ಮೊಳಕಾಲ್ಮುರು: ತಾಲ್ಲೂಕಿನ ಬಿ.ಜಿ. ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ತಿಗಾರಹಳ್ಳಿಗೆ ಭಾನುವಾರ ರಾಜ್ಯಪಾಲರಾದ ಸುಧಾ ಯಾದವ್ ಭೇಟಿ ನೀಡಿ, ಅಲ್ಲಿನ ಜನರೊಂದಿಗೆ ಸಂವಾದ ನಡೆಸಲಿದ್ದಾರೆ.
ಬಳ್ಳಾರಿ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿರುವ ಅವರು ಮಾರ್ಗಮಧ್ಯೆ ಮುತಿಗಾರಹಳ್ಳಿಗೆ ಸಂಜೆ 4 ಗಂಟೆ ಸುಮಾರಿಗೆ ಆಗಮಿಸಿ, ದೇವರ ಎತ್ತುಗಳ ಪೌಳಿಗೆ ಭೇಟಿ ನೀಡಲಿದ್ದಾರೆ.
ಇಲ್ಲಿನ ಬುಡಕಟ್ಟು ಸಮದಾಯ (ನಾಯಕ ಜನಾಂಗ)ದ ಜನಜೀವನ ಶೈಲಿ, ದೇವರ ಎತ್ತುಗಳ ನಿರ್ವಹಣೆ, ಕಿಲಾರಿಗಳ ಕಾರ್ಯ ನಿರ್ಹಹಣೆ, ಅವರಿಗೆ ಸರ್ಕಾರದಿಂದ ಸಿಗುತ್ತಿರುವ ಸೌಲಭ್ಯಗಳು, ಅಗತ್ಯವಿರುವ ನೆರವಿನ ಬಗ್ಗೆ ಜನಾಂಗದವರ ಜೊತೆ ಸಂವಾದ ನಡೆಸಲಿದ್ದಾರೆ.
ಹಾಗಾಗಿ ಸ್ಥಳದಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಜಿಲ್ಲಾ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಹಶೀಲ್ದಾರ್ ಟಿ. ಜಗದೀಶ್ ಮಾಹಿತಿ ನೀಡಿದರು.
ಗ್ರೇಡ್–2 ತಹಶೀಲ್ದಾರ್ ಸಂತೋಷ್ ಕುಮಾರ್, ತಾಲ್ಲೂಕು ಪಂಚಾಯಿತಿ ಇಒ ಎಂ. ಹನುಮಂತಪ್ಪ, ಸಿಡಿಪಿಒ ನವೀನ್ ಕುಮಾರ್ ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.

