ಹಾಸನ: ‘ಅಧಿಕಾರಿಗಳು ಯಾವ ರೀತಿ ನಡೆದುಕೊಳ್ಳಬೇಕು ಎಂಬುದಕ್ಕೆ ನಿಯಮಗಳಿದ್ದು, ಅದನ್ನೆಲ್ಲ ಮೀರಿ ಹೋಗಲು ಈ ಸರ್ಕಾರ ಅಧಿಕಾರಿಗಳಿಗೆ ಕುಮ್ಮಕ್ಕು ನೀಡುತ್ತಿದೆ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.
ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆ ರಂಗನಾಥ ಸ್ವಾಮಿ ಬೆಟ್ಟದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಿಲ್ಲಾಧಿಕಾರಿ ತಮ್ಮ ಇತಿಮಿತಿಗಳನ್ನು ಉಲ್ಲಂಘಿಸಿ ಎಲ್ಲ ವಿಷಯಗಳಲ್ಲಿ ಎಲ್ಲೆ ಮೀರಿ ಹೋಗುತ್ತಿದ್ದಾರೆ. ಮುಖ್ಯಮಂತ್ರಿ ಈ ಜಿಲ್ಲಾಧಿಕಾರಿಯ ಪಕ್ಕ ಕುಳಿತುಕೊಂಡಾಗ ಏನೆಲ್ಲಾ ಚರ್ಚೆ ನಡೆದಿದೆಯೋ ಗೊತ್ತಿಲ್ಲ. ಆದರೆ ತನಿಖೆ ಆಗುವ ಮೊದಲೇ ಮುಖ್ಯಮಂತ್ರಿ ಜಿಲ್ಲಾಧಿಕಾರಿಗೆ ಮತ್ತು ಉಳಿದೆಲ್ಲಾ ಅಧಿಕಾರಿಗಳಿಗೆ ಕ್ಲೀನ್ ಚಿಟ್ ಕೊಟ್ಟುಬಿಟ್ಟಿದ್ದಾರೆ. ಇನ್ನು ನಾನು ತನಿಖೆಗೆ ಒತ್ತಾಯಿಸಿ ಏನು ಪ್ರಯೋಜನ’ ಎಂದು ಬೇಸರ ವ್ಯಕ್ತಪಡಿಸಿದರು.
‘ಜಿಲ್ಲಾಧಿಕಾರಿ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ನನಗೆ ಲಭ್ಯವಾದ ವಾಟ್ಸ್ಆ್ಯಪ್ ಚಾಟ್ ಬಗ್ಗೆ ಹೇಳಿದ್ದೇನೆಯೇ ಹೊರತು ಇಂಥವರೇ ನಿರ್ದಿಷ್ಟ ವ್ಯಕ್ತಿಗಳು ಹಣ ಪಡೆದಿದ್ದಾರೆ ಎಂದು ಎಲ್ಲಾದರೂ ಹೇಳಿದ್ದೇನೆಯೇ? ಇದರ ಬಗ್ಗೆ ತನಿಖೆ ನಡೆಸಿ ಎಂದಷ್ಟೇ ಹೇಳಿದ್ದೇನೆ. ಆದರೆ ಇವರು ಪೈಪೋಟಿಗೆ ಬಿದ್ದು ನನ್ನ ವಿರುದ್ಧ ಹೇಳಿಕೆ ಹಾಗೂ ಸ್ಪಷ್ಟನೆಗಳನ್ನು ನೀಡುತ್ತಿದ್ದಾರೆ. ಅವರ ವರ್ತನೆ ನನಗೆ ಆಶ್ಚರ್ಯ ಉಂಟು ಮಾಡಿದೆ’ ಎಂದು ಹೇಳಿದರು.
