ಬೆಂಗಳೂರು/ಕನಕಪುರ: ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪರಸ್ಪರ ಟೀಕಾಪ್ರಹಾರ ನಡೆಸಿಕೊಂಡಿದ್ದಾರೆ.

'ಯಾರ ಆಸ್ತಿ ಲೂಟಿ ಮಾಡಿದ್ದೇನೆ?'

ಕನಕಪುರ: 'ಕೆಲವರು ನನ್ನನ್ನು ಬಂಡೆ ಲೂಟಿ ಮಾಡಿಬಿಟ್ಟ, ಭೂಮಿ ಕಿತ್ತುಕೊಳ್ಳುತ್ತಿದ್ದಾನೆ ಎಂದರು. ನಾನು ಯಾರ ಜೇಬಿಗಾದರೂ ಕೈ ಹಾಕಿದ್ದೀನಾ? ಅದ್ಯಾರೋ ಹೊರ ಜಿಲ್ಲೆಯವನು ಬಂದು, ನಾನು ರಿಯಲ್ ಎಸ್ಟೇಟ್ ಮಾಡುತ್ತಿದ್ದೇನೆ ಎಂದು ಆರೋಪಿಸಿದ್ದಾನೆ. ನಾನು ಯಾರ ಬಳಿಯಾದರೂ ಭೂಮಿ ವ್ಯವಹಾರ ಮಾಡಿದ್ದೀನಾ? ಯಾರ ಆಸ್ತಿಯನ್ನಾದರೂ ಲೂಟಿ ಮಾಡಿದ್ದೀನಾ?'

ಕನಕಪುರದಲ್ಲಿ ಮಾತನಾಡಿದ ಶಿವಕುಮಾರ್, ಕುಮಾರಸ್ವಾಮಿ ಹೆಸರು ಹೇಳದೇ ಮೇಲಿನಂತೆ ಪ್ರತಿಕ್ರಿಯಿಸಿದರು. 'ಹೊರಜಿಲ್ಲೆಯಿಂದ ಇಲ್ಲಿಗೆ ಬಂದಿರುವವರು, ಇಲ್ಲಿನ ಜನರಿಗಾಗಿ ಏನು ಮಾಡಿದ್ದಾರೆ' ಎಂದು ಪ್ರಶ್ನಿಸಿದರು. 'ನನ್ನ ವಿರುದ್ಧ ಟೀಕೆ ಮಾಡುವವರು ನನ್ನೆದುರು ಬಂದು ಚುನಾವಣೆಗೆ ನಿಂತುಕೊಳ್ಳಲಿ. ಈಗಾಗಲೇ ನಿಂತು ಅವರಿಗೆ ಅನುಭವ ಆಗಿದೆ. ಈಗಲೂ ಯಾರು ಬೇಕಾದರೂ ನಿಂತುಕೊಳ್ಳಲಿ' ಎಂದು ಸವಾಲು ಹಾಕಿದರು.

'ನನ್ನ ಜನ ನೀವಿದ್ದೀರಿ. ನಾನು ಏನು ಅನ್ನೋದು ನಿಮಗೆ ತಿಳಿದಿದೆ. ಕೊಟ್ಟ ಮಾತಿನಂತೆ ನಡೆದು ಕೊಂಡಿದ್ದೇನೆ. ನಾವೆಲ್ಲರೂ ಮೂಲತಃ ಬೆಂಗಳೂರು ಜಿಲ್ಲೆಯವರು. ಅದಕ್ಕಾಗಿ ಜಿಲ್ಲೆಯ ಹೆಸರನ್ನು 'ಬೆಂಗಳೂರು ದಕ್ಷಿಣ ಜಿಲ್ಲೆ' ಎಂದು ಮರುನಾಮಕರಣ ಮಾಡಲಾಯಿತು. ಈಗ ಭೂಮಿಗೆ ಒಳ್ಳೆಯ ಬೆಲೆ ಬಂದಿದೆ' ಎಂದರು.

ಜಾತಿ ಮೇಲೆ ನಂಬಿಕೆ ಇಲ್ಲ: 'ನನಗೆ ಜಾತಿ ಮೇಲೆ ನಂಬಿಕೆ ಇಲ್ಲ. ನನ್ನದು ಮಾನವ ಜಾತಿ. ಹಿಂದೆ ತಾಲ್ಲೂಕಿನಲ್ಲಿ ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾಗಿದ್ದ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯ ಅಭ್ಯರ್ಥಿಯನ್ನು ನಿಲ್ಲಿಸಿ ಗೆಲ್ಲಿಸಿದ್ದೆ. ಆಗ ಎಲ್ಲರೂ ಟೀಕಿಸಿದ್ದರು. ಆಗ ಸಿ.ಎಂ ಆಗಿದ್ದ ಎಚ್.ಡಿ. ಕುಮಾರಸ್ವಾಮಿ ಚುನಾವಣೆಯನ್ನೇ ನಿಲ್ಲಿಸಲು ಯತ್ನಿಸಿದ್ದರು. ಯಾವ ಟೀಕೆಗೂ ಜಗ್ಗದೆ ಚುನಾವಣೆ ಮಾಡಿ, ವೈರಮುಡಿ ಎಂಬಾತನನು ಗೆಲಿಸಿದೆ. ನಂತರ ಜಿ.ಪಂ ಅದ.ಕನನಾಗಿಯೂ ಮಾಡಿದೆ' ಎಂದು ನೆನಪಿಸಿಕೊಂಡರು.

