20ನೇ ಶತಮಾನದ ಮಧ್ಯಭಾಗದಲ್ಲಿ ಹುಟ್ಟಿದ್ದ ಕೆ.ವಿ.ನಾರಾಯಣ (20.10.1948 – 06.11.2026) 21ನೇ ಕಾಲುಶತಮಾನದವರೆಗೆ ತಮ್ಮ ಬರವಣಿಗೆಯ ಮೂಲಕ ಸಂಸ್ಕೃತಿ ಚಿಂತನೆಯ ಕ್ರಮಗಳನ್ನು ಗಾಢವಾಗಿ ಅನ್ವೇಷಿಸಿದವರು. ಸಾಹಿತ್ಯ ವಿಮರ್ಶೆ, ಭಾಷಾವಿಜ್ಞಾನ ಮತ್ತು ಸಂಸ್ಕೃತಿ ಚಿಂತನೆಯ ಕ್ಷೇತ್ರದಲ್ಲಿನ ಅವರ ಓದಿನ ಹೊಸ ದಾರಿಗಳು ಸಾಹಿತ್ಯದ ಅಧ್ಯಯನಕಾರರನ್ನು ಪ್ರಭಾವಿಸಿದವು. ಮಾರ್ಕ್ಸ್‌ವಾದಿ ಓದಿನ ಕ್ರಮಗಳು, ನೋಮ್ ಚಾಮ್‌ಸ್ಕಿಯ ಬೌದ್ಧಿಕ ಜವಾಬ್ದಾರಿ, ನಿರಚನವಾದಿ ಓದಿನ ನೋಟಗಳೆಲ್ಲ ಬೆರೆತು ಅವರ ಅನನ್ಯ ಬರಹಕ್ಕೆ ಕಾರಣವಾಗಿದ್ದವು. ಇವೆಲ್ಲ ತಿಳಿವಳಿಕೆಗಳನ್ನಿಟ್ಟುಕೊಂಡರೂ ಅವರ ನಂಬಿಕೆಯ ಮೂಲ ಏನೆಂದರೆ, ಶ್ರೇಷ್ಠ ಕೃತಿಗಳು ತಮ್ಮ ಓದಿನ ದಾರಿಗಳನ್ನು ತಮ್ಮೊಳಗೇ ಅಡಗಿಸಿಟ್ಟುಕೊಂಡಿರುತ್ತವೆ. ಅವುಗಳನ್ನು ಪತ್ತೆಹಚ್ಚುವುದು, ಅವುಗಳ ಮೂಲಕ ಪಯಣಿಸುತ್ತಲೇ ಕೃತಿಯ ಅರ್ಥದ ಸ್ತರಗಳನ್ನು ಕಟ್ಟಿಕೊಳ್ಳುವುದು ಅವರ ಪ್ರಿಯವಾದ ಓದಿನ ಕ್ರಮವಾಗಿತ್ತು.

ಬೌದ್ಧಿಕ ಚಿಂತನೆಯು ಕೇವಲ ಪರಿಭಾಷೆಗಳಲ್ಲಿ ಭಾರವಾಗಿ ತೂಗಿಕೊಳ್ಳುವುದಕ್ಕಿಂತ ಒಂದು ತಿಳಿವಳಿಕೆಯ ಕ್ರಮವಾಗಿ ರೂಪಿಸುವುದರಲ್ಲಿ ಅವರ ಆಸಕ್ತಿ ಹೆಚ್ಚು. ಹೀಗಾಗಿಯೇ ಬೇಂದ್ರೆಯವರ ಸಾಹಿತ್ಯ ತತ್ವ ಕುರಿತು ಅವರು ಬರೆದ ಉತ್ಕೃಷ್ಟ ಲೇಖನ, ಶಂಬಾ ಅವರ ಅಧ್ಯಯನಕ್ಕೆ ಬೇಕಾದ ಸಿಮಿಯಾಟಿಕ್ಸ್ ಮಾದರಿ, ಹೊಸ ಓದುಗರಿಗೆ ಕುವೆಂಪು ಅವರನ್ನು ಅರಿಯಲು ಇರುವ ದಾರಿಗಳು, ಟಿ.ಎಸ್.ಏಲಿಯೆಟ್ ಚಿಂತನೆಗಳ ಮೂಲಕ ಪಾಶ್ಚಾತ್ಯ ಕನ್ನಡಿಗಳಿಗೂ ಕನ್ನಡಿ ಹಿಡಿದ ರೀತಿ ಅವರ ಚಿಂತನೆಯ ದಿಟ್ಟತೆ ಮತ್ತು ಆಳವನ್ನು ಕಾಣಿಸಿತ್ತು. ಸಾಹಿತ್ಯ ಕೃತಿಗಳ ನಿರೂಪಣಾ ಕ್ರಮಗಳನ್ನು ಅವರಂತೆ ನಿಖರವಾಗಿ ಪತ್ತೆ ಹಚ್ಚುವವರು ವಿರಳ. ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕೃತಿಯಲ್ಲಿ ಬಳಕೆಯಾದ ನಿರೂಪಣಾ ಕ್ರಮಗಳನ್ನು ತಲಸ್ಪರ್ಶಿಯಾಗಿ ಕಮ್ಮಟವೊಂದರಲ್ಲಿ ಕಾಣಿಸಿದ್ದರು.

