ಬೆಂಗಳೂರು, ನವೆಂಬರ್​ 15: ಮದುವೆಯಾಗುವುದಾಗಿ ನಂಬಿಸಿ ವಿಚ್ಛೇದಿತ ಮಹಿಳೆಗೆ ಹೈದರಾಬಾದ್​ ಮೂಲದ ವ್ಯಕ್ತಿ ವಂಚಿಸಿರುವ ಆರೋಪವೊಂದು ಕೇಳಿಬಂದಿದೆ. ಹಲವಾರು ಬಾರಿ ದೈಹಿಕ ಸಂಪರ್ಕ ಬೆಳಸಿ, ದುಬಾರಿ ಬೈಕ್, ಐಫೋನ್​ ಗಿಫ್ಟ್ ಪಡೆದುಕೊಂಡು ಕೊನೆಗೆ ಊರು ಬಿಟ್ಟು ಪರಾರಿ‌‌‌‌ ಆಗಿದ್ದಾನೆ. ಪ್ರಿಯಕರನಿಗಾಗಿ ಹುಡುಕಿ ಹುಡುಕಿ‌ ಸೋತ ಮಹಿಳೆ ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಶೇಖ್ ಮೊಹಮ್ಮದ್ ತೈಯೀಬ್ ಅಲಿಯಾಸ್ ತಾಹೀರ್ ವಿರುದ್ಧ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ನಡೆದಿದ್ದೇನು?

ಸಂತ್ರಸ್ತ ಮಹಿಳೆ ವೃತ್ತಿಯಲ್ಲಿ ಆರ್ಕಿಟೆಕ್ಟ್ ಆಗಿದ್ದು, ಸುಮಾರು 20 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದು, ಪತಿಯೊಂದಿಗಿನ ಮನಸ್ತಾಪದ ಹಿನ್ನೆಲೆ 2026ರ ಮಾರ್ಚ್‌ನಲ್ಲಿ ವಿಚ್ಛೇದನ ಪಡೆದಿದ್ದರು. ಬಳಿಕ 11ನೇ ತರಗತಿ ಓದುತ್ತಿರುವ ಮಗನೊಂದಿಗೆ ಕೆ.ಜಿ. ಹಳ್ಳಿ ಪ್ರದೇಶದಲ್ಲಿ ವಾಸವಾಗಿದ್ದರು. ಈ ನಡುವೆ ಮೇ ತಿಂಗಳಲ್ಲಿ ಬಸ್ ನಿಲ್ದಾಣವೊಂದರಲ್ಲಿ ಶೇಖ್ ಮೊಹಮ್ಮದ್ ಪರಿಚಯವಾಗಿದ್ದು, ನಂತರ ಇಬ್ಬರ ನಡುವೆ ಸ್ನೇಹ ಬೆಳೆದು, ಅದು ಪ್ರೀತಿಗೆ ತಿರುಗಿತ್ತು.

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಆರೋಪ

ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ ತಾಹೀರ್, ಆಕೆಯೊಂದಿಗೆ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಅಲ್ಲದೆ, ಮಹಿಳೆಯಿಂದ ದುಬಾರಿ ಬೈಕ್ ಹಾಗೂ ಐಫೋನ್ ಉಡುಗೊರೆಯಾಗಿ ಪಡೆದುಕೊಂಡಿದ್ದಾನೆ. ಸುಮಾರು ಐದು ತಿಂಗಳ ಕಾಲ ಪ್ರೀತಿಯಲ್ಲಿದ್ದ ಬಳಿಕ ತಾಹೀರ್ ಮದುವೆಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ. ನಂತರ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ.

LIVE TV

ಹೈದರಾಬಾದ್‌ಗೆ ತೆರಳಿ ಹುಡುಕಾಟ ನಡೆಸಿದ ಮಹಿಳೆ

ಇನ್ನು ಪ್ರಿಯಕರ ಸಂಪರ್ಕಕ್ಕೆ ಸಿಗದ ಹಿನ್ನೆಲೆ ಮಹಿಳೆ ಆತನಿಗಾಗಿ ಹುಡುಕಾಟ ನಡೆಸಿದ್ದಾರೆ. ಅಲ್ಲದೆ, ಹೈದರಾಬಾದ್‌ನಲ್ಲಿರುವ ತಾಹೀರ್ ಮನೆಗೂ ತೆರಳಿ ವಿಚಾರಿಸಿದ್ದಾರೆ. ಆದರೆ ಅಲ್ಲಿ ಕೂಡ ಆತ ಪತ್ತೆಯಾಗದ ಹಿನ್ನೆಲೆ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.

ಇದನ್ನೂ ಓದಿ: ಮಕ್ಕಳಾಗಿಲ್ಲ ಎಂದು ಹೀಯಾಳಿಸುತ್ತಿದ್ದ ಪತಿಯನ್ನು ಚಾಕುವಿನಿಂದ ಇರಿದು ಕೊಂದ ಪತ್ನಿ

ಕೊನೆಗೆ ಬೇರೆ ದಾರಿ ಕಾಣದೆ ಮಹಿಳೆ ಡಿಜೆ ಹಳ್ಳಿ ಪೊಲೀಸ್ ಠಾಣೆಗೆ ತೆರಳಿ ಶೇಖ್ ಮೊಹಮ್ಮದ್ ತೈಯೀಬ್ ಅಲಿಯಾಸ್ ತಾಹೀರ್ ವಿರುದ್ಧ ದೂರು ನೀಡಿದ್ದಾರೆ. ಮಹಿಳೆಯ ದೂರಿನ ಮೇರೆಗೆ ಡಿಜೆ ಹಳ್ಳಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು, ಪ್ರಕರಣದ ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.