ಬಿಗ್ ಬಾಸ್ ಮನೆಯಲ್ಲಿ ಯಾವಾಗ ಏನಾಗುತ್ತದೆ ಎಂದು ತಿಳಿಯೋದಿಲ್ಲ. ಅಲ್ಲಿ ಕರ್ಮ ಅನ್ನೋದು ಬಹುಬೇಗ ಕೆಲಸ ಮಾಡುತ್ತದೆ. ಯಾರಿಗಾದರೂ ಕೆಟ್ಟದ್ದು ಮಾಡಿದರೆ ಅಥವಾ ಬಯಸಿದರೆ ಅದು ಕೆಲವೇ ಸಮಯದಲ್ಲಿ ಹಿಂದಿರುಗಿ ಬರುತ್ತದೆ. ಅದಕ್ಕೆ ಈಗ ಬಿಗ್ ಬಾಸ್ ಮನೆಯಲ್ಲಿ ನಡೆದ ಅಚ್ಚರಿಯ ಬೆಳವಣಿಗೆಯೊಂದು ಉತ್ತಮ ಉದಾಹರಣೆ. ಇಡೀ ಸೀಸನ್ ನಾಮಿನೇಟ್ ಆಗಿದ್ದ ಯಶಸ್, ಇದೀಗ ತಮ್ಮ ಮೇಲಿದ್ದ ಆ ಕಂಟಕವನ್ನು ಗಗನ್ ಅವರಿಗೆ ವರ್ಗಾಯಿಸುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ.
ಹಿನ್ನೆಲೆ ಏನು?
ಈ ಮೊದಲು ಬಿಗ್ ಬಾಸ್ ಗಗನ್ ಅವರಿಗೆ ಒಂದು ವಿಶೇಷ ಅಧಿಕಾರ ನೀಡಿದ್ದರು. ಮನೆಯ ಒಬ್ಬ ಸದಸ್ಯರನ್ನು ಇಡೀ ಸೀಸನ್ ನಾಮಿನೇಟ್ ಮಾಡುವ ಅವಕಾಶ ಅದಾಗಿತ್ತು. ಈ ಅಧಿಕಾರವನ್ನು ಬಳಸಿಕೊಂಡಿದ್ದ ಗಗನ್, ಯಶಸ್ ಅವರನ್ನು ಇಡೀ ಸೀಸನ್ಗೆ ನಾಮಿನೇಟ್ ಮಾಡಿದ್ದರು. ಇದರಿಂದ ಯಶಸ್ ತೀವ್ರ ಕಂಗಾಲಾಗಿದ್ದರು.
ತಿರುಗೇಟು ನೀಡಿದ ಯಶಸ್
ಈ ವಾರ ನಡೆದ ‘ಗುಳ್ಳೆನರಿ’ ಸೀಕ್ರೆಟ್ ಟಾಸ್ಕ್ನಲ್ಲಿ ಯಶಸ್ ಗೆಲುವು ಸಾಧಿಸಿದ್ದಾರೆ. ಈ ಗೆಲುವಿನ ಫಲವಾಗಿ ಅವರಿಗೆ ವಿಶೇಷ ಅಧಿಕಾರವೊಂದು ಸಿಕ್ಕಿದೆ. ತಮ್ಮ ಮೇಲಿರುವ ಇಡೀ ಸೀಸನ್ ನಾಮಿನೇಷನ್ ಶಿಕ್ಷೆಯನ್ನು ಬೇರೊಬ್ಬರಿಗೆ ಹಸ್ತಾಂತರಿಸುವ ಅಥವಾ ತಾವೇ ಉಳಿಸಿಕೊಳ್ಳುವ ಆಯ್ಕೆಯನ್ನು ಬಿಗ್ ಬಾಸ್ ನೀಡಿದ್ದರು.
ಸುದೀಪ್ ಮಾತಿಗೆ ಕ್ಷಣಾರ್ಧದಲ್ಲೇ ಉತ್ತರ
ವೀಕೆಂಡ್ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್ ಅವರು ಈ ವಿಚಾರವನ್ನು ಪ್ರಸ್ತಾಪಿಸಿದರು. ‘ನೀವು ಈ ನಾಮಿನೇಷನ್ ಅನ್ನು ಬೇರೊಬ್ಬರಿಗೆ ಹಸ್ತಾಂತರಿಸಬಹುದು ಅಥವಾ ಒಳ್ಳೆಯವರು ಅಂತಾದರೆ ನೀವೇ ಇಟ್ಟುಕೊಳ್ಳಬಹುದು. ನಿಮ್ಮ ನಿರ್ಧಾರ ತಿಳಿಸಲು 30 ಸೆಕೆಂಡ್ ಅವಕಾಶ ಇದೆ’ ಎಂದು ಸುದೀಪ್ ಹೇಳಿದರು.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಗಗನ್ ಚಿನ್ನಪ್ಪ ಹೊಸ ವಿವಾದ; ವಿಕೆಂಡ್ನಲ್ಲಿ ಚರ್ಚೆ ಆಗಬೇಕು ಎಂದ ನೆಟ್ಟಿಗರು
ಪೆಚ್ಚಾದ ಗಗನ್
ಸುದೀಪ್ ಮಾತು ಮುಗಿಯುತ್ತಿದ್ದಂತೆಯೇ ಯಶಸ್ ಸ್ವಲ್ಪವೂ ಯೋಚಿಸಲಿಲ್ಲ. ‘ನಾನು ಇದನ್ನು ಗಗನ್ ಅವರಿಗೆ ಹಸ್ತಾಂತರ ಮಾಡುತ್ತೇನೆ. ನನಗೆ ಇದನ್ನು ಕೊಟ್ಟಿದ್ದು ಅವರೇ. ಹಾಗಾಗಿ, ಇದನ್ನು ಅವರಿಗೇ ಮರಳಿಸುತ್ತಿದ್ದೇನೆ. ಅವರು ನೀಡಿದ ಕಾರಣಗಳೇ ನನ್ನವು ಕೂಡ’ ಎಂದು ಖಡಕ್ ಆಗಿ ಹೇಳಿದರು. ಯಶಸ್ ಅವರ ಈ ಅನಿರೀಕ್ಷಿತ ನಿರ್ಧಾರದಿಂದ ಗಗನ್ ಪೆಚ್ಚಾದರು. ಗಗನ್ ಅವರು ಯಶಸ್ನ ಹೆಣ್ಣು ಎಂಬ ರೀತಿ ಕರೆದಿದ್ದರು. ಇದಕ್ಕೂ ಯಶಸ್ ಸೇಡುತೀರಿಸಿಕೊಂಡಂತೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