ಒಂದು ಕಾಲಕ್ಕೆ ಸೆಮಿನಾರ್‌ಗಳ ಚಾಂಪಿಯನ್ ಆಗಿದ್ದ ಕೆವಿಎನ್, ನಂತರದಲ್ಲಿ ಅವುಗಳಿಂದ ದೂರವಾದಂತೆ ಕಂಡುಬರುತ್ತದೆ. ಹೊಸ ಪೀಳಿಗೆಯೊಂದಿಗೆ ಕಾಲ ಕಳೆಯತೊಡಗಿದರು. ಅವರೊಂದಿಗೆ ಬೌದ್ಧಿಕ ಸಂವಾದ ಮಾಡುವುದು ಭವಿಷ್ಯದ ಬಗೆಗಿನ ಅವರ ಆಶಾವಾದದ ಒಂದು ಪ್ರತೀಕವಾಗಿತ್ತು. ಕಳೆದ ಹದಿನೈದು ವರ್ಷಗಳಿಂದ ಬೆಸಗರಹಳ್ಳಿ ರಾಮಣ್ಣ ಟ್ರಸ್ಟ್ ಕುಪ್ಪಳಿಯಲ್ಲಿ ಏರ್ಪಡಿಸುವ ಕಮ್ಮಟಗಳನ್ನು ಮುನ್ನಡೆಸುತ್ತಿದ್ದರು. ಒಂದೊಂದು ವಿಷಯದ ಬಗ್ಗೆ ನಡೆಯುತ್ತಿದ್ದ ಕಮ್ಮಟವನ್ನು ಬರುಬರುತ್ತ ಒಂದೊಂದು ಕೃತಿಗೆ ಇಳಿಸಿದರು. ಕೃತಿಯ ಓದಿನ ಅನುಭವ ಸಿದ್ಧಿಸದೆ ಅದರ ಅರ್ಥಗಳೂ ಸಿದ್ಧಿಸುವುದಿಲ್ಲ, ಕೃತಿಯ ಮೂಲೆಮೂಲೆಗೆ ಪಯಣಕ್ಕೆಳೆಸುತ್ತಿದ್ದರು. ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಪಾತ್ರಗಳು, ಊರುಗಳು, ರಾತ್ರಿ ಹಗಲುಗಳು, ಪಕ್ಷಿಪ್ರಾಣಿಗಳು, ಉಡುಪುಗಳು, ಋತುಮಾನದ ಬದಲಾವಣೆಗಳು, ಅಲ್ಲಿಯ ಮೌನಗಳು, ಸಾವುಗಳು ಪ್ರತಿಯೊಂದು ಕೂಡ ಅವರಿಗೆ ಕಂಠಪಾಠವಾಗಿತ್ತು. ಅಲ್ಲಿಯ ಎಲೆಗಳ ಸದ್ದನ್ನೂ, ಕಾಡಿನ ವಾಸನೆಯನ್ನೂ ಬಲ್ಲವರಾಗಿದ್ದರು. ಇಂಥ ಚರ್ಚೆಗಳ ಸಂದರ್ಭದಲ್ಲಿ ಬಹುತೇಕ ಬಾರಿ ಈವರೆಗಿನ ಎಲ್ಲಾ ವಿಮರ್ಶೆಗಳನ್ನು ಅಮಾನತಿನಲ್ಲಿಡುತ್ತಿದ್ದರು. ಪ್ರತಿಯೊಬ್ಬರೂ ಸ್ವಂತ ಓದಿನಲ್ಲಿ ಅದನ್ನು ಅರಿಯುವ, ಹಾಗೆ ಅರಿತದ್ದರ ಮೂಲಗಳನ್ನು ಹುಡುಕುವ, ತಮ್ಮ ಓದಿಗೆ ಕಾರಣವಾದ ಸಂಗತಿಗಳನ್ನು ಮತ್ತೆ ಮತ್ತೆ ಪರೀಕ್ಷೆಗೊಡ್ಡುವ ದಾರಿಗಳಲ್ಲಿ ಪಯಣಿಸುವಂತೆ ಮಾಡುತ್ತಿದ್ದರು.

