ಚಿಕ್ಕಮಗಳೂರು: ಕಾಫಿ ತೋಟದ ಮಾಲೀಕನ ಮಗ ಒಂದು ಕೈನಲ್ಲಿ ಬಂದೂಕು ಹಿಡಿದು ಮತ್ತೊಂದು ಕೈನಲ್ಲಿ ರಬ್ಬರ್ ಪೈಪ್‌ನಿಂದ ಇಬ್ಬರು ವಲಸೆ ಕಾರ್ಮಿಕರ ಮೇಲೆ ಮನ ಬಂದಂತೆ ಹಲ್ಲೆ ಮಾಡಿದ್ದು, ಈ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

ಮಲ್ಲಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ಬಸಗೋಡು ಬಳಿಯ ಕಾಫಿ ತೋಟಕ್ಕೆ ತಮಿಳುನಾಡಿನಿಂದ ಬಂದಿರುವ ವಲಸೆ ಕಾರ್ಮಿಕರ ಮೇಲೆ ಶುಕ್ರವಾರ ಸಂಜೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಗುಂಪಿನಲ್ಲಿದ್ದ ಪುರುಷ ಕಾರ್ಮಿಕನ ಮೇಲೆ ಮೊದಲು ಹಲ್ಲೆ ನಡೆಸುವ ತೋಟದ ಮಾಲೀಕನ ಮಗ ಭರತ್, ನಂತರ ಕಾರ್ಮಿಕ ಮಹಿಳೆ ಮೀನಾ(28) ಎಂಬವರ ಮೇಲೆ ಹಲ್ಲೆ ನಡೆಸಿದ್ದಾನೆ. ಆ ಮಹಿಳೆ ಬಿದ್ದು ಹೊರಳಾಡಿದರೂ ಬಿಡದೆ ಹೊಡೆದಿರುವುದು ದೃಶ್ಯದಲ್ಲಿದೆ. ‘ಸಾವಿರಾರು ಜನರಿಗೆ ಅನ್ನ ಹಾಕುವ ಸಾಹುಕಾರನಿಗೆ ಚಪ್ಪಲಿ ತೋರಿಸುತ್ತೀಯಾ’ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

ನಗರದ ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ಮೀನಾ ಅವರಿಂದ ಹೇಳಿಕೆ ಪಡೆದಿರುವ ಮಲ್ಲಂದೂರು ಠಾಣೆ ಪೊಲೀಸರು, ಭರತ್‌ ಹಾಗೂ ಅವರ ಸಹೋದರ ಸತ್ಯಕೀರ್ತಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರಕುಮಾರ್ ದಯಾಮಾ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಭಟನೆ: ಕಾಫಿ ನಾಡಿನಲ್ಲಿ ಇಂತಹ ಘಟನೆ ನಡೆದಿರುವುದು ಅಮಾನವೀಯ. ಇಡೀ ಕಾಫಿ ಉದ್ಯಮ ವಲಸೆ ಕಾರ್ಮಿಕರ ಮೇಲೆ ನಿಂತಿದೆ. ಈ ಹಲ್ಲೆ ಖಂಡಿಸಿ ಭಾನುವಾರ ಚಿಕ್ಕಮಗಳೂರು ನಗರದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಜನಶಕ್ತಿ ಸಂಘಟನೆಯ ಕೆ.ಎಲ್.ಅಶೋಕ್ ತಿಳಿಸಿದ್ದಾರೆ.