'ಜಮೀನು ನೋಡಲು ಹೋಗಿರಲಿಲ್ಲವೇ?'

ಬೆಂಗಳೂರು: ಅವರು ಇತ್ತೀಚೆಗೆ ಸೋಂಪುರ ಬಳಿ ತಡರಾತ್ರಿಯಲ್ಲಿ 150 ಎಕರೆ ಜಮೀನು ನೋಡಲು ಹೋಗಿದ್ದರು. ಆಗ ಹಳ್ಳಿಯ ಜನ, ಯಾರೋ ಕಳ್ಳರು ಬಂದಿದ್ದಾರೆಂದು ಅವರನ್ನು ಓಡಿಸಿಕೊಂಡು ಹೋಗಿದ್ದಾರೆ. ಅದು ನಿಜವೋ ಅಥವಾ ಸುಳ್ಳೋ ಎಂಬುದನ್ನು ಮುಖ್ಯಮಂತ್ರಿ ಅವರನ್ನೇ ಕೇಳಿ ಸ್ಪಷ್ಟಪಡಿಸಿಕೊಳ್ಳಿ' ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, 'ಭ್ರಷ್ಟಾಚಾರದ ಬಗ್ಗೆ ಗಮನಹರಿಸಲು ಮುಖ್ಯಮಂತ್ರಿಗೆ ಸಮಯವೇ ಇಲ್ಲ. ಆದರೆ, ಖಾಲಿ ಜಾಗ ಎಲ್ಲಿದೆ ಮತ್ತು ಸರ್ಕಾರಿ ಜಾಗ ಎಲ್ಲಿದೆ ಎಂದು ನೋಡಲು ಅವರಿಗೆ ಸಾಕಷ್ಟು ಸಮಯವಿದೆ' ಎಂದರು.

'ಮುಖ್ಯಮಂತ್ರಿ ಅವರು ರಾಜ್ಯವು ಭ್ರಷ್ಟಾಚಾರ ಮುಕ್ತವಾಗಿದೆ ಎನ್ನುತ್ತಿದ್ದಾರೆ. ಆದರೆ, ಇಲ್ಲಿ ಬೇಲಿಯೇ ಎದ್ದು ಹೊಲ ಮೇಯುತ್ತಿದೆ. 20 ಗುಂಟೆ ಜಮೀನಿಗೆ ಖಾತೆ ಮಾಡಿಕೊಡಲು ರೆವಿನ್ಯೂ ಇನ್‌ಸ್ಪೆಕ್ಟ‌ರ್ ಒಬ್ಬರು 50,000 ಲಂಚ ತೆಗೆದುಕೊಳ್ಳುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿ ದ್ದಾರೆ. ಅದು ಭ್ರಷ್ಟಾಚಾರವಾ ಅಥವಾ ಸಚಿವರೊಬ್ಬರು ಹೇಳಿದಂತೆ ಗೌರವಧನವಾ' ಎಂದರು.

ಕುಮಾರಸ್ವಾಮಿ ಅವರು ಕರ್ನಾಟಕಕ್ಕೆ, ಕನ್ನಡಕ್ಕೆ ಏನು ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಪ್ರಶ್ನಿಸಿದ್ದಾರೆ ಎಂದು ಸುದ್ದಿಗಾರರು ಹೇಳಿದಾಗ, 'ಟೊಯೋಟಾ ಕಂಪನಿಯನ್ನು ಕರ್ನಾಟಕಕ್ಕೆ ತಂದವರು ಯಾರು ಎಂಬುದು ಅವರಿಗೆ ಗೊತ್ತಿದೆಯೇ' ಎಂದು ಮರುಪ್ರಶ್ನೆ ಹಾಕಿದರು.

'ಟೊಯೋಟಾ ಘಟಕವು ಹರಿಯಾಣ ಅಥವಾ ಮಹಾರಾಷ್ಟ್ರಕ್ಕೆ ಹೋಗುತ್ತಿತ್ತು. ಆಗ ದೇವೇಗೌಡರು ಮನವಿ ಮಾಡಿ ಟೊಯೋಟಾ ಕಂಪನಿಯನ್ನು ಇಲ್ಲಿಗೆ ತಂದರು. ಆ ಘಟಕದ ಕಾಮಗಾರಿ ವೇಳೆ ಕಾಂಗ್ರೆಸ್‌ನವರು ಪೈಪೋಟಿಗೆ ಬಿದ್ದು, ಮರಳು ಮತ್ತು ಇಟ್ಟಿಗೆ ಪೂರೈಕೆ ಮಾಡಿ ದುಡ್ಡು ಮಾಡಿಕೊಂಡರು ಅಷ್ಟೆ' ಎಂದು ಟೀಕಿಸಿದರು.