ಬೆಂಗಳೂರು: ಪಶು ವೈದ್ಯಾಧಿಕಾರಿ ನೇಮಕಾತಿ ಹಗರಣದ ಆರೋಪಿಯಾಗಿರುವ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಅವರನ್ನು ಕಸ್ಟಡಿಗೆ ಪಡೆದಿರುವ ವಿಶೇಷ ತನಿಖಾ ತಂಡವು (ಎಸ್ಐಟಿ) ವಿಚಾರಣೆಯನ್ನು ತೀವ್ರಗೊಳಿಸಿದೆ.
ಅಕ್ರಮದಲ್ಲಿ ಶಾಮೀಲಾಗಿರುವ ಆರೋಪಿಗಳ ವಿಚಾರಣೆ ನಡೆಸಲು ತೀರ್ಮಾನಿಸಿರುವ ಎಡಿಜಿಪಿ ಆರ್.ಹಿತೇಂದ್ರ ನೇತೃತ್ವದ ಎಸ್ಐಟಿ ತಂಡ, ಸಿಐಡಿ ನಡೆಸಿದ ತನಿಖೆಯನ್ನೇ ಮುಂದುವರಿಸಿದೆ. ಎಸ್ಐಟಿ ಮನವಿಗೆ ಸ್ಪಂದಿಸಿದ ಒಂದನೇ ಎಸಿಎಂಎಂ ನ್ಯಾಯಾಲಯ ಇದೇ 19ರವರೆಗೆ ಸಾಹುಕಾರ ಅವರನ್ನು ವಶಕ್ಕೆ ನೀಡಿದೆ.
ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದರು. ತನಿಖಾ ತಂಡದ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಹುಕಾರ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿ, ಹೇಳಿಕೆಗಳನ್ನು ದಾಖಲು ಮಾಡಿಕೊಳ್ಳುತ್ತಿದ್ದಾರೆ. ತನಿಖೆಯ ವೇಳೆ ಲಭಿಸಿದ ದಾಖಲೆಗಳನ್ನು ಮುಂದಿಟ್ಟು ಕೇಳಲಾದ ಕೆಲವು ಪ್ರಶ್ನೆಗಳಿಗೆ ಅವರು ಸ್ಪಷ್ಟವಾದ ಉತ್ತರ ನೀಡಿಲ್ಲ ಎಂಬುದು ಗೊತ್ತಾಗಿದೆ.
ಪ್ರಕರಣದ ಸಂಬಂಧ ಈಗಾಗಲೇ ಸಿಐಡಿ ತಂಡವು ಶಿವಶಂಕರಪ್ಪ ಸಾಹುಕಾರ, ಸದಸ್ಯೆ ಬಿ.ವಿ. ಗೀತಾ, ಮಧ್ಯವರ್ತಿ ಬಸವರಾಜ್ ಕನ್ನಾಳೆ, ಅಮಾನತುಗೊಂಡಿರುವ ಐಎಎಸ್ ಅಧಿಕಾರಿ ಘ್ಯಾನೇಂದ್ರ ಕುಮಾರ್ ಗಂಗ್ವಾರ್ ಅವರ ವಿಚಾರಣೆ ನಡೆಸಿದೆ.
ನೇಮಕಾತಿ ಹಗರಣದಲ್ಲಿ ಹಣ ಅಕ್ರಮ ವರ್ಗಾವಣೆ ನಡೆದ ಮೇರೆಗೆ ತನಿಖೆ ಕೈಗೊಂಡ ಜಾರಿ ನಿರ್ದೇಶನಾಲಯವು ಶಿವಶಂಕರಪ್ಪ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿತ್ತು. ಈ ನಡುವೆ ಹೈಕೋರ್ಟ್, ತನಿಖೆಗೆ ಎಸ್ಐಟಿ ರಚಿಸಿದೆ.
