ಹಾರೋಹಳ್ಳಿ: ತಾಲ್ಲೂಕಿನ ದೊಡ್ಡ ಕುರುಬರಹಳ್ಳಿ ಗ್ರಾಮದಲ್ಲಿ ಶುಕ್ರವಾರ ಬಿಸಿಲು ಮಾರಮ್ಮ ದೇವಸ್ಥಾನದ ಉದ್ಘಾಟನಾ ಸಮಾರಂಭಕ್ಕೆ ಬಂದಿದ್ದ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ದೇಗುಲ ಪ್ರವೇಶಕ್ಕೆ ಅವಕಾಶ ನೀಡದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ 6 ಮಂದಿ ವಿರುದ್ಧ ದೂರು ದಾಖಲಾಗಿದೆ. ಮತ್ತೊಂದೆಡೆ ಘಟನೆ ಕುರಿತು ಜೆಡಿಎಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇವಾಲಯಕ್ಕೆ ಬೀಗ ಹಾಕುವ ಮೂಲಕ ನಿಖಿಲ್ ದೇಗುಲ ಪ್ರವೇಶಿಸದಂತೆ ಮಾಡಿ ಶಾಂತಿಗೆ ಭಂಗ ಉಂಟು ಮಾಡಿದ್ದಾರೆ ಎಂದು ಆರೋಪಿಸಿ, ಗ್ರಾಮದ ಸಂದೀಪ್ ಕುಮಾರ್ ಎಂಬುವರು ಗ್ರಾಮದ ಸಂದೀಪ್ ಕುಮಾರ್, ಅನಿಲ್, ಸುನಿಲ್, ರವಿಕುಮಾರ್, ಅಶೋಕ್, ಸುರೇಶ್ ಹಾಗೂ ವಿನೋದ್ ವಿರುದ್ಧ ದೂರು ಕೊಟ್ಟಿದ್ದಾರೆ. ಇವರೆಲ್ಲರೂ ಕಾಂಗ್ರೆಸ್ ಕಾರ್ಯಕರ್ತರು ಎನ್ನಲಾಗಿದೆ.
ದೂರಿನ ಮೇರೆಗೆ ಪೊಲೀಸರು 6 ಮಂದಿ ವಿರುದ್ಧ ಎನ್ಸಿಆರ್ (ನಾನ್ ಕಾಗ್ನಿಜಬಲ್ ರಿಪೋರ್ಟ್) ದಾಖಸಿಕೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ದೂರುದಾರರು ತಮ್ಮ ದೂರಿನಲ್ಲಿ ಹೆಸರಿಸಿರುವವರನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸ್ ಇನ್ಸ್ಪೆಪೆಕ್ಟರ್ ಮಲ್ಲೇಶ್ ತಿಳಿಸಿದ್ದಾರೆ.

ಮುಂದುವರಿದ ಭದ್ರತೆ
ಘಟನೆ ಬಳಿಕ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಶನಿವಾರೂ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮುಂದುವರಿಸಲಾಗಿದೆ. ಪೊಲೀಸ್ ಬಸ್ ಊರಿನಲ್ಲಿ ಬೀಡು ಬಿಟ್ಟಿದ್ದು, ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಪೊಲೀಸರು ನಿಗಾ ಇಟ್ಟಿದ್ದಾರೆ. ಅಹಿತಕರ ಘಟನೆಗೆ ಅವಕಾಶವಿಲ್ಲದಂತೆ ಇನ್ನೂ ಎರಡು ದಿನ ಬಂದೋಬಸ್ತ್ ಮುಂದುವರಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಡೆದಿದ್ದೇನು?: ದೇವಸ್ಥಾನ ಉದ್ಘಾಟನೆ ಹಿನ್ನೆಲೆಯಲ್ಲಿ ನಿಖಿಲ್ ಮಧ್ಯಾಹ್ನ 3 ಗಂಟೆ ಸುಮಾರಿಗೆ ಗ್ರಾಮಕ್ಕೆ ಭೇಟಿ ನೀಡಿದರು. ಈ ವಿಷಯವನ್ನು ಆಯೋಜಕರು ಮೈಕ್ನಲ್ಲಿ ಘೋಷಣೆ ಮಾಡಿದ್ದರು. ಇದೇ ಸಂದರ್ಭದಲ್ಲಿ ಕಿಡಿಗೇಡಿಯೊಬ್ಬ ದೇವಾಲಯಕ್ಕೆ ಬೀಗ ಹಾಕಿಕೊಂಡು ಹೋಗಿದ್ದ. ದೇವರ ದರ್ಶನಕ್ಕಾಗಿ ನಿಖಿಲ್ ಅವರು ಕಾದರೂ, ಆತ ವಾಪಸ್ ಬರಲಿಲ್ಲ. ಮುಕ್ಕಾಲು ತಾಸು ಕಾದ ನಂತರ ಅಲ್ಲಿಂದ
ತೆರಳಿದ್ದರು.
