ಬಸವಕಲ್ಯಾಣ (ಬೀದರ್‌ ಜಿಲ್ಲೆ): ನಗರದಲ್ಲಿ ಶನಿವಾರ ನಡೆದ 47ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಲಿಂಗಾಯತ ಪ್ರತ್ಯೇಕ ಧರ್ಮ ಬೇಡ ಎಂದಿದ್ದಕ್ಕೆ ರೋಷಗೊಂಡ ಬಸವಭಕ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಧಿಕ್ಕಾರ ಕೂಗಿ, ವೇದಿಕೆ ಏರಲು ಮುಂದಾಗಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು. 

ಎರಡು ದಿನಗಳ ಉತ್ಸವವನ್ನು ಉದ್ಘಾಟಿಸಿದ ವಿಜಯೇಂದ್ರ, ‘ಬಸವಣ್ಣನವರ ಬಗ್ಗೆ ಅವಹೇಳನ ಮಾಡಿದ ರವಿ ಹಂಜ್ ಕ್ರಮವನ್ನು ಖಂಡಿಸುತ್ತೇನೆ. ಬಸವಣ್ಣ ಮತ್ತು ಸಮಾಜದ ತಂಟೆಗೆ ಬಂದರೆ ಸುಮ್ಮನೇ ಕೂಡುವುದಿಲ್ಲ’ ಎಂದು ಹೇಳಿದಾಗ ಸಭಿಕರು ಕರತಾಡನ ಮಾಡಿದರು. 

‘ಸರ್ಕಾರಿ ಸೌಲಭ್ಯಕೋಸ್ಕರ ಪ್ರತ್ಯೇಕ ಧರ್ಮ ಎಂದು ಹೋರಾಡದೆ, ನಾವೆಲ್ಲ ಹಿಂದೂ, ನಾವೆಲ್ಲ ಒಂದು ಎಂಬ ಭಾವನೆಯಿಂದ ಒಗ್ಗಟ್ಟಾಗಿ ಇರುವುದು ಅನಿವಾರ್ಯ ಮತ್ತು ಅತ್ಯಂತ ಅವಶ್ಯವಾಗಿದೆ. ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ನನ್ನ ಅಭಿಪ್ರಾಯವನ್ನು ವೇದಿಕೆಯ ಮೂಲಕ ಪ್ರಾಮಾಣಿಕವಾಗಿ ಹೇಳಿದ್ದೇನೆ’ ಎಂದು ವಿಜಯೇಂದ್ರ ಹೇಳುತ್ತಿದ್ದಂತೆ ಬಸವ ಭಕ್ತರು ಎದ್ದು ನಿಂತು, ‘ಲಿಂಗಾಯತ ಧರ್ಮಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ’ ಎಂದು ವಿಜಯೇಂದ್ರ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪ್ರೇಕ್ಷಕರ ಸಾಲಿನಲ್ಲಿದ್ದ ಒಂದಿಬ್ಬರು ಮಠಾಧೀಶರು ಹಾಗೂ ಬಸವಪರ ಸಂಘಟನೆಗಳ ಕಾರ್ಯಕರ್ತರು ‘ನಿಮ್ಮ ಹೊಟ್ಟೆ ತುಂಬಿದೆ. ಹೀಗಾಗಿ, ನಿಮಗೆ ಸೌಲಭ್ಯ ಬೇಡ. ಬಡವರ ಮಕ್ಕಳು ಏನು ಮಾಡಬೇಕು? ಇಂಥ ಹೇಳಿಕೆ ನೀಡುವುದು ಸರಿಯಲ್ಲ’ ಎಂದು ತರಾಟೆಗೆ ತೆಗೆದುಕೊಂಡರು. ಕೆಲವರು ವೇದಿಕೆಗೆ ನುಗ್ಗಲು ಪ್ರಯತ್ನಿಸಿದರು. ಆಗ ಶಾಸಕ ಶರಣು ಸಲಗರ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಮತ್ತಿತರ ಮುಖಂಡರು ಮತ್ತು ಪೊಲೀಸರು ಅವರನ್ನು ತಡೆದರು.