ಕಳೆದ ಬಾರಿಯ ಕಮ್ಮಟದಲ್ಲಿ ‘ಬೌದ್ಧಿಕ ಆಯಾಸ ಆಗ್ತಾ ಇದೆ. ನಾವು ಡೆಡ್‌ಎಂಡ್ ತಲುಪಿದೆವೇನೊ ಅನ್ನಿಸ್ತಾ ಇದೆ. ಆದ್ರೆ ಕುಪ್ಪಳಿಗೆ ಬಂದಾಗೊಮ್ಮೆ ಒಂಥರದ ಚೈತನ್ಯ ಮರಳಿ ಬಂದಂತಾಗುವುದು’ ಅಂತ ಉತ್ಸಾಹಿತರಾಗಿದ್ದರು. ಓದನ್ನು ಒಂದು ಜೀವನ್ಮರಣದ ಪ್ರಶ್ನೆಯಂತೆ ಸ್ವೀಕರಿಸಿದ್ದರು. ಏನನ್ನು ಓದಬೇಕು, ಹೇಗೆ ಓದಬೇಕು, ಯಾಕೆ ಓದಬೇಕು, ಮಾಹಿತಿಗಾಗಿಯೇ, ದೃಷ್ಟಿಕೋನಕ್ಕಾಗಿಯೇ, ಅನುಭವಕ್ಕಾಗಿಯೇ, ಭಾಷೆಗಾಗಿಯೇ ಯಾವುದು ನಮ್ಮನ್ನು ಓದುವಂತೆ ಮಾಡುತ್ತದೆ? ಓದಿದ ಮೇಲೆ ಏನಾಗುತ್ತದೆ? ಏನಾಗಬೇಕು? ಇದನ್ನು ಹೇಳಿಕೊಳ್ಳಲು ಸಾಧ್ಯವೇ? ಕೃತಿ ಓದಿನ ಹೊತ್ತಿನ ನಮ್ಮ ಏಕಾಗ್ರತೆ ಕುಗ್ಗುತ್ತಿದೆಯೆ? ಕೃತಿಯ ಕಾಲ ಮತ್ತು ಈ ಕಾಲ ಇವುಗಳ ನಡುವಿನ ಸಂಬಂಧವನ್ನು ಹೇಗೆ ಅರ್ಥೈಸುವುದು? ಹೀಗೆ ಹಲವು ಪ್ರಶ್ನೆಗಳ ಗೊಂಡಾರಣ್ಯದಲ್ಲಿ ಇರುವುದು ಅವರಿಗೆ ಇಷ್ಟ. ಪ್ರಶ್ನೆಗಳ ಜಟಿಲತೆಯಲ್ಲಿ ನೋಯದೆ ಓದಿನ ಅನುಭವ ದಕ್ಕುವುದಿಲ್ಲವೆಂದು ಅವರು ನಿರ್ಧರಿಸಿದ್ದರೇನೊ. ನಿಧಾನಗತಿಯ ಓದು ಮರೆಯಾಗುತ್ತಿರುವುದು ನಮ್ಮ ವೈಚಾರಿಕತೆಗೆ ಅಪಾಯವೆಂದು ಸೂಚಿಸಿದರು. ಕನ್ನಡದ ಹೊಸ ತಲೆಮಾರು ಇದನ್ನು ಮೀರುವ ದಾರಿಗಳನ್ನು ಹುಡುಕುವಂತೆ ಪ್ರೇರೇಪಿಸುತ್ತಿದ್ದರು. ನಮ್ಮ ಓದು ಯಾಕೆ ಜಡಗೊಳ್ಳುತ್ತದೆ? ಅದಕ್ಕೂ ಅವರ ಬಳಿ ಹಲವು ಉತ್ತರಗಳಿದ್ದವು. ಯಾವುದೇ ಕೃತಿಯನ್ನು ವಿವರಿಸಲು ಬೇಕಾದ ತಿಳಿವಳಿಕೆ ನಮ್ಮೊಳಗಿದೆ ಎಂದು ಭಾವಿಸಿದ್ದೇವೆ. ಇದು ಕನ್ನಡ ವಿಮರ್ಶಾವಲಯವನ್ನು ನಿಂತನೀರಾಗಿಸಿದೆ ಅಂತ ಬೇಸರಿಸಿಕೊಂಡವರು.

