ಬೆಂಗಳೂರು: ಗೆಜೆಡೆಟ್ ಪ್ರೊಬೇಷನರಿ 319 ಹುದ್ದೆಗಳಿಗೆ 15 ಜಿಲ್ಲೆಗಳ 345 ಉಪಕೇಂದ್ರಗಳಲ್ಲಿ ಕೆಪಿಎಸ್ಸಿ ಭಾನುವಾರ ಪೂರ್ವಭಾವಿ ಪರೀಕ್ಷೆ ನಡೆಸಲಿದೆ. ಒಟ್ಟು 1.47 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.
ಕಲಬುರಗಿ, ರಾಯಚೂರು, ಬಳ್ಳಾರಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಬೆಳಗಾವಿ, ಉತ್ತರಕನ್ನಡ, ಶಿವಮೊಗ್ಗ, ದಕ್ಷಿಣ ಕನ್ನಡ, ಹಾಸನ, ದಾವಣಗೆರೆ, ತುಮಕೂರು, ಮೈಸೂರು, ಬೆಂಗಳೂರು ನಗರ ಜಿಲ್ಲೆಗಳ ಉಪಕೇಂದ್ರಗಳಲ್ಲಿ ನಡೆಯಲಿರುವ ಪರೀಕ್ಷೆಗೆ ಆಯಾ ಜಿಲ್ಲೆಗಳ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿವೆ.
ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12ರವರೆಗೆ ಮತ್ತು ಮಧ್ಯಾಹ್ನ 2ರಿಂದ ಸಂಜೆ 4 ಗಂಟೆಯವರೆಗೆ ಎರಡು ಪ್ರಶ್ನೆಪತ್ರಿಕೆಗಳ ಪರೀಕ್ಷೆ ನಡೆಯಲಿದೆ. ಪೊಲೀಸರ ಬಿಗಿ ಭದ್ರತೆಯಲ್ಲಿ ಖಜಾನೆಯಿಂದ ಪ್ರಶ್ನೆಪತ್ರಿಕೆಗಳನ್ನು ಪರೀಕ್ಷಾಕೇಂದ್ರಗಳಿಗೆ ತಲುಪಿಸಲಾಗುತ್ತದೆ.
ವಸ್ತ್ರ ಸಂಹಿತೆ: ಪುರುಷ ಅಭ್ಯರ್ಥಿಗಳು ಜನಿವಾರ, ಉಡುದಾರ ಧರಿಸಿ ಬರಬಹುದು. ಮಹಿಳಾ ಅಭ್ಯರ್ಥಿಗಳು ಕಿವಿಯೋಲೆ ಹೊರತುಪಡಿಸಿ ಮಾಂಗಲ್ಯ ಸರ, ಕೈಬಳೆ, ಮೂಗುತಿ, ಕಾಲುಂಗುರ, ಕಾಲುಗೆಜ್ಜೆ, ಕುಂಕುಮ, ಹಣೆಬೊಟ್ಟು ಧರಿಸಬಹುದು. ಆದರೆ, ಕೈಗೆ ಕಟ್ಟುವ ಧಾರ್ಮಿಕ ಕ್ಷೇತ್ರದ ದಾರಗಳು ಸೇರಿದಂತೆ ಶಿವದಾರ, ಶಿವಲಿಂಗ, ಉಂಗುರ, ತಾಯಿತ, ರುದ್ರಾಕ್ಷಿ ಧರಿಸಬಾರದು.
ಶೂಗಳ ಬದಲಿಗೆ ತೆಳುವಾದ ಚಪ್ಪಲಿಗಳನ್ನು ಧರಿಸುವುದು ಸೂಕ್ತ. ಕ್ಯಾಪ್, ಕಿವಿ, ತಲೆ ಮತ್ತು ಮುಖ ಮುಚ್ಚುವಂತಹ ಯಾವುದೇ ಉಡುಪುಗಳು, ಹೆಚ್ಚು ಜೇಬುಗಳಿರುವ ಜೀನ್ಸ್ ಪ್ಯಾಂಟ್ಗಳು (ಕಡಿಮೆ ಜೇಬುಗಳಿರುವ ಸರಳ ಪ್ಯಾಂಟ್ ಧರಿಸುವುದು ಉತ್ತಮ) ಬ್ಯಾಗ್, ಪರ್ಸ್ ಇತ್ಯಾದಿ ವಸ್ತುಗಳನ್ನು ತರುವಂತಿಲ್ಲ. ಎಲೆಕ್ಟ್ರಾನಿಕ್ ವಸ್ತುಗಳಾದ ಮೊಬೈಲ್ ಫೋನ್, ಬ್ಲೂಟೂತ್, ಇಯರ್ ಫೋನ್, ಸ್ಮಾರ್ಟ್ ವಾಚ್, ಕೈ ಗಡಿಯಾರ, ಕ್ಯಾಮರಾ, ಪೆನ್ ಡ್ರೈವ್, ಎಲೆಕ್ಟ್ರಾನಿಕ್ ಪೆನ್, ಸ್ಕ್ಯಾನರ್ ಇತ್ಯಾದಿ ವಸ್ತುಗಳನ್ನು ಪರೀಕ್ಷಾ ಕೇಂದ್ರದೊಳಗೆ ನಿಷೇಧಿಸಲಾಗಿದೆ.

