ಬೆಂಗಳೂರು:  ‘ಓಹೋ, ಪಾರ್ಥ ಅಂದರೆ ಏನು ಗೊತ್ತಾ? ಅರ್ಜುನ ಅಂತ. ಅಂದರೆ ನೀನು ಅರ್ಜುನ. ನಿನಗೆ ಏನೂ ಆಗುವುದಿಲ್ಲ. ಶಾಲೆಗೆ ಹೋಗಿ, ಚೆನ್ನಾಗಿ ಓದು. ತಲೆ ಕೆಡಿಸಿಕೊಳ್ಳಬೇಡ . ..’

ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಹುಡುಗನಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಆತ್ಮವಿಶ್ವಾಸ ತುಂಬಿದ ಪರಿ ಇದು.

ಮಕ್ಕಳ ದಿನಾಚರಣೆ ಪ್ರಯುಕ್ತ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ಶನಿವಾರ ಭೇಟಿ ನೀಡಿದ ಅವರು, ಹಾಸಿಗೆಯಲ್ಲಿ ಮಲಗಿದ್ದ ಪುಟಾಣಿಯೊಬ್ಬನ ಹೆಸರು ಏನೆಂದು ವಿಚಾರಿಸಿದರು. ಪಾರ್ಥಸಾರಥಿ ಎಂದು ಆ ಮಗು ಹೇಳುತ್ತಿದ್ದಂತೆ, ಮೇಲಿನಂತೆ ಧೈರ್ಯ ತುಂಬಿದರು. 

ಆಸ್ಪತ್ರೆಯ ಕಪೂರ್ ಕಟ್ಟಡದ ವಾರ್ಡ್‌ಗಳಿಗೆ ತೆರಳಿದ ಅವರು, ಹಲವು ಮಕ್ಕಳನ್ನು ಮಾತನಾಡಿಸಿ ಅವರ ನೋವಿಗೆ ಕಿವಿಯಾದರು. ಮಕ್ಕಳಿಗೆ ಚಾಕೊಲೇಟ್ ಹಾಗೂ ಹೂವನ್ನು ನೀಡಿ ಕೈಕುಲುಕಿದರು.

ತಮಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಧನುಷ್ ಎಂಬ ಬಾಲಕನ ಬಳಿ ‘ನಿನ್ನದು ಯಾವ ಊರು’ ಎಂದು ಅವರು ಪ್ರಶ್ನಿಸಿದರು. ಆತ ‘ಮಾಗಡಿ ಸಾರ್’ ಎಂದಾಗ ಸುತ್ತಲಿದ್ದವರ ಮುಖದಲ್ಲಿ ನಗು ಅರಳಿತ್ತು. ‘ಮಾಗಡಿ, ಓಹೋ ಕೆಂಪೇಗೌಡರ ಊರು’ ಎಂದ ಮುಖ್ಯಮಂತ್ರಿ, ಧನುಷ್ ಅಂದರೆ ಏನು ಗೊತ್ತಾ? ಬಿಲ್ಲು ಅಂತ. ನೀನು ಬಾಣ ಹೊಡೆಯುತ್ತೀಯಾ? ಎಂದು ಹೇಳಿ ಬೆನ್ನು ಸವರಿದ ಅವರು, ‘ಧನುಷ್ ನಿನಗೆ ಏನು ಆಗಲ್ಲ‌’ ಎಂದು ಶುಭ ಹಾರೈಸಿದರು. 

ಹುಮನಾಬಾದ್‌ನ ಬಾಲಕಿ ಪೂಜಾ ಬಳಿ ಬಂದವರೇ, ‘ನೀನು ಮುಂದೆ ಏನಾಗಬೇಕು ಅಂತಿದ್ದೀಯ? ಎಂದು ಮಗುವಿನ ಕನಸನ್ನು ಕೆದಕಿದರು. ‘ಸಾರ್ ನಾನು ಟೀಚರ್ ಆಗಬೇಕು ಅಂದುಕೊಂಡಿದ್ದೇನೆ’ ಎಂದು ಆಕೆ ಅಂದಳು. ‘ಟೀಚರ್ ಆಗಿ ದೇಶಕ್ಕೆ ಸೇವೆ ಮಾಡು’ ಎಂದು ಹರಸಿದರು.

