ಬೆಂಗಳೂರು, ನವೆಂಬರ್​​ 29: ಇಂದಿನಿಂದ (ನವೆಂಬರ್​​ 29) ನಂದಿನಿ ಬ್ರ್ಯಾಂಡ್​​​​ ಮೊಸರು ದರದಲ್ಲಿ ಇಳಿಕೆಯಾಗಿದ್ದು, ಲೀಟರ್​​ ಮೊಸರಿಗೆ 2 ರೂ. ಮತ್ತು ಅರ್ಧ ಲೀಟರ್​ ಮೊಸರಿಗೆ 1 ರೂ. ಇಳಿಕೆಯಾಗಿದೆ. ಆ ಮೂಲಕ 1 ಲೀಟರ್ ಮೊಸರಿನ ದರ 68 ರಿಂದ 66ಕ್ಕೆ ಬಂದಿದ್ದರೆ, ಅರ್ಧ ಲೀಟರ್​​ ಮೊಸರಿನ ದರ 34 ರಿಂದ 33ಕ್ಕೆ ಇಳಿಕೆಯಾಗಿದೆ. ನವೆಂಬರ್ 1, 2026ರಂದು ನಂದಿನಿ ಮೊಸರಿನ ದರವನ್ನು ಲೀಟರ್‌ಗೆ ₹14 ಮತ್ತು ಅರ್ಧ ಲೀಟರ್‌ಗೆ ₹6 ಹೆಚ್ಚಿಸಲಾಗಿತ್ತು. ಹೀಗಾಗಿ ಭಾರಿ ದರ ಏರಿಕೆಯಿಂದ ಕಂಗೆಟ್ಟಿದ್ದ ಜನತೆಗೆ ಈಗ ಕೊಂಚ ರಿಲೀಫ್​​ ಸಿಕ್ಕಿದೆ.

ದರ ಇಳಿಕೆಗೆ ಸೂಚಿಸಿದ್ದ ಸಿಎಂ

ಕರ್ನಾಟಕದಲ್ಲಿ ನಂದಿನಿ ಹಾಲು, ಮೊಸರಿನ ದರ ಏರಿಕೆಗೆ ರಾಜಕೀಯ ಪಕ್ಷಗಳು ಸೇರಿದಂತೆ ಸಾರ್ವಜನಿಕರಿಂದಲೂ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಲೀಟರ್​​ ಮೊಸರಿನ ದರ 14 ರೂಪಾಯಿ ಹೆಚ್ಚಳ ತೀರಾ ಆಯಿತೆಂಬ ಅಸಮಾಧಾನಗಳು ಕೇಳಿಬಂದಿದ್ದವು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಚರ್ಚೆ ನಡೆದಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಸಿಎಂ ಡಿಕೆ ಶಿವಕುಮಾರ್, ಏರಿಕೆ ಮಾಡಲಾಗಿದ್ದ ಮೊಸರಿಮ ಬೆಲೆಯಲ್ಲಿ ಎರಡು ರೂ. ಇಳಿಕೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಲೀಟರ್ ಮೊಸರಿಗೆ 14 ರೂ. ಬದಲು 12 ರೂ. ಮಾತ್ರ ಹೆಚ್ಚಳಕ್ಕೆ ತಿಳಿಸಿದ್ದರು.

ಇದನ್ನೂ ಓದಿ: ಜನಾಕ್ರೋಶ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ, ಮೊಸರಿನ ದರ ಇಳಿಕೆಗೆ ಸಿಎಂ ಸೂಚನೆ

ಭರವಸೆ ನೀಡಿ ತಿಂಗಳು ಕಳೆಯುತ್ತ ಬಂದರೂ ಬೆಲೆ ಕಡಿತವಾಗದ ಬಗ್ಗೆ ಆಕ್ರೋಶ ಹೊರಹಾಕಿದ್ದ ಸಾರ್ವಜನಿಕರು, ಜನರು ಈ ಬೆಲೆ ಏರಿಕೆಗೆ ಒಗ್ಗಿಕೊಂಡು ಸುಮ್ಮನಾಗುತ್ತಾರೆ ಎಂಬ ಸರ್ಕಾರದ ಭಾವನೆಗೆ ಇದು ಸಾಕ್ಷಿಯಾಗಿದೆ. ಜನರು ಪ್ರತಿದಿನ ಹಾಲು ಮತ್ತು ಮೊಸರು ಖರೀದಿಸಲೇಬೇಕಾದ ಅನಿವಾರ್ಯತೆ ಇರುವುದರಿಂದ ಹೆಚ್ಚುವರಿ ಆರ್ಥಿಕ ಹೊರೆಯಾಗುತ್ತಿದೆ ಎಂದು ದೂರಿದ್ದರು. ಆದರೀಗ ಸಿಎಂ ಸೂಚನೆಯಂತೆ ಮೊಸರಿನ ದರದಲ್ಲಿ ಇಳಿಕೆಯಾಗಿದೆ. ಪರಿಷ್ಕೃತ ದರದಲ್ಲಿ ಇಂದಿನಿಂದಲೇ ನಂದಿನಿ ಮೊಸರು ಗ್ರಾಹಕರ ಕೈಸೇರಲಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.