ಬೆಂಗಳೂರು: ಕರ್ನಾಟಕದ ಕೆಲವು ಬಂಕ್‌ಗಳಲ್ಲಿ ಮಾರಾಟವಾಗುತ್ತಿರುವ ಪೆಟ್ರೋಲ್‌ನಲ್ಲಿ ಶೇ 31ರಷ್ಟು ಎಥೆನಾಲ್ ಅಂಶವಿದೆ ಎಂಬ ರಾಜ್ಯ ಸರ್ಕಾರದ ಆರೋಪವನ್ನು ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿಗಳು) ತಳ್ಳಿಹಾಕಿವೆ.

ನಿಗದಿತ ನಿಯಮ ಮತ್ತು ತಾಂತ್ರಿಕ ಮಾನದಂಡಗಳ ಪ್ರಕಾರ ಪರೀಕ್ಷೆ ನಡೆಸದಿರುವುದು ಈ ಗೊಂದಲಕ್ಕೆ ಕಾರಣ ಇರಬಹುದು. ಸರ್ಕಾರಕ್ಕೆ ನೀಡಿರುವ ವರದಿಯ ಅಂಶಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಒಎಂಸಿಗಳು ಸ್ಪಷ್ಟಪಡಿಸಿವೆ.

ರಾಜ್ಯದ ಕೆಲವು ಪೆಟ್ರೋಲ್ ಬಂಕ್‌ಗಳಲ್ಲಿ ನಿಗದಿಪಡಿಸಿರುವ ಶೇ 20ರ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಿತ ಪೆಟ್ರೋಲ್ ಪೂರೈಕೆಯಾಗುತ್ತಿದೆ. ಪರೀಕ್ಷೆಯಲ್ಲಿ ಎಥೆನಾಲ್ ಪ್ರಮಾಣ ಶೇ 31.2ರಷ್ಟಿರುವುದು ಪತ್ತೆಯಾಗಿದೆ ಎಂದು ಕರ್ನಾಟಕ ಸರ್ಕಾರ ಆರೋಪಿಸಿತ್ತು. ಈ ಸಂಬಂಧ ತೈಲ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಒತ್ತಾಯಿಸಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ರಿಜ್ವಾನ್ ಅರ್ಷದ್, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಗಳೂರು ಹಾಗೂ ತುಮಕೂರು ಜಿಲ್ಲೆಗಳ ಪೆಟ್ರೋಲ್ ಬಂಕ್‌ಗಳಿಂದ ಸಂಗ್ರಹಿಸಿದ ಮಾದರಿಗಳ ಪರೀಕ್ಷೆಯಲ್ಲಿ ಎಥೆನಾಲ್ ಪ್ರಮಾಣ ನಿಗದಿತ ಶೇ 20ಕ್ಕಿಂತಲೂ ಹೆಚ್ಚಿದೆ ಎಂಬ ಅಂಶ ಬೆಳಕಿಗೆ ಬಂದಿರುವುದಾಗಿ ತಿಳಿಸಿದ್ದರು.

ಸಚಿವರ ಹೇಳಿಕೆಗೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ.

ಪೆಟ್ರೋಲ್‌ನಲ್ಲಿ ಶೇ 31.2ರಷ್ಟು ಎಥೆನಾಲ್: ಕ್ರಮಕ್ಕೆ ಡಿ.ಕೆ. ಶಿವಕುಮಾರ್ ಒತ್ತಾಯಪೆಟ್ರೋಲ್‌ನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಣ: ರಿಜ್ವಾನ್

ರಾಜ್ಯದ ಆಹಾರ, ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆಯು ಕೆಲವು ಪೆಟ್ರೋಲ್ ಬಂಕ್‌ಗಳಲ್ಲಿ ಶೇ 26ರಿಂದ ಶೇ 31ರಷ್ಟು ಎಥೆನಾಲ್ ಹೊಂದಿರುವ ಪೆಟ್ರೋಲ್ ಮಾರಾಟವಾಗುತ್ತಿದೆ ಎಂದು ಹೇಳಿಕೆ ನೀಡಿರುವುದನ್ನು ಗಮನಿಸಿದ್ದೇವೆ. ಆದರೆ, ಇದನ್ನು ಒಪ್ಪಲು ಸಾಧ್ಯವಿಲ್ಲ. ಇದು ಕಾನೂನುಬದ್ಧ ಮತ್ತು ತಾಂತ್ರಿಕ ಕಾರ್ಯವಿಧಾನಗಳ ಪ್ರಕಾರ ಪರೀಕ್ಷೆ ನಡೆದಿಲ್ಲ ಎಂದು ಕಂಪನಿಗಳು ಸ್ಪಷ್ಟಪಡಿಸಿವೆ.

ಕರ್ನಾಟಕ ಸೇರಿದಂತೆ ದೇಶದಾದ್ಯಂತ ತಾವು ಪೂರೈಸುತ್ತಿರುವ E 20 ಪೆಟ್ರೋಲ್, ಭಾರತೀಯ ಮಾನದಂಡಗಳ ಬ್ಯೂರೋ (BIS) ನಿಗದಿಪಡಿಸಿರುವ ಎಥೆನಾಲ್ ಮಿಶ್ರಿತ ಮೋಟಾರ್ ಗ್ಯಾಸೋಲಿನ್‌ಗೆ ಸಂಬಂಧಿಸಿದ IS 17021 ಮಾನದಂಡಗಳಿಗೆ ಅನುಗುಣವಾಗಿದೆ ಎಂದು ಕಂಪನಿಗಳು ಹೇಳಿವೆ.

ಜೊತೆಗೆ ಅಕ್ಟೋಬರ್‌ನಲ್ಲಿ ನಡೆಸಿದ ಮಾದರಿ ಸಂಗ್ರಹ ಪ್ರಕ್ರಿಯೆ ಮತ್ತು ಪರೀಕ್ಷಾ ವಿಧಾನಗಳ ಬಗ್ಗೆಯೂ ಕಂಪನಿಗಳು ಆಕ್ಷೇಪ ವ್ಯಕ್ತಪಡಿಸಿವೆ.

ಅಗತ್ಯ ವಸ್ತುಗಳ ಕಾಯ್ದೆ 1955ರ ಅಡಿಯಲ್ಲಿ ಹೊರಡಿಸಲಾದ ಮೋಟಾರ್ ಸ್ಪಿರಿಟ್ ಮತ್ತು ಹೈ ಸ್ಪೀಡ್ ಡೀಸೆಲ್ (ಪೂರೈಕೆ, ವಿತರಣೆ ನಿಯಂತ್ರಣ ಮತ್ತು ಅಕ್ರಮ ತಡೆ) ಆದೇಶ-2005 ಹಾಗೂ 2024ರ ಮಾರ್ಕೆಟಿಂಗ್ ಡಿಸಿಪ್ಲಿನ್ ಗೈಡ್‌ಲೈನ್ಸ್ (MDG) ಪ್ರಕಾರ, ಪೆಟ್ರೋಲ್ ಮಾದರಿ ಸಂಗ್ರಹ, ಸಂರಕ್ಷಣೆ, ಪರೀಕ್ಷೆ ಮತ್ತು ಫಲಿತಾಂಶಗಳ ಮಾಹಿತಿ ನೀಡಲು ನಿರ್ದಿಷ್ಟ ಕ್ರಮಗಳನ್ನು ಪಾಲಿಸಬೇಕು ಎಂದು ತೈಲ ಕಂಪನಿಗಳು ತಿಳಿಸಿವೆ.