ವಾರ್ಡ್‌ನ ಮೂಲೆಯಲಿದ್ದ ಸರೋಜಮ್ಮನ ಹತ್ತಿರ ಬಂದು, ಮಗುವಿನ ಹೆಸರು ಕೇಳಿದರು. ಆಕೆಯ ಹೆಸರು ಗಂಗೋತ್ರಿ ಎಂದು ತಿಳಿದ ಬಳಿಕ, ‘ಗಂಗೋತ್ರಿ ಪವಿತ್ರವಾದ ನದಿ. ನಮ್ಮ ಮನೆಗೂ ಇದೇ ಹೆಸರನ್ನು ಇಡಬೇಕು ಅಂದುಕೊಂಡಿದ್ದೀನಿ’ ಎಂದು ಹೇಳಿ ಚಾಕೊಲೇಟ್, ಚಿತ್ರ ಬರೆಯುವ ಪುಸ್ತಕಗಳನ್ನು ನೀಡಿದರು.

 –ಹೀಗೆ ಡಿ.ಕೆ. ಶಿವಕುಮಾರ್ ಅವರು ಮಕ್ಕಳ ಆರೋಗ್ಯ ವಿಚಾರಿಸಿ, ಸಂಸ್ಥೆಯಲ್ಲಿನ ಉಪಚಾರದ ಬಗ್ಗೆ ಪ್ರಶ್ನಿಸಿದರು. ರೋಗಿಗಳನ್ನು ನೋಡಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ತಾಯಂದಿರ ಪಕ್ಕ ಕುಳಿತು, ಅವರ ಯೋಗ ಕ್ಷೇಮ ವಿಚಾರಿಸಿದರು. ‘ಎಲ್ಲ ಸೌಲಭ್ಯ ಕೊಡುತ್ತಾ ಇದ್ದಾರಾ? ಹಣ ಏನಾದರು ಕೇಳುತ್ತಾರಾ’ ಎಂದು ಪ್ರಶ್ನಿಸಿ, ‘ನಿಮ್ಮ ನಿಮ್ಮ ಜಿಲ್ಲೆಗಳಲ್ಲೇ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

200 ಹಾಸಿಗೆ: ‘ಇಂತಹ ಕುಟುಂಬಗಳಿಗೆ ಚಿಕಿತ್ಸೆ ಜತೆಗೆ ಆಸರೆ ಮತ್ತು ಧೈರ್ಯ ನೀಡುವುದು ಸರ್ಕಾರದ ಜವಾಬ್ದಾರಿ‌. ಈ ನಿಟ್ಟಿನಲ್ಲಿ ಸಂಸ್ಥೆಯಲ್ಲಿ ಹೆಚ್ಚುವರಿಯಾಗಿ 200 ಹಾಸಿಗೆಗಳ ವ್ಯವಸ್ಥೆ ಮಾಡಲಾಗುವುದು. ಮಕ್ಕಳೊಂದಿಗೆ ಬರುವ ತಾಯಂದಿರು ಹಾಗೂ ಕುಟುಂಬದ ಸದಸ್ಯರಿಗೆ ವಸತಿ ಕಲ್ಪಿಸಲು 3 ಎಕರೆ ಜಾಗದ ಬೇಡಿಕೆಯನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಡಿ.ಕೆ. ಶಿವಕುಮಾರ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಪುಟ್ಟ ಮಕ್ಕಳಲ್ಲಿಯೂ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿರುವುದು ಕಳವಳಕಾರಿ. ಮಕ್ಕಳಿಗೆ ಅಗತ್ಯವಿರುವ ಎಲ್ಲ ಚಿಕಿತ್ಸಾ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಲು ಸರ್ಕಾರ ಏನು ಮಾಡಬೇಕು ಎಂಬುದರ ಬಗ್ಗೆ ಗಮನ ಹರಿಸಲಾಗುವುದು ‘ಕ್ಯಾನ್ಸರ್ ಚಿಕಿತ್ಸೆಗೆಂದು ಎಲ್ಲರೂ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಬರುವ ಅನಿವಾರ್ಯ ತಪ್ಪಬೇಕು. ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಅಗತ್ಯ ವೈದ್ಯಕೀಯ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ತುಮಕೂರು ಮೈಸೂರು ಬಳ್ಳಾರಿ ಕಲಬುರಗಿ ಹಾಗೂ ರಾಯಚೂರು ಸೇರಿದಂತೆ ಹಲವು ಕಡೆಗಳಲ್ಲಿ ಚಿಕಿತ್ಸಾ ವ್ಯವಸ್ಥೆ ಆರಂಭಿಸಲು ಕಾರ್ಯಕ್ರಮ ರೂಪಿಸಲಾಗಿದ್ದು ಶೀಘ್ರದಲ್ಲೇ ಚಾಲನೆ ನೀಡಲಾಗುವುದು’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.‘ಜಿಲ್ಲೆಗಳಲ್ಲೇ ಕ್ಯಾನ್ಸರ್ ಚಿಕಿತ್ಸೆ’