ಉಜಿರೆ (ದಕ್ಷಿಣ ಕನ್ನಡ): ‘ಧರ್ಮಸ್ಥಳ ಗ್ರಾಮಕ್ಕೂ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೂ ಅವಿನಾಭಾವ ಸಂಬಂಧವಿದೆ. ಈ ಕ್ಷೇತ್ರದ ಪ್ರಗತಿ ಹಾಗೂ ಸೇವಾಕಾರ್ಯಗಳ ಯಶಸ್ಸಿನಿಂದ ಮತ್ಸರಗೊಂಡು ಕೆಲವರು ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ’ ಎಂದು ಗ್ರಾಮಸ್ಥರು ಆರೋಪಿಸಿದರು.
ಈ ಕುರಿತು ಧರ್ಮಸ್ಥಳದಲ್ಲಿ ಶನಿವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಧರ್ಮಸ್ಥಳ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶ್ರೀನಿವಾಸ ರಾವ್, ‘ಹಿಂದೂಗಳು, ಜೈನರು, ಮುಸ್ಲಿಮರು, ಕ್ರೈಸ್ತರು ಸೇರಿದಂತೆ ವಿವಿಧ ಧರ್ಮದವರು ಧರ್ಮಸ್ಥಳ ಕ್ಷೇತ್ರದ ಭಕ್ತರಾಗಿದ್ದು, ಶ್ರದ್ಧೆ ಭಕ್ತಿಯಿಂದ ನಡೆದು ಕೊಳ್ಳುತ್ತಾರೆ. ಇಲ್ಲಿ ಸದಾ ಶಾಂತಿ, ನೆಮ್ಮದಿ, ಸಾಮರಸ್ಯ ಹಾಗೂ ಕೋಮು ಸೌಹಾರ್ದತೆ ನೆಲೆಸಿದೆ. ಆದರೂ, ಕೆಲವರು ಕ್ಷೇತ್ರದ ಬಗ್ಗೆ ಅಪಪ್ರಚಾರ ನಡೆಸಿ, ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯುವ ವಿಫಲ ಯತ್ನ ಮಾಡುತ್ತಿದ್ದಾರೆ’ ಎಂದರು.
‘ಧರ್ಮಸ್ಥಳದಲ್ಲಿ 2000ದಿಂದ 2014ರವರೆಗೆ 1,510 ಅಸಹಜ ಸಾವುಗಳು ಆಗಿವೆ ಎಂದು ಗಿರೀಶ ಮಟ್ಟಣ್ಣವರ, ಮಹೇಶ್ ಶೆಟ್ಟಿ ತಿಮರೋಡಿ, ಜಯಂತ ಟಿ. ಹಾಗೂ ಸಂಗಡಿಗರು ಎರಡು ವರ್ಷಗಳಿಂದ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರೂ ಅದೇ ಸಂಖ್ಯೆಯನ್ನು ಉಲ್ಲೇಖಿಸಿ ಅಪಪ್ರಚಾರ ಮಾಡುತ್ತಿದ್ದಾರೆ. ಈ ಅವಧಿಯಲ್ಲಿ ಧರ್ಮಸ್ಥಳ ಮತ್ತು ಸುತ್ತಮುತ್ತ ಆಗಿರುವ ಅಸಹಜ ಸಾವುಗಳ ಸಂಖ್ಯೆ 374 ಎಂಬ ವಿವರ ಪೊಲೀಸ್ ಇಲಾಖೆಯಿಂದ ಮಾಹಿತಿ ಹಕ್ಕಿನಿಂದ ಪಡೆದ ದಾಖಲೆಗಳಲ್ಲಿದೆ’ ಎಂದರು.