‘ನನ್ನ ಮುಂದೆ ಆ ವಿಷಯಗಳು ಬಂದಾಗ ತನಿಖೆ ಮಾಡಿ ಅಂಥ ಹೇಳುವುದು ತಪ್ಪಾ? ನಾನು ಪ್ರತಿಪಕ್ಷ ನಾಯಕ ಎಂಬುದು ಇವರಿಗೆ ಅರಿವಿಲ್ಲವೇ? ಹಲವಾರು ವಿಷಯಗಳ ಬಗ್ಗೆ ತನಿಖೆ ಮಾಡಲು ಆಗ್ರಹ ಮಾಡಿದ್ದೇನೆ. ಆ ಪ್ರಕರಣದಲ್ಲಿ ಅವರು ಪಾಲುದಾರರು ಇಲ್ಲದಿದ್ದ ಮೇಲೆ ಏತಕ್ಕೆ ಭಯ? ಇದರಲ್ಲಿ ಆಗಿರುವ ಲೋಪ ಅಥವಾ ನನ್ನಿಂದ ಆಗಿರುವ ಅಪರಾಧವೇನೂ ಎಂಬುದು ತಿಳಿಯುತ್ತಿಲ್ಲ’ ಎಂದರು.
‘ತಕ್ಷಣವೇ ಎಲ್ಲ ಅಧಿಕಾರಿಗಳ ಮೊಬೈಲ್ ಫೋನ್ ಜಪ್ತಿ ಮಾಡಿ ತನಿಖೆಗೆ ಕೊಡಿ ಎಂದು ಒತ್ತಾಯಿಸಿದ್ದೇನೆ. ಅವರು ತನಿಖೆ ಮಾಡುವ ಬದಲು ನನ್ನನ್ನು ನಿಂದಿಸುವ ಮೂಲಕ ಜನರ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಆರೋಪಿಸಿದರು.
ಕಾಂಗ್ರೆಸ್ ದಬ್ಬಾಳಿಕೆಗೆ ಜನರಿಂದಲೇ ಉತ್ತರ
ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲ್ಲೂಕಿನ ಕುರುಬರಹಳ್ಳಿ ಗ್ರಾಮದಲ್ಲಿ ನಿಖಿಲ್ ಕುಮಾರಸ್ವಾಮಿ ಅವರಿಗೆ ದೇವಾಲಯ ಪ್ರವೇಶ ನಿರಾಕರಿಸುವುದು ನಿಜಕ್ಕೂ ಬಹಳ ನೋವಿನ ಸಂಗತಿ ಎಂದು ಎಚ್.ಡಿ. ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ನಮ್ಮ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಹೆಚ್ಚಾಗಿ ನಡೆಯುತ್ತಿವೆ. ಕಾಂಗ್ರೆಸ್ ಕಾರ್ಯಕರ್ತರ ನಡವಳಿಕೆ ರೌಡಿಸಂ ದೌರ್ಜನ್ಯದ ಬಗ್ಗೆ ಅಲ್ಲಿಯ ಜನ ಬುದ್ಧಿ ಕಲಿಸುವ ದಿನ ದೂರವಿಲ್ಲ ಎಂದು ಎಚ್ಚರಿಕೆ ನೀಡಿದರು. ₹500 ಕೋಟಿ ಹಾಗೂ ಸಚಿವ ಸ್ಥಾನದ ಆಮಿಷವೊಡ್ಡಿ ಕಾಂಗ್ರೆಸ್ ಸೇರಲು ಆಹ್ವಾನ ನೀಡಲಾಗಿತ್ತು ಎಂಬ ಜೆಡಿಎಸ್ ಮುಖಂಡ ಕೃಷ್ಣಪ್ಪ ಆರೋಪದ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಇಂತಹ ಪ್ರಯತ್ನಗಳು ಹಿಂದೆ ನಡೆದಿವೆ. ಇದರಲ್ಲಿ ಹೊಸದೇನೂ ಇಲ್ಲ ಎಂದರು. ದಿವಾಳಿ: ಸುವರ್ಣ ಸೌಧದಲ್ಲಿ ವಿದ್ಯುತ್ ಬಿಲ್ ಬಾಕಿ ಉಳಿದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ರಾಜ್ಯ ಸರ್ಕಾರ ಈಗಾಗಲೇ ದಿವಾಳಿಯಾಗಿದೆ ಎಂಬುದಕ್ಕೆ ಇದೊಂದು ದೊಡ್ಡ ಸಾಕ್ಷಿ ಎಂದು ಟೀಕಿಸಿದರು.