ಏನಿದು ಪ್ರಕರಣ?: ಕೆಪಿಎಸ್ಸಿ ನಡೆಸಿದ ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಅಭ್ಯರ್ಥಿಯೊಬ್ಬರು ವಿಧಾನಸೌಧ ಠಾಣೆಗೆ ದೂರು ನೀಡಿದ್ದರು. ಇದೇ ಆರೋಪದ ಸಂಬಂಧ ಮತ್ತೆರಡು ಪ್ರಕರಣಗಳು ದಾಖಲಾಗಿದ್ದವು. ನಂತರ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ಬಳಿಕ ಸಿಐಡಿ ಅಧಿಕಾರಿಗಳು ಮಾಜಿ ಅಧ್ಯಕ್ಷ, ಸದಸ್ಯರು ಮತ್ತು ಗಂಗ್ವಾರ್ ಅವರ ವಿಚಾರಣೆ ನಡೆಸಿದ್ದರು.
₹1.22 ಕೋಟಿ ಆಸ್ತಿ ಮುಟ್ಟುಗೋಲು
ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮಪ್ರಕರಣದಲ್ಲಿ ಶಿವಶಂಕರಪ್ಪ ಸಾಹುಕಾರ, ಬಿ.ವಿ.ಗೀತಾ ಮತ್ತು ಘ್ಯಾನೇಂದ್ರ ಕುಮಾರ್ ಗಂಗ್ವಾರ್ ಅವರಿಗೆ ಸೇರಿದ ₹1.22 ಕೋಟಿ ಮೌಲ್ಯದ ಚರಾಸ್ತಿಗಳನ್ನು ಜಾರಿನಿರ್ದೇಶನಾಲಯವು (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ.
ಲಂಚ ನೀಡಿದ್ದ ಆರು ಅಭ್ಯರ್ಥಿಗಳಿಗೆಆರೋಪಿಗಳು ಒದಗಿಸಿದ್ದ ಕೀ ಉತ್ತರಗಳು ತಪ್ಪಾಗಿದ್ದವು. ಹೀಗಾಗಿ, ಪರೀಕ್ಷೆಯ ದಿನ ಪರೀಕ್ಷಾ ಕೊಠಡಿಯಲ್ಲಿ ಆ ಅಭ್ಯರ್ಥಿಗಳ ಜಾಗಗಳನ್ನೇ ಬದಲಿಸಿದ್ದರು ಎಂದೂ ಇ.ಡಿ ತಿಳಿಸಿದೆ.
ಗಂಗ್ವಾರ್ ಅವರು 2026ರ ಜನವರಿ 7ರಂದು 10 ಅಭ್ಯರ್ಥಿಗಳಿಗೆ ಬರಬಹುದಾದ ಪ್ರಶ್ನೆಪತ್ರಿಕೆ ಮತ್ತು ಕೀ ಉತ್ತರಗಳನ್ನು ಮತ್ತೊಬ್ಬ ಆರೋಪಿ ಬಸವರಾಜ ಕನ್ನಾಳೆಗೆ ನೀಡಿದ್ದರು. ಕನ್ನಾಳೆ ಬೆಂಗಳೂರು ಹೊರವಲಯದ ರೆಸಾರ್ಟ್ ಒಂದರಲ್ಲಿ ಆ ಹತ್ತೂ ಅಭ್ಯರ್ಥಿಗಳನ್ನು ಸೇರಿಸಿ, ಜನವರಿ 8ರಂದು ಪ್ರಶ್ನೆಪತ್ರಿಕೆ ಮತ್ತು ಕೀ ಉತ್ತರಗಳನ್ನು ನೀಡಿದ್ದರು. ಜನವರಿ 9ರಂದು ಪರೀಕ್ಷೆ ನಡೆದಿತ್ತು ಎಂದು ತಿಳಿಸಿದೆ.
