ಬೆಂಗಳೂರು, ನವೆಂಬರ್​​ 28: ಕ್ಲೌಡ್‌ನೈನ್ ಆಸ್ಪತ್ರೆಯಲ್ಲಿ ಅನಸ್ತೇಶಿಯಾ ನೀಡಿದ ಬಳಿಕ ಮಗು ಕೋಮಾಗೆ ಜಾರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಎರಡು ತಿಂಗಳಿಂದ ಬೇಬಿ ಶಯಾನ್​ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಗುವಿನ ಆರೋಗ್ಯದ ಸ್ಥಿತಿ ಹಾಗೂ ಪ್ರಕರಣದ ನಂತರದ ಬೆಳವಣಿಗೆಗಳ ಕುರಿತು ಮಾಹಿತಿ ನೀಡಲು ಶನಿವಾರ ಕ್ಲೌಡ್‌ನೈನ್ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾ. ನಾಗನಿಶ್ಚಲ್ ಹಾಗೂ ವಕೀಲೆ ರಾಜಲಕ್ಷ್ಮಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ನಿರ್ಲಕ್ಷ್ಯ ಮತ್ತು ಚಿಕಿತ್ಸೆಯಲ್ಲಿನ ತೊಡಕು ಎರಡೂ ಬೇರೆ: ವಕೀಲೆ ರಾಜಲಕ್ಷ್ಮಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಕೀಲೆ ರಾಜಲಕ್ಷ್ಮಿ, ‘ಚಿಕಿತ್ಸೆಯಲ್ಲಿನ ನಿರ್ಲಕ್ಷ್ಯ ಮತ್ತು ವೈದ್ಯಕೀಯ ತೊಡಕು (ಕಾಂಪ್ಲಿಕೇಷನ್) ಎರಡೂ ವಿಭಿನ್ನ ವಿಚಾರಗಳಾಗಿವೆ. ರೋಗಿಯ ದೇಹ ಚಿಕಿತ್ಸೆಗೆ ಹೇಗೆ ಸ್ಪಂದಿಸುತ್ತದೆ ಎಂಬುದನ್ನು ಮೊದಲೇ ನಿರ್ಧರಿಸಲು ಸಾಧ್ಯವಿಲ್ಲ. ತುರ್ತು ವೈದ್ಯಕೀಯ ತೊಡಕುಗಳು ಕೂಡ ಎದುರಾಗಬಹುದು. ಆದರೆ ಮಾಧ್ಯಮಗಳಲ್ಲಿ ಪದೇಪದೇ ನಿರ್ಲಕ್ಷ್ಯ ಎಂಬ ಪದ ಬಳಕೆಯಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮಗು ಶಯಾನ ಕೋಮಾ ಪ್ರಕರಣ: ನಿರ್ಲಕ್ಷ್ಯ ಆರೋಪ ತಳ್ಳಿಹಾಕಿದ ಕ್ಲೌಡ್ ನೈನ್ ಆಸ್ಪತ್ರೆ

‘ವೈದ್ಯರು ಅರ್ಹತೆ ಹೊಂದಿಲ್ಲ ಎಂದು ಮಗುವಿನ ತಂದೆ ಆರೋಪಿಸಿದ್ದಾರೆ. ಆದರೆ ಅರಿವಳಿಕೆ ನೀಡಲು ಅಗತ್ಯವಾದ ಅರ್ಹತೆ ವೈದ್ಯರಿಗಿದೆ. ಕೆಲವು ಸಂದರ್ಭಗಳಲ್ಲಿ ವೈದ್ಯಕೀಯ ತೊಡಕುಗಳು ಉಂಟಾಗಬಹುದು. ತಂದೆ-ತಾಯಿಗೆ ಭಾವನಾತ್ಮಕವಾಗಿ ನೋವಾಗುವುದು ಸಹಜ. ಆದರೆ ಮಿಡಿಯಾ ಟ್ರಯಲ್ ಮಾಡುವುದು ಸರಿಯಲ್ಲ. ಸಚಿವ ಯುಟಿ ಖಾದರ್, ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿಗೆ ನಮ್ಮ ಮನವಿ ಏನು ಅಂದರೆ ಈಗಿನ ತಜ್ಞರ ಸಮಿತಿ ತೃಪ್ತಿ ಇಲ್ಲದಿದ್ದರೆ, ಮತ್ತೊಂದು ತಜ್ಞರ ಸಮಿತಿ ಬೇಕಿದ್ದರೆ ಮಾಡಲಿ. ಇಲ್ಲಿ ಭಯ ಮುಕ್ತ ವಾತಾವರಣದಲ್ಲಿ ಕೆಲಸ ಮಾಡಬೇಕಿದೆ. ಇಲ್ಲಿ ಒಂದು ಮಗು ಇಲ್ಲ. ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕೊಡಬೇಕಿದೆ’ ಎಂದಿದ್ದಾರೆ.

