ಕಳೆದ ವಾರ ಬಿಗ್​​ಬಾಸ್ ಮನೆಯಲ್ಲಿ ಆಸಕ್ತಿಕರ ಟಾಸ್ಕ್ ನಡೆಯಿತು. ಗುಳ್ಳೆನರಿ ಮತ್ತು ಕಾಗೆ ಎಂದು ಯಶಸ್ ಮತ್ತು ತಾಂಡವ್ ಅವರನ್ನು ಬಿಗ್​​ಬಾಸ್ ಆರಿಸಿದ್ದರು. ಗುಳ್ಳೆನರಿ, ಕುಯುಕ್ತಿಯ ಕೆಲಸ ಮಾಡಬೇಕಿತ್ತು, ಅದರಂತೆ ಕಾಗೆ, ಆ ಗುಳ್ಳೆನರಿಯನ್ನು ಕಂಡು ಹಿಡಿಯುವ ಕೆಲಸ ಮಾಡಬೇಕಿತ್ತು. ಇಬ್ಬರೂ ಸಹ ಈ ಕೆಲಸವನ್ನು ಮನೆಯ ಎಲ್ಲರ ಕಣ್ಣುತಪ್ಪಿಸಿ ಮಾಡಬೇಕಿತ್ತು. ಈ ಟಾಸ್ಕ್​​ನಲ್ಲಿ ಯಶಸ್​​ ಅದ್ಧೂರಿ ಪ್ರದರ್ಶನ ನೀಡಿದರು. ಖುದ್ದು ಬಿಗ್​​ಬಾಸ್, ಯಶಸ್​ ಆಟಕ್ಕೆ ಮಾರು ಹೋದರು.

ಟಾಸ್ಕ್ ಗೆದ್ದವರಿಗೆ ವಿಶೇಷ ಅಧಿಕಾರವನ್ನು ಬಿಗ್​​ ಬಾಸ್ ಮೊದಲೇ ಘೋಷಿಸಿದ್ದರು. ಅದರಂತೆ ಯಶಸ್​​, ಟಾಸ್ಕ್ ಗೆದ್ದರು. ಆದರೆ ಮನೆಯ ಸದಸ್ಯರಿಗೆ ಗುಳ್ಳೆ ನರಿ ಯಾರೆಂದು ಗೊತ್ತಿರಲಿಲ್ಲ. ಶನಿವಾರದ ಎಪಿಸೋಡಿನಲ್ಲಿ ಸುದೀಪ್ ಎದುರು ಆ ಗುಟ್ಟು ರಟ್ಟಾಯ್ತು. ಸುದೀಪ್ ಅವರೇ ಖುದ್ದು ಎಲ್ಲ ಮನೆಯ ಸದಸ್ಯರ ಮುಂದೆ ಬಲು ವಿಶೇಷವಾಗಿ ಗುಳ್ಳೆನರಿ ಯಾರೆಂದು ಘೋಷಣೆ ಮಾಡಿದರು. ಯಶಸ್, ಗುಳ್ಳೆನರಿ ಎಂದಾಗ ಮನೆಯ ಎಲ್ಲರೂ ಶಾಕ್ ಆದರು.