ನಿಖಿಲ್ ದೇಗಲು ಪ್ರವೇಶಕ್ಕೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಗ್ರಾಮದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಕೈ ಕೈ ಮಿಲಾಯಿಸುವ ಹಂತ ತಲುಪಿತ್ತು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದರು. ಘಟನೆಯು ರಾಜಕೀಯ ತಿರುವು ತೆಗೆದುಕೊಂಡ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಘಟನೆಯನ್ನು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಖಂಡಿಸಿದ್ದರು.
ತಡವಾಗಿ ಬಂದ ಪೊಲೀಸರು
‘ದೇವಸ್ಥಾನ ಪ್ರವೇಶಕ್ಕೆ ಅವಕಾಶ ಸಿಗದಂತೆ ಮಾಡಿದ ಕಾಂಗ್ರೆಸ್ನ ಕೆಲ ಪುಡಾರಿಗಳ ನಡೆ ಬೇಸರ ತಂದಿತು. ದೇವಾಲಯ ನಿರ್ಮಾಣಕ್ಕೆ ಗ್ರಾಮಸ್ಥರೆಲ್ಲರೂ ನೆರವಾಗಿರುತ್ತಾರೆ. ನಾವೂ ಮಾಡಿದ್ದೇವೆ. ಇದು ಪಕ್ಷಾತೀತ ಕಾರ್ಯಕ್ರಮ. ಆದರೂ, ನಾನು ಒಂದು ತಾಸು ಕಾದರೂ ಬಾಗಿಲು ತೆಗೆಯಲಿಲ್ಲ. ಹೊರಗಡೆಯೇ ಕೈ ಮುಗಿದು ಹೋಗುತ್ತೇನೆಂದರೂ ಅಲ್ಲಿದ್ದ ಕಾಂಗ್ರೆಸ್ನವರು ಬಾಗಿಲು ತೆಗೆಯಲು ಬಿಡಲಿಲ್ಲ. ಇದೇ ಕಾರಣಕ್ಕೆ ನಮ್ಮ ಬೆಂಬಲಿಗರು ಮತ್ತು ಕಾಂಗ್ರೆಸ್ನವರ ಮಧ್ಯೆ ವಾಗ್ವಾದ ನಡೆಯಿತು. ಇಷ್ಟಾದರೂ ಸ್ಥಳಕ್ಕೆ ಪೊಲೀಸ್ ಇನ್ಸ್ಪೆಕ್ಟರ್ ಸೇರಿದಂತೆ ಯಾರೂ ಬೇಗನೆ ಬರಲಿಲ್ಲ. ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ನಾನೇ ನಮ್ಮವರನ್ನು ತಡೆದೆ. ಅಧಿಕಾರಿಗಳು ಕಾಂಗ್ರೆಸ್ ಏಜೆಂಟರಾಗಿ ಕೆಲಸ ಮಾಡುತ್ತಿದ್ದಾರೆ. ಇದು ಹೆಚ್ಚು ದಿನ ನಡೆಯುವುದಿಲ್ಲ. ಇಂತಹ ನಡೆಯಿಂದ ನನ್ನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಘಟನೆ ಕುರಿತು ನಿಖಿಲ್ ಕುಮಾರಸ್ವಾಮಿ ಶನಿವಾರ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಕಿಡಿಗೇಡಿ ಕೃತ್ಯ ಸರಿಯಲ್ಲ: ಸಚಿವ
‘ಹಾರೋಹಳ್ಳಿಯ ದೊಡ್ಡ ಕುರುಬರಹಳ್ಳಿ ಗ್ರಾಮದಲ್ಲಿ ಬಿಸಿಲು ಮಾರಮ್ಮ ದೇವಾಲಯಕ್ಕೆ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ಪ್ರವೇಶ ನಿರಕಾರಿಸಿದ್ದು ತಪ್ಪು. ಇದು ಒಳ್ಳೆಯ ಬೆಳವಣಿಗೆಯಲ್ಲ. ದೇವಾಲಯ ಯಾರೊಬ್ಬರ ಸ್ವತ್ತಲ್ಲ. ಅದು ಸಮಾಜದ ಸ್ವತ್ತಾಗಿರುವುದರಿಂದ ಎಲ್ಲರಿಗೂ ಮುಕ್ತ ಅವಕಾಶವಿರಬೇಕು. ಯಾರೊ ಕಿಡಿಗೇಡಿ ಮಾಡಿರುವ ಈ ಘಟನೆಯನ್ನು ಯಾರೂ ಒಪ್ಪುವುದಿಲ್ಲ’ ಎಂದು ಘಟನೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಬಾಲಕೃಷ್ಣ ಪ್ರತಿಕ್ರಿಯಿಸಿದರು.