‘ಒಟ್ಟು 81 ಗ್ರಾಮಗಳನ್ನು ಹೊಂದಿರುವ ಬೆಳ್ತಂಗಡಿ ದಕ್ಷಿಣ ಕನ್ನಡ ಜಿಲ್ಲೆಯ ಅತಿ ದೊಡ್ಡ ತಾಲ್ಲೂಕು. ಈ ಹಿಂದೆ ತಾಲ್ಲೂಕು ಕೇಂದ್ರವಾದ ಬೆಳ್ತಂಗಡಿಯಲ್ಲಿ ಮಾತ್ರ ಪೊಲೀಸ್ ಠಾಣೆ ಇತ್ತು. ಪುಂಜಾಲಕಟ್ಟೆ, ವೇಣೂರು, ಧರ್ಮಸ್ಥಳ ಠಾಣೆಗಳು ಇತ್ತೀಚೆಗೆ ಆರಂಭವಾಗಿವೆ. ಬೇರೆ ಗ್ರಾಮಗಳಲ್ಲಿ ನಡೆದ ಅಸಹಜ ಸಾವುಗಳ ಸಂಖ್ಯೆಯನ್ನು ಬಳಸಿ ಧರ್ಮಸ್ಥಳದ ಹೆಸರಿಗೆ ಕಳಂಕ ತರುವ ಪ್ರಯತ್ನ ನಡೆದಿದೆ. ಈ ಅಪಪ್ರಚಾರ ತಡೆಯಲು ಕ್ರಮ ವಹಿಸುವಂತೆ ಮುಖ್ಯಮಂತ್ರಿ, ಗೃಹಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಸಕರಿಗೆ ಮನವಿ ಸಲ್ಲಿಸುತ್ತೇವೆ. ನ್ಯಾಯ ಸಿಗದೇ ಇದ್ದರೆ ಕಾನೂನು ರೀತಿ ಹೋರಾಟ ನಡೆಸಲಿದ್ದೇವೆ’ ಎಂದು ಅವರು ತಿಳಿಸಿದರು.
ಗ್ರಾಮಕ್ಕೆ ಸಂಬಂಧಿಸಿದ ಯಾವುದೇ ತೀರ್ಮಾನ ಕೈಗೊಳ್ಳುವ ಮೊದಲು ಸರ್ಕಾರ ಗ್ರಾಮಸ್ಥರ ಅಹವಾಲು ಆಲಿಸಬೇಕು ಎಂದು ಅವರು ಒತ್ತಾಯಿಸಿದರು. ವಕೀಲ ಕೇಶವ ಬೆಳಾಲು ಮತ್ತಿತರರು ಉಪಸ್ಥಿತರಿದ್ದರು.
ಪತ್ತೆಯಾದ ಬುರುಡೆ– ಸಮಗ್ರ ತನಿಖೆಯಾಗಲಿ
ಧರ್ಮಸ್ಥಳ ಸ್ನಾನಘಟ್ಟದ ಬಳಿ ಇತ್ತೀಚೆಗೆ ಮಾನವ ದೇಹದ್ದು ಎನ್ನಲಾದ ತಲೆಬುರುಡೆ ಪತ್ತಯಾದ ಬಗ್ಗೆ ಪ್ರತಿಕ್ರಿಯಿಸಿದ ಶ್ರೀನಿವಾಸ ರಾವ್ ‘ಊಹಾಪೋಹ ನಾಟಕದ ಪರದೆ ಇಳಿದ ಬಳಿಕ ಹೊಸ ನಾಟಕ ಶುರು ಆಗುತ್ತಿದೆ. ಈ ಬುರುಡೆ ಬಗ್ಗೆ ಪೊಲೀಸ್ ಇಲಾಖೆ ಉತ್ತರ ನೀಡಬೇಕೇ ಹೊರತು ಗ್ರಾಮಸ್ಥರು ಅಲ್ಲ. ಈ ಬಗ್ಗೆ ಸರ್ಕಾರ ಸಮಗ್ರ ತನಿಖೆ ನಡೆಸಬೇಕು’ ಎಂದು ಶ್ರೀನಿವಾಸ ರಾವ್ ಒತ್ತಾಯಿಸಿದರು.

