ಬೆಂಗಳೂರು, ನವೆಂಬರ್ 07: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ತಮ್ಮ ತಮ್ಮ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಖಾಸಗಿ ಬಸ್ ಮಾಲೀಕರು ಅತಿಯಾದ ದರ ಏರಿಕೆ ಮಾಡುವ ಮೂಲಕ ಭಾರೀ ಶಾಕ್ ನೀಡಿದ್ದಾರೆ. ಇನ್ನೊಂದೆಡೆ, ಪ್ರಯಾಣಿಕರ ಸಂಚಾರದ ಅನುಕೂಲಕ್ಕಾಗಿ ಕೆಎಸ್​ಆರ್​ಟಿಸಿ 2,600 ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸುವ ಮೂಲಕ ಶುಭ ಸುದ್ದಿ ನೀಡಿದೆ. ಹಬ್ಬಕ್ಕಾಗಿ ಜನರು ನಿನ್ನೆಯಿಂದಲೇ (ನ.06) ಊರಿನತ್ತ ಮುಖ ಮಾಡಿದ್ದು, ನಗರದ ಮೆಜೆಸ್ಟಿಕ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಭಾರೀ ಪ್ರಮಾಣದಲ್ಲಿ ಜನಸಂದಣಿ ಕಂಡುಬಂದಿದೆ.

ಕೆಎಸ್​ಆರ್​ಟಿಸಿ ಚೀಫ್ ಟ್ರಾಫಿಕ್ ಮ್ಯಾನೇಜರ್ ಏನಂದ್ರು?

ಈ ಭಾನುವಾರದಿಂದ ಬೆಳಕಿನ ಹಬ್ಬ ದೀಪಾವಳಿ ಆರಂಭವಾಗಲಿದ್ದು, ಬೆಂಗಳೂರಿನ ಮೆಜೆಸ್ಟಿಕ್ ಸೇರಿದಂತೆ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಜನವೋ ಜನ ಜಮಾಯಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಕೆಎಸ್​ಆರ್​ಟಿಸಿ ಚೀಫ್ ಟ್ರಾಫಿಕ್ ಮ್ಯಾನೇಜರ್ ಪ್ರಭಾಕರ ರೆಡ್ಡಿ, “ಇಂದಿನಿಂದ ಬೆಂಗಳೂರಿನಿಂದ ರಾಜ್ಯದ ಹಾಗೂ ಅಂತರರಾಜ್ಯದ ವಿವಿಧ ಸ್ಥಳಗಳಿಗೆ 2,600 ಹೆಚ್ಚುವರಿ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಈ ಹೆಚ್ಚುವರಿ ಬಸ್ಸುಗಳು ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆಯ ಸ್ಯಾಟ್‌ಲೈಟ್ ಬಸ್ ನಿಲ್ದಾಣ ಹಾಗೂ ಶಾಂತಿನಗರ ಬಿಎಂಟಿಸಿ ಬಸ್ ಸ್ಟ್ಯಾಂಡ್‌ಗಳಿಂದ ಸಂಚಾರ ನಡೆಸಲಿವೆ” ಎಂದು ತಿಳಿಸಿದ್ದಾರೆ.

ಖಾಸಗಿ ಬಸ್ ದರ ಏರಿಕೆಯ ಬಿಸಿ

ಹಬ್ಬದ ಸಾಲು ಸಾಲು ರಜೆಗಳನ್ನು ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್ ಮಾಲೀಕರು ಊರಿಗೆ ಹೊರಡುವವರಿಂದ ದುಪ್ಪಟ್ಟು ದರ ವಸೂಲಿಗೆ ಇಳಿದಿದ್ದಾರೆ. ಮಾಮೂಲಿ ದಿನಗಳಿಗಿಂತ ಎರಡ್ಮೂರು ಪಟ್ಟು ಹೆಚ್ಚು ದರ ನಿಗದಿಪಡಿಸಲಾಗಿದೆ.

ಬೆಂಗಳೂರು-ಚಿಕ್ಕಮಗಳೂರು

  • ಹಿಂದಿನ ದರ-366-618
  • ಇಂದಿನ ದರ-1000-1836

ಬೆಂಗಳೂರು-ಮಂಗಳೂರು

  • ಹಿಂದಿನ ದರ-496-1157
  • ಇಂದಿನ ದರ-1785-4999

ಬೆಂಗಳೂರು-ಧಾರವಾಡ

  • ಹಿಂದಿನ ದರ-389-1300
  • ಇಂದಿನ ದರ-1400-7000

ಬೆಂಗಳೂರು-ಹುಬ್ಬಳ್ಳಿ

  • ಹಿಂದಿನ ದರ-660-1700
  • ಇಂದಿನ ದರ-1989-8000

ಬೆಂಗಳೂರು- ಕಾರವಾರ

  • ಹಿಂದಿನ ದರ-542-900
  • ಇಂದಿನ ದರ-1690-6999

ಬೆಂಗಳೂರು-ಕಲ್ಬುರ್ಗಿ

  • ಹಿಂದಿನ ದರ-699-1400
  • ಇಂದಿನ ದರ-1699-4000

ಬೆಂಗಳೂರು-ಶಿವಮೊಗ್ಗ

  • ಹಿಂದಿನ ದರ-450-1100
  • ಇಂದಿನ ದರ-1199-2297

ಬೆಂಗಳೂರು-ಧರ್ಮಸ್ಥಳ

  • ಹಿಂದಿನ ದರ-530-999
  • ಇಂದಿನ ದರ-1199-1800

ಬೆಂಗಳೂರು-ಮೈಸೂರು

  • ಹಿಂದಿನ ದರ-350-1000
  • ಇಂದಿನ ದರ-450-2200

ಬೆಂಗಳೂರು-ಕೊಡಗು

  • ಹಿಂದಿನ ದರ-499-900
  • ಇಂದಿನ ದರ-850-2706

ಪ್ರಯಾಣಿಕರ ತೀವ್ರ ಆಕ್ರೋಶ

ಇತ್ತೀಚೆಗಷ್ಟೇ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರದಲ್ಲೂ ಶೇ 23ರಷ್ಟು ಹೆಚ್ಚಳವಾಗಿದ್ದು, ಖಾಸಗಿ ಬಸ್‌ಗಳ ಗಗನಚುಂಬಿ ದರ ಏರಿಕೆಯಿಂದಾಗಿ ಪ್ರಯಾಣಿಕರಿಗೆ ಎರಡೂ ಕಡೆಯಿಂದ ದರ ಏರಿಕೆಯ ಬಿಸಿ ತಟ್ಟಿದೆ. ಈ ಅಸಹಜ ದರ ಸುಲಿಗೆಗೆ ಸಾರ್ವಜನಿಕರು ಹಾಗೂ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ, ಈ ಬಾರಿಯ ದೀಪಾವಳಿಗೆ ಊರಿಗೆ ತೆರಳುವ ಸಾರ್ವಜನಿಕರಿಗೆ ಪ್ರಯಾಣ ವೆಚ್ಚವೇ ಬಹುದೊಡ್ಡ ಹೊರೆಯಾಗಿ ಪರಿಣಮಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