ದೇವರ ವಿಚಾರದಲ್ಲಿ ರಾಜಕೀಯ ಬೇಡ
‘ನಿಖಿಲ್ ಕುಮಾರಸ್ವಾಮಿ ಅವರಿಗೆ ದೇವರ ದರ್ಶನ ಪಡೆಯಲು ಅವಕಾಶ ನೀಡದೆ ಬಾಗಿಲಿಗೆ ಬೀಗ ಹಾಕಿರುವುದು ಅತ್ಯಂತ ಬೇಸರದ ಸಂಗತಿ. ದೇವಸ್ಥಾನ ಭಕ್ತಿಯ ತಾಣ. ಅಲ್ಲಿ ರಾಜಕೀಯ, ಅಧಿಕಾರ, ಸ್ಥಾನಮಾನ ಅಥವಾ ವೈಯಕ್ತಿಕ ಭಿನ್ನಾಭಿಪ್ರಾಯಗಳಿಗೆ ಅವಕಾಶವಿರಬಾರದು. ಭಿನ್ನಾಭಿಪ್ರಾಯವಿದ್ದರೆ ರಾಜಕೀಯ ವೇದಿಕೆಯಲ್ಲಿ ವ್ಯಕ್ತಪಡಿಸಲಿ. ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸುವುದು ಮತ್ತು ತಾರತಮ್ಯ ತೋರುವುದು ಖಂಡನೀಯ. ತಪ್ಪು ಮಾಡಿರುವವರ ವಿರುದ್ಧ ಕಾನೂನು ಕ್ರಮವಾಗಬೇಕು’ ಎಂದು ಘಟನೆ ಕುರಿತು ಸಂಸದ ಡಾ. ಸಿ.ಎನ್. ಮಂಜುನಾಥ್ ಒತ್ತಾಯಿಸಿದ್ದಾರೆ.
‘ತಪ್ಪಿತಸ್ಥರಿಗೆ ತಕ್ಕ ಶಾಸ್ತಿ ಆಗಲಿದೆ’
‘ದೇವಾಲಯದ ಜೀರ್ಣೋದ್ಧಾರಕ್ಕಾಗಿ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ₹4 ಲಕ್ಷ ಕೊಟ್ಟಿದ್ದಾರೆ. ಜೊತೆಗೆ ಪಕ್ಷ ದ ಹಲವರು ಆರ್ಥಿಕ ಸಹಕಾರ ನೀಡಿದ್ದಾರೆ. ಆದರೆ, ಎಲ್ಲವನ್ನು ಕಾಂಗ್ರೆಸ್ ಪಕ್ಷದವರೇ ನಿರ್ವಹಣೆ ಮಾಡಿದ್ದಾರೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿರುವುದು ಖಂಡನೀಯ. ದರ್ಪದ ನಡವಳಿಕೆ ಸರಿಯಲ್ಲ. ಇದಕ್ಕೆ ಬಿಸಿಲು ಮಾರಮ್ಮ ದೇವಿಯೇ ತಕ್ಕ ಶಾಸ್ತಿ ಮಾಡುತ್ತಾಳೆ’ ಎಂದು ಜೆಡಿಎಸ್ ರಾಮನಗರ ತಾಲ್ಲೂಕು ಘಟಕದ ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ ಘಟನೆ ಕುರಿತು ಕಿಡಿಕಾರಿದ್ದಾರೆ.
