ಬೆಂಗಳೂರು: ಒಂದೇ ಕುಟುಂಬದ ಏಳು ಮಂದಿ ಹತ್ಯೆ ಪ್ರಕರಣದ ಆರೋಪಿ ಇಂದುಶೇಖರ್ ಶ್ರೀರಾಮಪುರದಲ್ಲಿರುವ ಪತ್ನಿ ಕುಟುಂಬದ ಕೋಟ್ಯಂತರ ರೂಪಾಯಿ ಆಸ್ತಿ ಕಬಳಿಸಲು ಸಂಚು ರೂಪಿಸಿ, ಕೊಲೆ ಬಳಿಕ ಸ್ಟಾಂಪ್ ಪೇಪರ್ ಮೇಲೆ ಮೃತರ ಹೆಬ್ಬೆಟ್ಟು ಗುರುತು ಒತ್ತಿಸಿಕೊಂಡಿರುವುದು ತನಿಖೆ ವೇಳೆ ಗೊತ್ತಾಗಿದೆ.
ಇಂದುಶೇಖರ್ ಎರಡು ದಶಕದ ಹಿಂದೆ ಸುನಿತಾ ಅವರನ್ನು ವಿವಾಹವಾಗಿದ್ದ. ಅತ್ತೆ ರೂಪವತಿ ಕುಟುಂಬಕ್ಕೆ ಸೇರಿದ ಸುಮಾರು ₹2.5 ಕೋಟಿ ಮೌಲ್ಯದ ಆಸ್ತಿ ಶ್ರೀರಾಮಪುರದಲ್ಲಿದೆ. ಆಸ್ತಿ ವಿಚಾರವಾಗಿ ಕೆಲ ವರ್ಷಗಳಿಂದ ಗಲಾಟೆ ನಡೆಯುತ್ತಿತ್ತು. ಈ ಆಸ್ತಿಯನ್ನು ಕಬಳಿಸುವ ಸಲುವಾಗಿ ಕೊಲೆಗೂ ಮುನ್ನವೇ ಸ್ಟ್ಯಾಂಪ್ ಪೇಪರ್ಗಳನ್ನು ತಂದಿಟ್ಟುಕೊಂಡಿದ್ದ.
ಪತ್ನಿ ಸುನಿತಾ, ಅತ್ತೆ ರೂಪವತಿ, ಬಾಮೈದ ಶಿವಕುಮಾರ್, ಮತ್ತೊಬ್ಬ ಬಾಮೈದ ಶಂಕರ್, ನಾದಿನಿಯರಾದ ದಿವ್ಯಾ, ನಳಿನಿ ಅವರನ್ನು ಒಬ್ಬೊಬ್ಬರಾಗಿ ಕೊಲೆ ಮಾಡಿದ ಬಳಿಕ ಸ್ಟ್ಯಾಂಪ್ ಪೇಪರ್ ಮೇಲೆ ಅವರ ಹೆಬ್ಬೆಟ್ಟು ಗುರುತು ಒತ್ತಿಸಿಕೊಂಡಿದ್ದಾನೆ.
ಮೃತದೇಹಗಳನ್ನು ಗೋಣಿ ಚೀಲದಲ್ಲಿ ತುಂಬಿಕೊಂಡು ತನ್ನದೇ ಕಾರಿನಲ್ಲಿ ತೆಗೆದುಕೊಂಡು ಹೋಗಿ ದಟ್ಟ ಅರಣ್ಯ ಪ್ರದೇಶದಲ್ಲಿ ಬಿಸಾಡಿದರೆ ಯಾರಿಗೂ ಸಿಗುವುದಿಲ್ಲ. ಸಂಬಂಧಿಕರಿಗೆಲ್ಲ ತೀರ್ಥಯಾತ್ರೆಗೆ ಹೋಗಿದ್ದಾರೆಂದು ಹೇಳಿದ್ದೇನೆ. ಹೀಗಾಗಿ ಅತ್ತೆ ಕುಟುಂಬದ ಸದಸ್ಯರ ಕೊಲೆ ವಿಚಾರ ಹೊರಗೆ ಬರುವುದಿಲ್ಲ ಅಂದುಕೊಂಡು ಮಗಳ ಸಹಕಾರವನ್ನು ಆರೋಪಿ ಪಡೆದುಕೊಂಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಪತ್ನಿ ಯಾವಾಗಲೂ ನಿಂದಿಸುತ್ತಿದ್ದಳು. ಸಣ್ಣ ವಿಚಾರಕ್ಕೆ ಗಲಾಟೆ ಮಾಡುತ್ತಿದ್ದಳು. ಮಾನಸಿಕ ಕಿರುಕುಳ ನೀಡುತ್ತಿದ್ದಳು. ಆಕೆ ಪರವಾಗಿ ತಾಯಿ ಮತ್ತು ಸಹೋದರರು ನಿಲ್ಲುತ್ತಿದ್ದರು. ತನ್ನ ಸಂಸಾರದಲ್ಲಿ ಅವರ ಹಸ್ತಕ್ಷೇಪ ಹೆಚ್ಚಾಗಿದೆ ಎಂಬ ದ್ವೇಷದಿಂದ ಇಡೀ ಕುಟುಂಬವವನ್ನೇ ಮುಗಿಸಿದೆ’ ಎಂದು ಹೇಳಿಕೆ ನೀಡಿರುವ ಆರೋಪಿ, ‘ನನಗೆ ಈಗ ಯಾವುದೇ ಪಶ್ಚಾತಾಪವಿಲ್ಲ, ಬದಲಾಗಿ ಈಗ ಸಮಾಧಾನವಾಗುತ್ತಿದೆ’ ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ ಎಂಬುದು ಗೊತ್ತಾಗಿದೆ.
‘ಮತ್ತೊಂದೆಡೆ ತಂದೆಯ ಕೃತ್ಯಕ್ಕೆ ಸಹಕಾರ ನೀಡಿರುವುದನ್ನು ಒಪ್ಪಿಕೊಂಡಿರುವ ಮಗಳು, ಅಜ್ಜಿಯ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಡುವುದಾಗಿ ತಂದೆ ಭರವಸೆ ನೀಡಿದ್ದರಿಂದ ಸಹಕರಿಸಿದ್ದಾಗಿ ತಿಳಿಸಿದ್ದಾಳೆ. ತಂದೆಯ ಕೊಲೆ ಯೋಜನೆ ತಿಳಿದಿದ್ದರೂ ಸುಮ್ಮನಿದ್ದ ಮಗಳು, ಕೊಲೆ, ಸಾಕ್ಷ್ಯ ನಾಶ ಹಾಗೂ ಮೃತದೇಹಗಳ ಸಾಗಾಟದಲ್ಲೂ ನೆರವಾಗಿದ್ದಾಳೆ ಎಂಬ ಆರೋಪವಿದೆ. ವಾಯುವಿಹಾರಕ್ಕೆ ಹೋಗಿ ಬರುವ ವೇಳೆ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಲು ಪಿನಾಯಿಲ್ ಮತ್ತು ಲೈಸಾಲ್ ಅನ್ನು ತಂದಿದ್ದಳು’ ಎಂದು ತಿಳಿದು ಬಂದಿದೆ.

