ಬೆಂಗಳೂರು, ನವೆಂಬರ್​​ 29: 2023ರ ವಿಧಾನಸಭಾ ಚುನಾವಣೆಯಲ್ಲಿ ಬೊಮ್ಮನಹಳ್ಳಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಎಂ. ಸತೀಶ್ ರೆಡ್ಡಿ ಆಯ್ಕೆಯಾಗಿರುವುದನ್ನು ಪ್ರಶ್ನಿಸಿ ಉಮಾಪತಿ ಶ್ರೀನಿವಾಸ್ ಗೌಡ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಚುನಾವಣಾ ಅರ್ಜಿ ಸಲ್ಲಿಸುವ ಮೊದಲು ಪಾಲಿಸಬೇಕಾದ ಕಡ್ಡಾಯ ನಿಯಮಗಳನ್ನು ಅನುಸರಿಸದಿರುವುದು ಹಾಗೂ ಅರ್ಜಿ ಸಲ್ಲಿಕೆಯಲ್ಲಿ ವಿಳಂಬವಾಗಿರುವ ಕಾರಣಕ್ಕೆ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಬೊಮ್ಮನಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಉಮಾಪತಿ ಶ್ರೀನಿವಾಸ್ ಗೌಡ ಸೋಲು ಅನುಭವಿಸಿದ್ದರು.

‘ಭದ್ರತಾ ಠೇವಣಿ ಪಾವತಿಸಲು ಅರ್ಜಿದಾರರು ವಿಫಲ’

ನ್ಯಾಯಮೂರ್ತಿ ರವಿ ವಿ. ಹೊಸಮನಿ ಅವರು ಅರ್ಜಿಯನ್ನು ವಜಾಗೊಳಿಸಿದ್ದು, ಚುನಾವಣಾ ಅರ್ಜಿ ಸಲ್ಲಿಸುವ ಮೊದಲು 2,000 ರೂಪಾಯಿ ಭದ್ರತಾ ಠೇವಣಿ ಪಾವತಿಸಲು ಅರ್ಜಿದಾರರು ವಿಫಲರಾಗಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಜನಪ್ರತಿನಿಧಿಗಳ ಕಾಯ್ದೆಯ ಸೆಕ್ಷನ್ 117ರ ಅಡಿಯಲ್ಲಿ ಚುನಾವಣಾ ಅರ್ಜಿ ಸಲ್ಲಿಸುವ ಮೊದಲು 2,000 ರೂಪಾಯಿ ಭದ್ರತಾ ಠೇವಣಿ ಪಾವತಿಸುವುದು ಕಡ್ಡಾಯವಾಗಿದೆ. ಈ ಠೇವಣಿಯನ್ನು ಮನ್ನಾ ಮಾಡಲು, ಮೊತ್ತವನ್ನು ಕಡಿಮೆ ಮಾಡಲು ಅಥವಾ ಠೇವಣಿ ಪಾವತಿಸದಿರುವುದನ್ನು ಕ್ಷಮಿಸಲು ಹೈಕೋರ್ಟ್‌ಗೆ ಯಾವುದೇ ಅಧಿಕಾರವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಬೆಂಗಳೂರು ಅಭಿವೃದ್ಧಿಗೆ ಟೋಕಿಯೊ ಮಾದರಿ ಅನುಸರಿಸಿ; ನಗರಾಭಿವೃದ್ಧಿಗೆ 10 ಮಹತ್ವದ ಸಲಹೆ ನೀಡಿದ ಸಂಸದ ತೇಜಸ್ವಿ ಸೂರ್ಯ