ಗುಳ್ಳೆನರಿ ಟಾಸ್ಕ್​​ನಲ್ಲಿ ಅದ್ಭುತ ಆಟವಾಡಿದ ಯಶಸ್​​ ಅನ್ನು ಸುದೀಪ್ ಮೆಚ್ಚಿ ಕೊಂಡಾಡಿದರು. ‘ಇತರೆ ಸದಸ್ಯರು ಟಾಸ್ಕ್ ಅನ್ನು ಲಘುವಾಗಿ ಪರಿಗಣಿಸಿರುವಾಗ ನೀವು ಟಾಸ್ಕ್​​ಗೆ ಕಟ್ಟುಬಿದ್ದು ನಿಯಮ ಇರುವಂತೆಯೇ ಆಟ ಆಡಿದಿರಿ. ನಿಮ್ಮ ಆತ್ಮೀಯ ಗೆಳೆಯರಿಗೂ ಸಹ ನೀವು ಸಣ್ಣ ಸುಳಿವನ್ನು ಸಹ ನೀಡಲಿಲ್ಲ. ಅದು ಮಾತ್ರವೇ ಅಲ್ಲದೆ ಬಿಗ್​​ಬಾಸ್ ಮನೆಯಲ್ಲೂ ಸಹ ನೀವು ಮೊದಲಿನಿಂದಲೂ ಒಳ್ಳೆಯ ಆಟ ಆಡುತ್ತಾ ಬರುತ್ತಿದ್ದೀರಿ, ಒಳ್ಳೆಯ ವ್ಯಕ್ತಿತ್ವ ಪ್ರದರ್ಶಿಸುತ್ತಾ ಬರುತ್ತಿದ್ದೀರಿ’ ಎಂದರು. ಕಿಚ್ಚನ ಚಪ್ಪಾಳೆ ನೀಡುವ ಜೊತೆಗೆ ತಮ್ಮ ವಿಶೇಷ ಜಾಕೆಟ್ ಒಂದನ್ನು ಯಶಸ್​ ಅವರಿಗಾಗಿ ಕೊಟ್ಟರು ಸುದೀಪ್.

ಇದನ್ನೂ ಓದಿ:ಬಿಗ್​​ಬಾಸ್: ಗುಳ್ಳೆನರಿಗೆ ಸಿಂಹದ ಕಿರೀಟ, ನಡೆಯಲಿಲ್ಲ ಕಾಗೆಯ ಆಟ

ಕಿಚ್ಚನ ಚಪ್ಪಾಳೆ, ಜಾಕೆಟ್​ ಬಳಿಕ ಬಿಗ್​​ಬಾಸ್ ಕಡೆಯಿಂದ ಯಶಸ್​​ ಅವರಿಗೆ ಕಿರೀಟ ಒಂದನ್ನು ನೀಡಲಾಯ್ತು. ಕಿರೀಟವನ್ನು ಬಿಗ್​​ಬಾಸ್ ಕಳಿಸಿದ್ದರು. ಬಳಿಕ ಅಶ್ವಸೂರ್ಯ ರಿಯಾಲಿಟೀಸ್ ಕಡೆಯಿಂದ ಯಶಸ್​​ ಅವರಿಗೆ ಒಂದು ಲಕ್ಷ ರೂಪಾಯಿ ಬಹುಮಾನವೂ ಸಹ ದೊರಕಿತು. ಅದಾದ ಬಳಿಕ ಬಿಗ್​​ಬಾಸ್​ ಮೊದಲೇ ಘೋಷಿಸಿದ್ದಂತೆ ಯಶಸ್​​ ಅವರಿಗೆ ಅಡ್ವಾಂಟೇಜ್ ಒಂದನ್ನು ನೀಡಿದರು. ಈ ಹಿಂದೆ ಯಶಸ್​​, ಪ್ರತಿ ವಾರ ನಾಮಿನೇಟ್ ಆಗಿದ್ದರು, ಆದರೆ ಅದನ್ನು ಬೇರೆಯವರಿಗೆ ವರ್ಗಾವಣೆ ಮಾಡುವ ಅಧಿಕಾರ ಪಡೆದುಕೊಂಡರು. ಯಶಸ್​​, ಕೂಡಲೇ ನಾಮಿನೇಷನ್ ಅನ್ನು ಗಗನ್​​ಗೆ ವರ್ಗಾವಣೆ ಮಾಡಿದರು. ಒಟ್ಟಾರೆ ಒಂದು ಒಳ್ಳೆಯ ಟಾಸ್ಕ್ ಆಡಿದ್ದಕ್ಕೆ ಹಲವು ಬಹುಮಾನಗಳು ಯಶಸ್​​ ಅವರಿಗೆ ದೊರಕಿದಂತಾಯ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