ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕೆ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ನ.17ರಿಂದ ಆರಂಭವಾಗಲಿದೆ.
ನ.17ರಿಂದ 19ರ ಬೆಳಿಗ್ಗೆ 10ರವರೆಗೆ ಮುಂಗಡ ಹಣ ಪಾವತಿಸಿರುವವರು ಆಯ್ಕೆ ಅದಲು-ಬದಲು ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ನ.20ರಂದು ಬೆಳಿಗ್ಗೆ 11ಕ್ಕೆ ತಾತ್ಕಾಲಿಕ ಹಾಗೂ 21ರಂದು ಬೆಳಿಗ್ಗೆ 11ಕ್ಕೆ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ.
ಸೀಟು ಹಂಚಿಕೆಯಾದವರು ನ.23ರಿಂದ 26ರವರೆಗೆ ಚಲನ್ ಡೌನ್ಲೋಡ್ ಮಾಡಿಕೊಂಡು ಶುಲ್ಕ ಪಾವತಿಸಬೇಕು. 23ರಿಂದ 27ರವರೆಗೆ ಕೆಇಎ ಕಚೇರಿಯಲ್ಲಿ ಮೂಲ ದಾಖಲೆ ಸಲ್ಲಿಸುವುದು. ನ.24ರಿಂದ 30ರವರೆಗೆ ಸೀಟು ಖಾತರಿ ಚೀಟಿ ಡೌನ್ಲೋಡ್ ಮಾಡಿಕೊಂಡು ಕಾಲೇಜುಗಳಲ್ಲಿ ಪ್ರವೇಶ ಪಡೆಯಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಹೇಳಿದ್ದಾರೆ.
290 ಉಳಿಕೆ ಸೀಟು: ನಾಳೆಯಿಂದ ಕೌನ್ಸೆಲಿಂಗ್
ಬಿಎಸ್ಸಿ ಕೃಷಿ, ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ಕೋರ್ಸ್ಗಳಲ್ಲಿ 290 ಸೀಟು ಬಾಕಿ ಉಳಿದಿದ್ದು, ಅವುಗಳನ್ನು ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನ.16ರಿಂದ ಮತ್ತೊಂದು ಸುತ್ತಿನ ಕೌನ್ಸೆಲಿಂಗ್ ನಡೆಸಲು ತೀರ್ಮಾನಿಸಿದೆ ಎಂದು ಪ್ರಸನ್ನ ಮಾಹಿತಿ ನೀಡಿದ್ದಾರೆ.
ಈಗಾಗಲೇ ವಿವಿಧ ಕೋರ್ಸ್ ಗಳಿಗೆ ಪ್ರವೇಶ ಪಡೆದಿರುವ ಅರ್ಹರು ಸಂಬಂಧಪಟ್ಟ ಕಾಲೇಜುಗಳಿಂದ ನಿರಾಕ್ಷೇಪಣಾ ಪತ್ರ ಪಡೆದುಕೊಂಡ ನಂತರ ಆಪ್ಷನ್ಸ್ ದಾಖಲಿಸಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