ಫಲಿತಾಂಶ ಪ್ರಕಟವಾಗಿ 45 ದಿನಗಳ ಬಳಿಕ ಸಲ್ಲಿಕೆಯಾಗಿದ್ದ ಅರ್ಜಿ

2023ರ ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಿತ್ತು. ಜೂನ್ 27ರಂದು ಸಂಜೆ 3.55ಕ್ಕೆ, ಅಂದರೆ ಫಲಿತಾಂಶ ಪ್ರಕಟವಾದ 45 ದಿನಗಳ ಬಳಿಕ ಉಮಾಪತಿ ಶ್ರೀನಿವಾಸ್ ಗೌಡ ಚುನಾವಣಾ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‌ನಲ್ಲಿ ಅರ್ಜಿಗಳನ್ನು ಸ್ವೀಕರಿಸುವ ಕೌಂಟರ್ ಮುಚ್ಚಲು ಕೇವಲ ಐದು ನಿಮಿಷ ಬಾಕಿ ಇರುವಾಗ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಕಡ್ಡಾಯವಾಗಿ ಪಾವತಿಸಬೇಕಿದ್ದ 2,000 ರೂಪಾಯಿ ಭದ್ರತಾ ಠೇವಣಿಯನ್ನು ಮರುದಿನ ಅಂದರೆ ಜೂನ್ 28ರಂದು ಪಾವತಿಸಲಾಗಿತ್ತು.

ಚುನಾವಣಾ ಅರ್ಜಿ ಸಲ್ಲಿಸುವ ಮೊದಲು ವೆಚ್ಚದ ಭದ್ರತಾ ಠೇವಣಿ ಪಾವತಿಸದಿರುವುದನ್ನು ಅರ್ಜಿದಾರರು ಸ್ಪಷ್ಟವಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೆ, ಮರುದಿನ ಠೇವಣಿ ಪಾವತಿಸಿದ್ದಾರೆ. ಅಂದು ಚುನಾವಣಾ ಫಲಿತಾಂಶ ಪ್ರಕಟವಾಗಿ 46ನೇ ದಿನವಾಗಿತ್ತು. ಹೀಗಾಗಿ, ಸಿವಿಲ್ ಪ್ರಕ್ರಿಯಾ ಸಂಹಿತೆಯ ಆದೇಶ XII ನಿಯಮ 6ರ ಅಡಿಯಲ್ಲಿ ಅರ್ಜಿಯನ್ನು ಆರಂಭಿಕ ಹಂತದಲ್ಲೇ ವಜಾಗೊಳಿಸಲು ಅಗತ್ಯವಾದ ಷರತ್ತುಗಳು ಪೂರೈಸಲ್ಪಟ್ಟಿವೆ ಎಂದು ನ್ಯಾಯಮೂರ್ತಿ ರವಿ ಹೊಸಮನಿ ಹೇಳಿದ್ದಾರೆ.

ಭದ್ರತಾ ಠೇವಣಿಯನ್ನು ಅರ್ಜಿ ಸಲ್ಲಿಸುವ ಮೊದಲು ಪಾವತಿಸಲು ತಮ್ಮ ನಿಯಂತ್ರಣಕ್ಕೆ ಮೀರಿದ ಅನಿವಾರ್ಯ ಪರಿಸ್ಥಿತಿಗಳು ಅಡ್ಡಿಯಾಗಿದ್ದವು ಎಂಬುದನ್ನು ಅರ್ಜಿದಾರರು ಚುನಾವಣಾ ಅರ್ಜಿಯಲ್ಲಿ ಎಲ್ಲಿಯೂ ನಿರ್ದಿಷ್ಟವಾಗಿ ಉಲ್ಲೇಖಿಸಿಲ್ಲ ಎಂಬುದನ್ನೂ ನ್ಯಾಯಾಲಯ ಗಮನಿಸಿದೆ. ಅಲ್ಲದೆ, ನಿಗದಿತ ಸಮಯ ಮುಗಿದ ಬಳಿಕ ಭದ್ರತಾ ಠೇವಣಿ ಪಾವತಿಸಲು ಅನುಮತಿ ನೀಡುವಂತೆ ಅರ್ಜಿದಾರರು ಹೈಕೋರ್ಟ್ ರಿಜಿಸ್ಟ್ರಾರ್ ಅವರನ್ನೂ ಸಂಪರ್ಕಿಸಿರಲಿಲ್ಲ. ಅನ್ವಯವಾಗುವ ಲೆಕ್ಕಪತ್ರ ನಿಯಮಗಳ ಪ್ರಕಾರ, ಇಂತಹ ಅನುಮತಿ ಕೋರುವ ಅವಕಾಶವಿದ್ದರೂ ಅದನ್ನು ಬಳಸಿಕೊಂಡಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.