ಬೇಬಿ ಶಯಾನ್ ಆರೋಗ್ಯದಲ್ಲಿ ನಿಧಾನಗತಿಯ ಚೇತರಿಕೆ: ಡಾ. ನಾಗನಿಶ್ಚಲ್

ಇನ್ನು ಕ್ಲೌಡ್‌ನೈನ್ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾ. ನಾಗನಿಶ್ಚಲ್ ಮಾತನಾಡಿ, ‘ಬೇಬಿ ಶಯಾನ್ ಆರೋಗ್ಯದಲ್ಲಿ ನಿಧಾನವಾಗಿ ಸುಧಾರಣೆ ಕಂಡುಬರುತ್ತಿದೆ. ಪ್ರತಿದಿನ ಮಗುವಿನ ಆರೋಗ್ಯ ಸ್ಥಿತಿಯ ಕುರಿತು ಪೋಷಕರಿಗೆ ಮಾಹಿತಿ ನೀಡಲಾಗುತ್ತಿದೆ. ಚಿಕಿತ್ಸೆಗೆ ಸಂಬಂಧಿಸಿದ ವಿವರಗಳನ್ನು ಪೋಷಕರು ಹಾಗೂ ಸರ್ಕಾರಕ್ಕೂ ನೀಡಲಾಗುತ್ತಿದೆ. ನಮ್ಮ ಚಿಕಿತ್ಸೆ ಸರಿಯಾಗಿದೆ ಎಂದು ಸರ್ಕಾರದ ಅಧಿಕಾರಿಗಳಿಗೂ ತಿಳಿಸಲಾಗಿದೆ. ವೈದ್ಯಕೀಯ ನಿರ್ಲಕ್ಷ್ಯದ ಕುರಿತು ನ್ಯಾಯಾಲಯವೇ ನಿರ್ಧರಿಸಲಿ. ಆಸ್ಪತ್ರೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ನಾವು ಏನೇ ಹೇಳಿದರೂ ಅದಕ್ಕೆ ತಪ್ಪು ಅರ್ಥ ಕಲ್ಪಿಸಲಾಗುತ್ತಿದೆ. ಮಗುವಿಗೆ ಅಗತ್ಯವಿರುವ ಎಲ್ಲ ಚಿಕಿತ್ಸೆಯನ್ನು ನೀಡಲು ಆಸ್ಪತ್ರೆ ಸಿದ್ಧವಿದೆ. ಆದರೆ ಸದ್ಯ ನಾವು ಚಿಕಿತ್ಸೆಯನ್ನು ನೀಡುವುದಕ್ಕಿಂತಲೂ ಆರೋಪಗಳಿಗೆ ಉತ್ತರಿಸುವುದರಲ್ಲೇ ಹೆಚ್ಚಿನ ಸಮಯ ಕಳೆಯುವಂತಾಗಿದೆ’ ಎಂದರು.

ನಾಳೆ ಸಂಜೆ 4 ಗಂಟೆಯವರೆಗೆ ಆಸ್ಪತ್ರೆ ಆಡಳಿತ ಮಂಡಳಿಗೆ ಗಡುವು ನೀಡಿದ ಕುಮಾರಸ್ವಾಮಿ

ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಇಂದು ಕ್ಲೌಡ್ ನೈನ್ ಆಸ್ಪತ್ರೆಗೆ ಭೇಟಿ ನೀಡಿ ಮಗುವಿನ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಆಸ್ಪತ್ರೆಯ ವಿರುದ್ಧ ನ್ಯಾಯಾಲಯಕ್ಕೆ ಹೋಗುವ ವಿಚಾರವಾಗಿ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಪೇಪರ್ ಸಿದ್ಧತೆ ಮಾಡುತ್ತಿದ್ದೇವೆ. ಏನು ಮಾಡಬೇಕು ಅಂತ ತೀರ್ಮಾನ ಮಾಡುತ್ತೇವೆ. ಮಗು ಬಗ್ಗೆ ನಿರ್ಲಕ್ಷ್ಯ ಮಾಡಿದಷ್ಟೇ ಅಲ್ಲ, ತಂದೆ ತಾಯಿಯನ್ನು ಕೂಡ ಹೀನಾಯವಾಗಿ ನಡೆಸಿಕೊಂಡಿದ್ದಾರೆ’ ಎಂದು ಅವರು ಆರೋಪಿಸಿದರು.

ಇದನ್ನೂ ಓದಿ: ಕಿವಿ ಚಿಕಿತ್ಸೆಗೆಂದು ಬಂದಿದ್ದ ಮಗು ಕೋಮಾಗೆ: 3 ತಿಂಗಳಿನಿಂದ ಚಿಕಿತ್ಸೆ ನೀಡಿದ್ರೂ ಚಿಂತಾಜನಕ ಸ್ಥಿತಿ: ಕ್ಲೌಡ್‌9 ಆಸ್ಪತ್ರೆ ವಿರುದ್ಧ ಆಕ್ರೋಶ

ಅನಸ್ತೇಶಿಯಾ ಕೊಡುವುದಕ್ಕೂ ಮುನ್ನ ಹಾಲು ಕುಡಿದಿತ್ತು ಮಗು ಅಂತಾರೆ. ಅನಸ್ತೇಶಿಯಾ ಕೊಡಬೇಕಾದರೆ ಇದೆಲ್ಲಾ ಗಮನಕ್ಕೆ ಇರಲಿಲ್ಲವಾ, ಪೋಷಕರನ್ನ ಕೇಳಲಿಲ್ಲವಾ? ಇದನ್ನ ಮುಚ್ಚಿ ಹಾಕುವುದಕ್ಕೆ ಬೇರೆ ಬೇರೆ ಕಾರಣ ಕೊಡುತ್ತಿದ್ದಾರೆ. ದುಡ್ಡಿನ ಮದ ಆ ಥರ ಇದೆ ಇವರಿಗೆ, ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಹಾಗಾಗಿ ಆಸ್ಪತ್ರೆ ಮಾಲೀಕರು, ಆಡಳಿತ ಮಂಡಳಿ ಸೂಕ್ತ ಕಾರಣ, ಏನು ಕ್ರಮಕೈಗೊಳ್ಳಲಾಗಿದೆ ಎಂದು ನಾಳೆ ಸಂಜೆ 4 ಗಂಟೆಯೊಳಗೆ ಹೇಳಬೇಕು. ಆಮೇಲೆ ಏನು ತೀರ್ಮಾನ ಮಾಡಬೇಕೋ‌ ಮಾಡುತ್ತೇನೆ’ ಎಂದು ಹೆಚ್​ಡಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.