ಗದ್ದಲದ ಮಧ್ಯೆಯೇ ಲಿಂಗಾಯತ ಮಠಾಧೀಶರ ಒಕ್ಕೂಟದ ರಾಜ್ಯ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ‘ನಾವೇ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರಿಂದ ಯಾರ ವಿರುದ್ಧವೂ ಘೋಷಣೆ ಕೂಗುವುದು ಬೇಡ. ಗದ್ದಲ ಮಾಡುವುದು ಸರಿಯಲ್ಲ. ಲಿಂಗಾಯತ ಧರ್ಮ ಮಾನ್ಯತೆಯ ಹೋರಾಟಕ್ಕೆ ನಾವು ಎಂದಿಗೂ ಬದ್ಧರಾಗಿದ್ದೇವೆ’ ಎಂದು ಸಮಜಾಯಿಷಿ ನೀಡಿದರಾದರೂ ಕೂಗಾಟ ನಿಲ್ಲಲಿಲ್ಲ.

ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ ಕಾರಣ ಪೊಲೀಸ್ ಅಧಿಕಾರಿಗಳು ಮತ್ತಿತರ ಮುಖಂಡರ ಸಲಹೆಯ ಮೇರೆಗೆ ವಿಜಯೇಂದ್ರ ಅವರು ವೇದಿಕೆಯಿಂದ ನಿರ್ಗಮಿಸಿದರು. ಈ ಸಂದರ್ಭದಲ್ಲಿ ಬಸವ ಭಕ್ತರು, ‘ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೆ ಜಯವಾಗಲಿ’ ಎಂದು ಘೋಷಣೆ ಕೂಗಿದರು. ಮತ್ತೆ ಕೆಲ ಯುವಕರು, ‘ವಿಜಯೇಂದ್ರ ಅವರಿಗೆ ಜಯವಾಗಲಿ, ಹಿಂದೂ ಧರ್ಮಕ್ಕೆ ಜಯವಾಗಲಿ, ಜೈಶ್ರೀರಾಮ್‌...’ ಎಂದು ಕೂಗಿದರು. ವಿಜಯೇಂದ್ರ ಹೋದ ಬಳಿಕ ಕಾರ್ಯಕ್ರಮ ಮುಂದುವರಿಯಿತು.

ತುಮಕೂರು ಶಿವಸಿದ್ಧೇಶ್ವರ ಸ್ವಾಮೀಜಿ, ಹಾರಕೂಡ ಚನ್ನವೀರ ಶಿವಾಚಾರ್ಯರು, ಇಳಕಲ್ ಗುರುಮಹಾಂತ ಸ್ವಾಮೀಜಿ, ಭಾಲ್ಕಿ ಗುರುಬಸವ ಪಟ್ಟದ್ದೇವರು, ಸಂಸದ ಸಾಗರ ಖಂಡ್ರೆ, ಶಾಸಕರಾದ ಶರಣು ಸಲಗರ, ಡಾ. ಸಿದ್ಧಲಿಂಗಪ್ಪ ಪಾಟೀಲ, ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ ಧನ್ನೂರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 

ಬಿ.ವೈ. ವಿಜಯೇಂದ್ರ ವಿರುದ್ಧ ಘೋಷಣೆ ಕೂಗಿದ ಬಸವ ಭಕ್ತರು
ಕಾರ್ಯಕ್ರಮದ ಸ್ಥಳದಿಂದ ಬಿ.ವೈ. ವಿಜಯೇಂದ್ರ ಅವರನ್ನು ಪೊಲೀಸ್‌ ಭದ್ರತೆಯಲ್ಲಿ ಬೇರೆಡೆ ಕರೆದುಕೊಂಡು ಹೋಗಲಾಯಿತು
ಬಸವಕಲ್ಯಾಣದಲ್ಲಿ ನಡೆದ ಅನುಭವ ಮಂಟಪ ಉತ್ಸವದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನೀಡಿದ ಹೇಳಿಕೆ ವಿರೋಧಿಸಿ ವೇದಿಕೆಗೆ ನುಗ್ಗಿದ್ದ ಬಸವ ಭಕ್ತರನ್ನು ಪೊಲೀಸರು ಕೆಳಗೆ ಕಳುಹಿಸುತ್ತಿರುವುದು