ಶಿವಶಂಕರಪ್ಪ ಸಾಹುಕಾರ ಅವರ ಕಡೆಯ ಅಭ್ಯರ್ಥಿಗಳಿಗೆ ನೀಡಿದ್ದ ಕೀ ಉತ್ತರಗಳು ತಪ್ಪಾಗಿದ್ದವು. ಅದನ್ನು ಸರಿಪಡಿಸುವ ಉದ್ದೇಶದಿಂದ ಗೀತಾ ಅವರು ಆ ಅಭ್ಯರ್ಥಿಗಳ ಕ್ರಮಸಂಖ್ಯೆಯನ್ನು ಗಂಗ್ವಾರ್ಗೆ ನೀಡಿದ್ದರು. ತಾವು ನೀಡಿದ್ದ ಕೀ ಉತ್ತರಗಳಿಗೆ ಸರಿಹೊಂದುವ ಪ್ರಶ್ನೆಪತ್ರಿಕೆ ಬರುವ ರೀತಿಯಲ್ಲಿ ಗಂಗ್ವಾರ್ ಅವರು ಪರೀಕ್ಷಾ ಕೊಠಡಿಯಲ್ಲಿ ಆ ಅಭ್ಯರ್ಥಿಗಳ ಜಾಗಗಳನ್ನು ಬದಲಿಸಿದ್ದರು ಎಂದು ವಿವರಿಸಿದೆ.
ಈ ನೆರವು ನೀಡಿದ್ದಕ್ಕೆ ಪ್ರತಿಯಾಗಿ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯ ಸಂದರ್ಶನದಲ್ಲಿ ಗಂಗ್ವಾರ್ ಕಡೆಯ ಒಬ್ಬ ಅಭ್ಯರ್ಥಿಗೆ ಹೆಚ್ಚಿನ ಅಂಕ ಕೊಡುವ ಭರವಸೆಯನ್ನು ಶಿವಶಂಕರಪ್ಪ ನೀಡಿದ್ದರು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ತಿಳಿಸಿದೆ. ಶಿವಶಂಕರಪ್ಪ ಅವರು ಅಭ್ಯರ್ಥಿಗಳಿಂದ ₹10 ಲಕ್ಷ ನಗದು ಮತ್ತು ಉಳಿದ ಮೊತ್ತವನ್ನು ಖಾಲಿ ಚೆಕ್ ಹಾಗೂ ಪ್ರಾಮಿಸರಿ ನೋಟ್ಗಳ ಮೂಲಕ ಪಡೆದುಕೊಂಡಿದ್ದರು. ಇತರ ಆರೋಪಿಗಳೂ ಇದೇ ತಂತ್ರ ಅನುಸರಿಸಿದ್ದರು.
ಹೀಗೆ ಪಡೆದಿದ್ದ ಹಣದಲ್ಲಿ ಗಂಗ್ವಾರ್ ಪರವಾಗಿ ₹52.30 ಲಕ್ಷ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳನ್ನು ಖರೀದಿಸಲಾಗಿತ್ತು. ಜತೆಗೆ ಗಂಗ್ವಾರ್ ಮತ್ತು ಕುಟುಂಬದವರ ಪ್ರಯಾಣಕ್ಕಾಗಿ ₹13.31 ಲಕ್ಷ ಮೌಲ್ಯದ ವಿಮಾನಯಾನ ಟಿಕೆಟ್ಗಳನ್ನು ಖರೀದಿಸಲಾಗಿತ್ತು ಎಂದು ವಿವರಿಸಿದೆ.
ಕರ್ನಾಟಕ ಲೋಕಸೇವಾ ಆಯೋಗದ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು (ಇ.ಡಿ), ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ 585 ಪುಟಗಳ ಮುಟ್ಟುಗೋಲು ಹೇಳಿಕೆ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ. 50ಕ್ಕೂ ಹೆಚ್ಚು ಸಾಕ್ಷಿದಾರರ ಹೇಳಿಕೆ, ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಗಳು, ಹಣ ವರ್ಗಾವಣೆ ದಾಖಲೆಗಳನ್ನು ಇದು ಒಳಗೊಂಡಿದೆ ಎಂದು ಮೂಲಗಳು ತಿಳಿಸಿವೆ.585 ಪುಟಗಳ ಮುಟ್ಟುಗೋಲು ಹೇಳಿಕೆ
