ಬೆಂಗಳೂರು: ‘ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ ಜಾರಿಗೊಳಿಸಲಾಗಿದ್ದ ಕಾಯ್ದೆಗೆ ಸಾಂವಿಧಾನಿಕ ರಕ್ಷಣೆ ಒದಗಿಸಲು ಸಂವಿಧಾನಕ್ಕೆ ತಿದ್ದುಪಡಿ ತಂದು 9ನೇ ಪರಿಚ್ಛೇದಕ್ಕೆ ಸೇರಿಸಬೇಕು’ ಎಂದು ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ಪ್ರತ್ಯೇಕವಾಗಿ ಪತ್ರ ಬರೆದಿದ್ದಾರೆ.
‘ಶೈಕ್ಷಣಿಕ ಸಂಸ್ಥೆಗಳು ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಎಸ್ಸಿ ಮೀಸಲಾತಿಯನ್ನು ಶೇ 15ರಿಂದ ಶೇ 17ಕ್ಕೆ ಹಾಗೂ ಎಸ್ಟಿ ಮೀಸಲಾತಿಯನ್ನು ಶೇ 3ರಿಂದ ಶೇ 7ಕ್ಕೆ ಹೆಚ್ಚಿಸಿ ರಾಜ್ಯ ವಿಧಾನಮಂಡಲವು ಮಸೂದೆ ಅಂಗೀಕರಿಸಿತ್ತು. ಬಳಿಕ ಇದನ್ನು ಕಾಯ್ದೆಯಾಗಿಸಲಾಗಿತ್ತು. ಸಂಸತ್ತಿನಲ್ಲಿ ಸಂವಿಧಾನ ತಿದ್ದುಪಡಿ ಮಸೂದೆ ಮಂಡಿಸಿ ಶಾಸನಾತ್ಮಕ ಮಾನ್ಯತೆ ಕೊಡಿಸಬೇಕು’ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
‘ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಿಸಿದ ಪರಿಣಾಮ ಒಟ್ಟು ಮೀಸಲಾತಿ ಪ್ರಮಾಣ ಶೇ 56ಕ್ಕೆ ಏರಿಕೆಯಾಗಿದ್ದು, ಇದು ಶೇ 50ರ ಸಾಂವಿಧಾನಿಕ ಮಿತಿಯನ್ನು ಮೀರಿದೆ ಎಂಬ ಕಾರಣ ನೀಡಿ ಮೀಸಲಾತಿ ಹೆಚ್ಚಳವನ್ನು 2026ರ ಅ. 12ರಂದು ಹೈಕೋರ್ಟ್ ರದ್ದುಗೊಳಿಸಿದೆ. ಹೈಕೋರ್ಟ್ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರ ಈಗಾಗಲೇ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಆದರೆ, ನ್ಯಾಯಾಂಗ ಪ್ರಕ್ರಿಯೆಗಳು ಬಾಕಿ ಇವೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರವು ತನ್ನ ನಿರ್ಧಾರವನ್ನು ಅನಿರ್ದಿಷ್ಟಾವಧಿಯವರೆಗೆ ಮುಂದೂಡಬಾರದು ಮತ್ತು ಶಾಸಕಾಂಗದ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು’ ಎಂದು ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.
‘ರಾಜ್ಯ ಸರ್ಕಾರವು 2023ರ ಮಾರ್ಚ್ 23ರಂದೇ ಕೇಂದ್ರ ಸರ್ಕಾರಕ್ಕೆ ತನ್ನ ಪ್ರಸ್ತಾವ ಸಲ್ಲಿಸಿತ್ತು. ನಂತರ, ಹೆಚ್ಚಿಸಿದ ಮೀಸಲಾತಿ ಚೌಕಟ್ಟಿಗೆ ಸಾಂವಿಧಾನಿಕ ರಕ್ಷಣೆ ಕೋರಿ 2025ರ ಡಿ. 18ರಂದು ವಿಧಾನಸಭೆಯು ನಿರ್ಣಯ ಅಂಗೀಕರಿಸಿತ್ತು. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು 2026ರ ಏ. 16ರಂದು ತಮಗೆ ವಿವರವಾದ ಪತ್ರ ಬರೆದು, ಈ ಕಾಯ್ದೆಯನ್ನು 9ನೇ ಪರಿಚ್ಛೇದಕ್ಕೆ ಸೇರಿಸುವಂತೆ ಪುನರುಚ್ಚರಿಸಿದ್ದರು’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
‘ಅಲ್ಲದೆ, 2026ರ ಜುಲೈ 25ರಂದು ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಕೇಂದ್ರ ಸರ್ಕಾರವು ಕರ್ನಾಟಕದ ಪ್ರಸ್ತಾವ ಸ್ವೀಕೃತ ಆಗಿರುವುದನ್ನು ಒಪ್ಪಿಕೊಂಡಿತ್ತು. ಆದರೆ, ವಿಷಯವು ಹೈಕೋರ್ಟ್ನಲ್ಲಿ ಬಾಕಿ ಇರುವ ಕಾರಣ 9ನೇ ಪರಿಚ್ಛೇದಕ್ಕೆ ಸೇರಿಸುವುದು ಸೂಕ್ತವಲ್ಲ ಎಂದು ತಿಳಿಸಿತ್ತು. ಈಗ ಹೈಕೋರ್ಟ್ ಆದೇಶ ಬಂದಿದ್ದು, ಸೂಕ್ತ ಮೇಲ್ಮನವಿ ಪ್ರಕ್ರಿಯೆಯ ಮೂಲಕ ವಿಷಯವನ್ನು ಮುಂದುವರಿಸಲಾಗುತ್ತಿದೆ’ ಎಂದೂ ವಿವರಿಸಿದ್ದಾರೆ.
