ಬೆಂಗಳೂರು, ನವೆಂಬರ್​​ 15: ಮುಂದಿನ 7 ದಿನಗಳ ಕಾಲ ರಾಜ್ಯದಾದ್ಯಂತ ಬಹುತೇಕ ಭಾಗಗಳಲ್ಲಿ ಒಣ ಹವೆ ಹಾಗೂ ಬಿಸಿಲಿನ ವಾತಾವರಣ ಮುಂದುವರಿಯುವ ನಿರೀಕ್ಷೆಯಿದೆ. ಗರಿಷ್ಠ ತಾಪಮಾನವು ವಾಡಿಕೆಯ ಮಟ್ಟದಿಂದ ಹೆಚ್ಚಾಗಿರುವ ಸಾಧ್ಯತೆಯಿದೆ. ಕನಿಷ್ಠ ಉಷ್ಣಾಂಶವು ಸಾಮಾನ್ಯ ಅಥವಾ ಸಾಮಾನ್ಯಕಿಂತ ಕಮ್ಮಿ ಇರಲಿದೆ. ರಾಜ್ಯದ ಹಲವು ಭಾಗಗಳಲ್ಲಿ ಚಳಿ ಹಾಗೂ ಮಂಜಿನ ವಾತಾವರಣ ಕಂಡುಬರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹಗಲಿನ ತಾಪಮಾನ 34ರಿಂದ 40 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆ

ಕರ್ನಾಟಕದಲ್ಲಿ ಈ ಬಾರಿ ನವೆಂಬರ್ ತಿಂಗಳಿನಲ್ಲಿ ವಾಡಿಕೆಗಿಂತ ಹೆಚ್ಚಿನ ಉಷ್ಣಾಂಶ ದಾಖಲಾಗುತ್ತಿದ್ದು, ತಿಂಗಳ ಮೊದಲ 11 ದಿನಗಳಲ್ಲೇ ರಾಜ್ಯದಾದ್ಯಂತ ಹಗಲಿನ ತಾಪಮಾನ 34ರಿಂದ 40 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ. ಪರಿಣಾಮ ಕಳೆದ ಆರು ವರ್ಷಗಳಲ್ಲೇ ಅತ್ಯಂತ ಬಿಸಿಯಾದ ನವೆಂಬರ್ ತಿಂಗಳುಗಳಲ್ಲಿ ಇದೂ ಒಂದಾಗುವ ಸಾಧ್ಯತೆಯಿದೆ. ಕಳೆದ ಆರು ವರ್ಷಗಳಲ್ಲಿ ನವೆಂಬರ್ ತಿಂಗಳ ಸರಾಸರಿ ಹಗಲಿನ ತಾಪಮಾನ 30ರಿಂದ 38 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು.

ಇದನ್ನೂ ಓದಿ: ಸೈಕ್ಲೋನ್, ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ನಿಖರ ಮುನ್ಸೂಚನೆ ಹೇಗೆ ಸಾಧ್ಯ?: ಐಎಂಡಿ ಹೇಗೆ ಕೆಲಸ ಮಾಡುತ್ತೆ? ಇಲ್ಲಿದೆ ವಿವರ

ಕಳೆದ ವರ್ಷಕ್ಕೆ ಹೋಲಿಸಿದರೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಸರಾಸರಿ 1.5ರಿಂದ 2 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಳವಾಗಿದೆ. ಇನ್ನು ಕನಿಷ್ಠ ತಾಪಮಾನವು 10ರಿಂದ 18 ಡಿಗ್ರಿ ಸೆಲ್ಸಿಯಸ್ ನಡುವೆ ಸಾಮಾನ್ಯ ಸ್ಥಿತಿಯಲ್ಲಿದೆ. ಆದರೆ, ಆಕಾಶದಲ್ಲಿ ಮೋಡಗಳಿಲ್ಲದಿರುವುದು ಹಾಗೂ ಎಲ್ ನಿನೋ ಪ್ರಭಾವದಿಂದ ಹಗಲಿನ ತಾಪಮಾನ ವಾಡಿಕೆಗಿಂತ ಹೆಚ್ಚಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಕನಿಷ್ಠ ತಾಪಮಾನದಲ್ಲಿನ ಇಳಿಕೆ ಅಸಹಜವೇನಲ್ಲ. ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಕಳೆದ ಹಲವು ವರ್ಷಗಳಿಂದ 8ರಿಂದ 12 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗುತ್ತಿದೆ. ಆದರೆ, ಈ ವರ್ಷ ಗರಿಷ್ಠ ತಾಪಮಾನ ಹೆಚ್ಚಾಗಿರುವುದು ಅಸಾಮಾನ್ಯ ಸಂಗತಿ. ಕಳೆದ ಹಲವು ವರ್ಷಗಳಿಗೆ ಹೋಲಿಸಿದರೆ ಈ ಬಾರಿಯ ನವೆಂಬರ್ ಅತ್ಯಂತ ಬಿಸಿಯಾದ ತಿಂಗಳುಗಳಲ್ಲಿ ಒಂದಾಗಬಹುದು ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ನವೆಂಬರ್ ತಿಂಗಳು ಚಳಿಗಾಲದ ಆರಂಭದ ಸಂಕ್ರಮಣ ಕಾಲವಾಗಿದೆ. ಮುಂಗಾರು ನಂತರದ ಮೋಡಗಳು ಕಡಿಮೆಯಾಗಿ ಹಿಮಾಲಯ ಭಾಗದಿಂದ ತಂಪಾದ ಈಶಾನ್ಯ ಮಾರುತಗಳು ಬೀಸಲು ಆರಂಭಿಸುತ್ತವೆ. ಡಿಸೆಂಬರ್ ಮತ್ತು ಜನವರಿ ಚಳಿಗಾಲದ ಅತ್ಯಂತ ತಂಪಾದ ತಿಂಗಳುಗಳಾಗಿದ್ದು, ಫೆಬ್ರವರಿ ಮಧ್ಯಭಾಗದಿಂದ ಚಳಿಗಾಲ ಕ್ರಮೇಣ ಕಡಿಮೆಯಾಗುತ್ತದೆ. ಆದರೆ, ಎಲ್ ನಿನೋ ಪ್ರಭಾವದಿಂದ ಈ ವರ್ಷ ಹಗಲಿನ ತಾಪಮಾನ ಹೆಚ್ಚಾಗಿಯೇ ಮುಂದುವರಿಯುವ ಸಾಧ್ಯತೆಯಿದೆ. ಅದೇ ಸಮಯದಲ್ಲಿ ಮುಸ್ಸಂಜೆಯಿಂದ ಬೆಳಗಿನ ಜಾವದವರೆಗೆ ತಾಪಮಾನ ಕನಿಷ್ಠ ಮಟ್ಟಕ್ಕಿಂತಲೂ ಕೆಳಗೆ ಇಳಿಯುವ ಸಾಧ್ಯತೆಯಿದೆ ಎಂದು ಬೆಂಗಳೂರಿನ ಹವಾಮಾನ ಇಲಾಖೆ ವಿಜ್ಞಾನಿಗಳು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.