ಬೆಂಗಳೂರು: ‘ಮಕ್ಕಳಲ್ಲಿನ ಕ್ರೀಡಾ ಸಾಮರ್ಥ್ಯವನ್ನು ಗುರುತಿಸಿ ತರಬೇತಿ ನೀಡಲು ಪ್ರತಿ ಶಾಲೆಯಲ್ಲೂ ದೈಹಿಕ ಶಿಕ್ಷಣ ಶಿಕ್ಷಕರ ಅಗತ್ಯವಿದೆ. ಆ ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಗಮನ ಹರಿಸಲಿದೆ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.
ಕಂಠೀರವ ಕ್ರೀಡಾಂಗಣದಲ್ಲಿ ಐದನೇ ಮಿನಿ ಕರ್ನಾಟಕ ಕ್ರೀಡಾಕೂಟವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ‘ಶಾಲಾ ಹಂತದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ಒದಗಿಸಲು ಸರ್ಕಾರ ಬದ್ಧವಾಗಿದೆ. ಗ್ರಾಮ ಮಟ್ಟದಿಂದ ಒಲಿಂಪಿಕ್ಸ್ವರೆಗೆ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಕಾರ್ಯವನ್ನು ನಮ್ಮ ಸರ್ಕಾರ ಮಾಡುತ್ತಿದೆ’ ಎಂದರು.
‘ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರಾಜ್ಯದಲ್ಲಿ ಭಾರತ ಜೋಡೊ ಯುವ ಸಂಘಗಳನ್ನು ಪ್ರಾರಂಭಿಸಿದ್ದೇವೆ. 16ರಿಂದ 35 ವರ್ಷದ ಪ್ರತಿಭೆಗಳಿಗೆ ಅಲ್ಲಿ ವೇದಿಕೆ ಕಲ್ಪಿಸಲಾಗುತ್ತದೆ. ಇದಕ್ಕಾಗಿ ಪ್ರತಿ ಪಂಚಾಯಿತಿಗಳಿಗೆ ತಲಾ ₹10 ಲಕ್ಷ ಅನುದಾನ ಒದಗಿಸ ಲಿದ್ದೇವೆ’ ಎಂದು ಮಾಹಿತಿ ನೀಡಿದರು.
‘ಶಾಲಾ ದಿನಗಳಲ್ಲಿ ಜಾವೆಲಿನ್ ಥ್ರೋ, ವಾಲಿಬಾಲ್ ಮತ್ತು ಕ್ರಾಸ್ಕಂಟ್ರಿ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿದ್ದೆ. ಇದೇ ಕಂಠೀರವ ಕ್ರೀಡಾಂಗಣದಲ್ಲಿ ಆಡಿದ್ದೆ. ಕ್ರೀಡೆಯು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣವನ್ನು ಬೆಳೆಸುತ್ತದೆ. ಅದಕ್ಕೆ ನಾನೇ ಉತ್ತಮ ಉದಾಹರಣೆ’ ಎಂದು ಹೇಳಿದರು.
ಕರ್ನಾಟಕ ಒಲಿಂಪಿಕ್ ಸಂಸ್ಥೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿರುವ ಕ್ರೀಡಾಕೂಟವು ಇದೇ 21ರವರೆಗೆ ನಡೆಯಲಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ 14 ವರ್ಷದೊಳಗಿನ 5 ಸಾವಿರಕ್ಕೂ ಅಧಿಕ ಬಾಲಕ- ಬಾಲಕಿಯರು ಪಾಲ್ಗೊಂಡಿದ್ದಾರೆ. ಒಟ್ಟು 27 ಕ್ರೀಡಾ ಪ್ರಕಾರಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.
‘ಪಿಯು ಹಂತದಲ್ಲಿ ಕ್ರೀಡೆ– ಒತ್ತಾಯ’
‘ಪದವಿಪೂರ್ವ ಕಾಲೇಜು ಹಂತದಲ್ಲಿ ಕ್ರೀಡಾ ಚಟುವಟಿಕೆ ಕಡ್ಡಾಯವಿಲ್ಲ. ಹೀಗಾಗಿ, ಕ್ರೀಡಾ ಪ್ರತಿಭೆಗಳ ಬೆಳವಣಿಗೆಗೆ ತೊಡಕಾಗುತ್ತಿದೆ. ಇದನ್ನು ಸರಿಪಡಿಸಿಬೇಕು. ಅಲ್ಲದೆ, ಕ್ರೀಡಾ ಪಟುಗಳಿಗೆ ಶಾಲಾ–ಕಾಲೇಜು ಪರೀಕ್ಷೆಗಳಲ್ಲಿ 5 ಗ್ರೇಸ್ ಅಂಕ ನೀಡಬೇಕು’ ಎಂದು ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಕೆ.ಗೋವಿಂದರಾಜ್ ಅವರು ಸರ್ಕಾರವನ್ನು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ಪಿಯುಸಿ ಹಂತದಲ್ಲಿ ಕ್ರೀಡಾ ಚಟುವಟಿಕೆ ಇಲ್ಲದಿರುವುದು ಆಶ್ಚರ್ಯ ಉಂಟುಮಾಡಿದೆ. ಇದನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ. ಕ್ರೀಡಾಪಟುಗಳಿಗೆ ಗ್ರೇಸ್ ಅಂಕ ನೀಡುವ ಬಗ್ಗೆಯೂ ಪರಿಶೀಲನೆ ಮಾಡುತ್ತೇವೆ’ ಎಂದು ಭರವಸೆ ನೀಡಿದರು.
261115-51-1756692460