ಅನೇಕ ವೈಚಾರಿಕ ಜಗತ್ತುಗಳು ನಮ್ಮೊಳಗೆ ಪ್ರವೇಶಿಸದಂತೆ ನಮ್ಮ ವ್ಯಕ್ತಿತ್ವವನ್ನು ಕುಬ್ಜಗೊಳಿಸಿಕೊಂಡಿದ್ದರ ಬಗ್ಗೆ ಅವರಿಗೆ ತೀವ್ರ ನಿರಾಶೆಯಿತ್ತು. ಸರ್ವರ ಸಮ್ಮತಿಯ ಸಂತೆಯ ದಾರಿ ಎಂದು ಭಾವಿಸಿದ್ದ ಕೆವಿಎನ್ ಯಾರೂ ನಡೆಯದ ದಾರಿಗಳನ್ನೇ ಹುಡುಕುತ್ತಿದ್ದರು. ಅಂಥ ದಾರಿಗಳನ್ನು ಎಳೆಯರು ಕಂಡುಕೊಳ್ಳುವಂತೆ ಸೂಚಿಸುತ್ತಿದ್ದರು. ಇರುವಿಕೆ ಅಲ್ಲ, ಆಗುವಿಕೆಯೇ ನಮ್ಮ ದಾರಿಯಾಗಬೇಕು ಎನ್ನುವುದು ಅವರ ಪ್ರಿಯವಾದ ಸಾಲು.

ಭಾಷಿಕ ಸಂಸ್ಕೃತಿಯ ಬಗ್ಗೆ ಕೆವಿಎನ್ ಮಾಡಿದ ಕೆಲಸ ಕೂಡ ಮಹತ್ವದ್ದು. ಜಗತ್ತಿನ ಭಾಷಿಕ ಚಿಂತನೆಗಳನ್ನು ಆಳದಲ್ಲಿ ಅರಿತಿದ್ದ ಅವರಿಗೆ ಕನ್ನಡದ ದೈನಂದಿನ ಭಾಷೆಯ ಆತಂಕ ಮತ್ತು ಸಾಧ್ಯತೆಗಳು ನಿಚ್ಚಳವಾಗಿ ಕಾಣುತ್ತಿದ್ದವು. ಭಾಷೆಯ ಸಾಮಾಜಿಕ, ಸಾಮುದಾಯಿಕ ಸಂಗತಿಗಳನ್ನು ಖಚಿತವಾಗಿ ಮಂಡಿಸುತ್ತಿದ್ದರು. ಕನ್ನಡದಂಥ ಭಾಷೆ ತನ್ನ ಉಪಭಾಷೆಗಳಿಂದ ಕಲಿಯದೇ ಹೋದರೆ ಅದರ ಚಾಚುಗಳು ಮೊಂಡಾಗಬಹುದೆಂದು ಸೂಚಿಸಿದವರು. ದಿನದಿನದ ಕನ್ನಡ ಭಾಷೆಯ ಹೊಸ ಪದಗಳನ್ನು ಕಲೆ ಹಾಕಿ ಕನ್ನಡ ಸಂಸ್ಕೃತಿಯ ಚಲನೆಗಳನ್ನು ಕಾಣಿಸಿದವರು. ಯಾವುದೇ ಭಾಷಿಕ ಮತ್ತು ಸಾಹಿತ್ಯಿಕ ಪ್ರಶ್ನೆಗಳನ್ನು ನಮ್ಮ ಬದುಕಿನ ಪ್ರಶ್ನೆಗಳನ್ನಾಗಿ ಎತ್ತಿಕೊಳ್ಳುವುದರಲ್ಲಿ ಅವರಿಗೆ ಆಸಕ್ತಿ. ತಾನು ಏನನ್ನು ಬರೆಯುತ್ತಿದ್ದೇನೆಯೋ ಅದು ನನ್ನ ನಂಬಿಕೆಯ ಭಾಗವಾಗಿದೆಯೇ ಎನ್ನುವುದನ್ನು ಮತ್ತೆ ಮತ್ತೆ ಕೇಳಿಕೊಳ್ಳುತ್ತಿದ್ದರು.

