಹೊಸ ರೂಪಗಳನ್ನು ಕಂಡುಕೊಳ್ಳುತ್ತದೆ. ಹೊಸ ಧ್ವನಿಗಳನ್ನು ಕಂಡುಕೊಳ್ಳುತ್ತದೆ. ಹೊಸ ತಲೆಮಾರುಗಳಲ್ಲಿ ಮತ್ತೆ ಜೀವಂತವಾಗುತ್ತದೆ ಎಂಬುದನ್ನು ದೇಶದ ಇತಿಹಾಸ ಮತ್ತೆ ಮತ್ತೆ ಸಾಬೀತು ಪಡಿಸುತ್ತಲೇ ಬಂದಿದೆ. ಪ್ರತಿರೋಧದ ಹೂವುಗಳನ್ನು ಕತ್ತರಿಸಲು ಪ್ರಯತ್ನಿಸಬಹುದು. ಆದರೆ ವಸಂತ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಹೂವುಗಳು ಹಿಂದೆಯೂ ಅರಳಿವೆ ಇಂದು ಅರಳುತ್ತಿವೆ ಮುಂದೆಯೂ ಅರಳುತ್ತಲೇ ಇರುತ್ತವೆ’ ಎಂದು ದೆಹಲಿಯ ವಿದ್ಯಾರ್ಥಿ ಚಳವಳಿಯ ಪ್ರತಿನಿಧಿ ಶರಣ್ಯಾ ವರ್ಮ ಹೇಳಿದರು.
‘ಈ ದೇಶದ ಮಣ್ಣಿನಲ್ಲಿ ಭಗತ್ ಸಿಂಗ್ ಮತ್ತು ಅವರ ಸಹಚರರು ಹಲವು ತಲೆಮಾರುಗಳ ಕ್ರಾಂತಿಕಾರಿಗಳು ಸ್ವಾತಂತ್ರ್ಯ ಹೋರಾಟಗಾರರು ಸಾಮಾಜಿಕ ಸುಧಾರಕರು ಮತ್ತು ವಿಭಿನ್ನ ಹಾಗೂ ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯವಿದೆ ಎಂದು ನಂಬಿದ್ದವರು ಪ್ರತಿರೋಧದ ಬೀಜ ಬಿತ್ತಿದ್ದಾರೆ. ಆ ಬೀಜದಿಂದ ಸಸಿ ಬೆಳೆಯುತ್ತಲೇ ಬಂದಿದೆ. ಅವುಗಳಿಂದ ಹೂವುಗಳು ಅರಳುವುದನ್ನು ಇತಿಹಾಸದ ಹಾದಿಯಲ್ಲಿ ನೋಡಿದ್ದೇವೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ವಿರುದ್ಧದ ಚಳವಳಿಯಲ್ಲಿ ಎಸ್ಐಆರ್ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗಾಗಿ ನಡೆಯುತ್ತಿರುವ ಹೋರಾಟಗಳಲ್ಲಿ ಅವುಗಳನ್ನು ನೋಡುತ್ತಿದ್ದೇವೆ. ಒಂದೇ ಬೀಜದಿಂದ ಬೆಳೆದ ವಿಭಿನ್ನ ಹೋರಾಟಗಳೇ ನಮಗೆ ಭರವಸೆ ತುಂಬುತ್ತಿವೆ’ ಎಂದು ಅವರು ಹೇಳಿದರು.