‘ಹೈಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಲಾದ ಸಾಂವಿಧಾನಿಕ ವಿಧಿಗಳಾದ 338 (9) ಮತ್ತು 338A (9) ಅಡಿಯಲ್ಲಿ ರಾಷ್ಟ್ರೀಯ ಎಸ್ಸಿ ಮತ್ತು ಎಸ್ಟಿ ಆಯೋಗಗಳೊಂದಿಗೆ ತಕ್ಷಣವೇ ಸಮಾಲೋಚನೆ ನಡೆಸಲು ಕೇಂದ್ರ ಸರ್ಕಾರ ಮುಂದಾಗಬೇಕು’ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
‘ಕಾಲಮಿತಿಯಲ್ಲಿ ಈ ಪ್ರಸ್ತಾವವನ್ನು ಪರಿಶೀಲಿಸಲು ಕೇಂದ್ರ ಕಾನೂನು, ಸಾಮಾಜಿಕ ನ್ಯಾಯ, ಬುಡಕಟ್ಟು ವ್ಯವಹಾರಗಳು ಮತ್ತು ಗೃಹ ಸಚಿವಾಲಯಗಳಿಗೆ ನಿರ್ದೇಶನ ನೀಡಬೇಕು’ ಎಂದೂ ವಿನಂತಿಸಿದ್ದಾರೆ.
‘ತಮಿಳುನಾಡು ಮಾದರಿ ಕರ್ನಾಟಕಕ್ಕೂ ಅನ್ವಯಿಸಿ’
‘ತಮಿಳುನಾಡಿನಲ್ಲಿ ಶೇ 69ರಷ್ಟು ಮೀಸಲಾತಿಗೆ ಅವಕಾಶ ಕಲ್ಪಿಸಲಾಗಿದೆ. ಅದೇ ಮಾದರಿಯಲ್ಲೇ ಕರ್ನಾಟಕದ ಮನವಿಯನ್ನೂ ಪರಿಗಣಿಸಬೇಕು’ ಎಂದು ಶಿವಕುಮಾರ್ ಹಾಗೂ ಪರಮೇಶ್ವರ ಅವರು ಮೋದಿಯವರನ್ನು ಕೋರಿದ್ದಾರೆ.
‘ತಮಿಳುನಾಡು ಸರ್ಕಾರವು ಮೀಸಲಾತಿ ಪ್ರಮಾಣವನ್ನು ಶೇ 69ರಷ್ಟು ಹೆಚ್ಚಿಸಲು ಕಾಯ್ದೆಯನ್ನು ತಂದಿತ್ತು. 1994ರಲ್ಲಿ ಸಂವಿಧಾನದ 76ನೇ ತಿದ್ದುಪಡಿಯ ಮೂಲಕ ಸಂಸತ್ತು 9ನೇ ಪರಿಚ್ಛೇದಕ್ಕೆ ಸೇರಿಸುವ ಮೂಲಕ ರಕ್ಷಣೆ ನೀಡಲಾಗಿತ್ತು. ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಆಯೋಗದ ವೈಜ್ಞಾನಿಕ ವರದಿ ಮತ್ತು 2011ರ ಜನಗಣತಿ ಆಧಾರದಲ್ಲಿ ಕರ್ನಾಟಕವು ಶೇ 56ರಷ್ಟು ಮೀಸಲಾತಿ ಕೇಳುತ್ತಿದೆ’ ಎಂದೂ ಅವರು ಪ್ರತಿಪಾದಿಸಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಲಿ: ಪರಮೇಶ್ವರ
‘ದೇಶದಲ್ಲಿ ಬದಲಾಗುತ್ತಿರುವ ಸಾಮಾಜಿಕ ಪರಿಸ್ಥಿತಿಗೆ ಅನುಗುಣವಾಗಿ ಶೇ 50ರ ಮೀಸಲಾತಿ ಮಿತಿಯ ಪ್ರಸ್ತುತತೆ ಕುರಿತು ರಾಷ್ಟ್ರಮಟ್ಟದಲ್ಲಿ ವ್ಯಾಪಕ ಚರ್ಚೆ ನಡೆಸುವ ಅಗತ್ಯವಿದೆ’ ಎಂದು ಉಪಮುಖ್ಯಮಂತ್ರಿ ಪರಮೇಶ್ವರ ಪ್ರತಿಪಾದಿಸಿದ್ದಾರೆ.
ಮೋದಿಯವರ ಜತೆಗೆ ಗೃಹ ಸಚಿವ ಅಮಿತ್ ಶಾ ಹಾಗೂ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ವೀರೇಂದ್ರ ಕುಮಾರ್ ಅವರಿಗೂ ಪ್ರತ್ಯೇಕ ಪತ್ರಗಳನ್ನು ಪರಮೇಶ್ವರ ಬರೆದಿದ್ದಾರೆ.
‘ಸಾಮಾಜಿಕ ನ್ಯಾಯದ ವಿಚಾರವು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿದ್ದಾಗಿದೆ. ಶತಮಾನಗಳಿಂದ ಅವಕಾಶವಂಚಿತವಾದ ಸಮುದಾಯಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಮಾನ ಅವಕಾಶ ಕಲ್ಪಿಸುವುದು ದೇಶದ ಸಾಮೂಹಿಕ ಕರ್ತವ್ಯ. ಈ ಕಾರಣದಿಂದ, ಕರ್ನಾಟಕದ ದೀರ್ಘಕಾಲದ ಬೇಡಿಕೆಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿ, ನಿಗದಿತ ಅವಧಿಯೊಳಗೆ ನಿರ್ಧಾರ ಕೈಗೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