ಕನ್ನಡ ಸಾಹಿತ್ಯ ಕೆಲವು ಅನುಭವಗಳನ್ನು ಭಾಷೆಯಲ್ಲಿ ತರುವ ತುರ್ತನ್ನು ಅನುಭವಿಸುತ್ತಿಲ್ಲ. ಅಂಥ ಅನಿವಾರ್ಯತೆಯನ್ನು ಅನುಭವಿಸದೇ ಇದ್ದರೆ ಕನ್ನಡ ಸಾಹಿತ್ಯ ಕೆಲವೇ ಅನುಭವಗಳ ಗೋದಾಮು ಆಗುವ ಅಪಾಯವಿದೆಯೆಂದು ಹೊಸಬರಿಗೆ ತಮ್ಮ ಅದೃಶ್ಯ ಅನುಭವಗಳನ್ನು ಬರೆಯಲು ಹುರಿದುಂಬಿಸುತ್ತಿದ್ದರು. ಹೊಸ ಚಿಂತನೆಗಳನ್ನು ಹುಟ್ಟುಹಾಕಲು ಕನ್ನಡ ಜಗತ್ತು ಯಾಕೆ ಹಿಂಜರಿಯುತ್ತಿದೆ? ಈಗಿರುವ ಚಿಂತನೆಗಳಿಗೇ ತನ್ನ ಅನುಭವಗಳನ್ನು ಒಗ್ಗಿಸಿಕೊಳ್ಳುತ್ತಿರುವುದು ಏನನ್ನು ಸೂಚಿಸುತ್ತಿದೆ? ಅವರ ಇಂಥ ಚರ್ಚೆಗಳ ಭಾಗವಾಗುವುದೇ ಒಂದು ದೊಡ್ಡ ಸಂತೋಷವಾಗಿತ್ತು.

ಐಡಿಯಾಲಜಿಯನ್ನು ಬೆಳೆಸದೇ ಬಳಸುವುದನ್ನು ನಿರಾಕರಿಸಿದ ಕೆವಿಎನ್ ವಿಮರ್ಶೆಯ ನ್ಯಾಯಪ್ರಜ್ಞೆಯನ್ನು, ಸಮುದಾಯದ ಉತ್ತರದಾಯಿತ್ವವನ್ನು ಎಂದೂ ಮರೆಯಲಿಲ್ಲ. ಸಾಹಿತ್ಯ ಚಿಂತನೆಯ ತಾತ್ವಿಕ ಸ್ವರೂಪಗಳನ್ನೂ, ಅದರ ಪ್ರಾಯೋಗಿಕ ಸ್ವರೂಪವನ್ನೂ ಒಟ್ಟಿಗೆ ನೋಡಿದರು. ಐಡಿಯಾಲಜಿಯ ರೂಪದಲ್ಲಿದ್ದದ್ದು ಪ್ರಾಯೋಗಿಕವಾಗತೊಡಗಿದಾಗ ಆಗುವ ಬದಲಾವಣೆಗಳನ್ನು ವಿಶ್ಲೇಷಿಸುತ್ತಿದ್ದರು. ಯಾವುದೇ ಐಡಿಯಾಲಜಿಗೆ ಕೊಡುವ ಪರಮಾಧಿಕಾರವು ಆ ಐಡಿಯಾಲಜಿಯ ನಾಶಕ್ಕೆ ಇಟ್ಟ ಮೊದಲ ಪೆಟ್ಟು ಎಂದಿದ್ದರು. ಅವರ ಅತ್ಯಂತ ಹರಿತವಾದ ಚಿಂತನಾ ಕ್ರಮಗಳು ಕನ್ನಡ ಲೋಕವನ್ನು ಬಹುಕಾಲದವರೆಗೆ ಕಾಯಬಲ್ಲವು. ಇಪ್ಪತ್ತನೇ ಶತಮಾನದ ಕೊನೆಯಲ್ಲಿ ಮತ್ತು ಇಪ್ಪತ್ತೊಂದನೇ ಶತಮಾನದ ಮೊದಲಲ್ಲಿ ಕನ್ನಡವೇ ರೂಪಿಸಿದ ಜೀನಿಯಸ್ ಆಗಿದ್ದರು ಕೆವಿಎನ್. ಅವರ ಚಿಂತನೆಯ ಪ್ರಖರ ಬೆಳಕನ್ನು ಅರ್ಥ ಮಾಡಿಕೊಳ್ಳಲು ಕನ್ನಡಕ್ಕಿನ್ನೂ ಕೆಲ ಸಮಯ ಬೇಕು. ಆಳದಲ್ಲಿ ತಿಳಿಯಾಗಿದ್ದೂ ಜಟಿಲವಾಗಿ ಕಾಣುತ್ತಿದ್ದ ಕೆವಿಎನ್ ಕನ್ನಡ ಚಿಂತನೆಗೆ ಕನ್ನಡಿ ಮತ್ತು ಕೈದೀವಿಗೆ.