ಕನ್ನಡ ಭಾಷೆಯು ಸಾವಿರಾರು ವರ್ಷಗಳ ಇತಿಹಾಸ, ಶ್ರೀಮಂತ ಸಾಹಿತ್ಯ ಪರಂಪರೆ ಮತ್ತು ವಿಶಿಷ್ಟ ಸಾಂಸ್ಕೃತಿಕ ವೈಭವವನ್ನು ಹೊಂದಿದೆ. ಇಂತಹ ಪ್ರಾಚೀನ ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರಕಿಸಿಕೊಡುವುದು ಕನ್ನಡಿಗರ ಬಹುದಿನಗಳ ಕನಸಾಗಿತ್ತು. ಈ ನಿಟ್ಟಿನಲ್ಲಿ ಸಾಹಿತಿಗಳು, ಭಾಷಾತಜ್ಞರು, ಕನ್ನಡಪರ ಸಂಘಟನೆಗಳು ಹಲವು ವರ್ಷಗಳ ಕಾಲ ಹೋರಾಟ ನಡೆಸಿದರು. ಇವರೆಲ್ಲರ ಪ್ರಯತ್ನದ ಫಲವಾಗಿ 2008ರಲ್ಲಿ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆಯಿತು.

ಶಾಸ್ತ್ರೀಯ ಭಾಷೆ ಎಂದರೆ ಪ್ರಾಚೀನ ಇತಿಹಾಸ, ವಿಶಿಷ್ಟ ಸಾಹಿತ್ಯ ಪರಂಪರೆ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿರುವ ಭಾಷೆ. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಸಂಸ್ಕೃತ, ಅರೇಬಿಕ್ ಮತ್ತು ಪರ್ಷಿಯನ್ ಭಾಷೆಗಳಿಗೆ ಈ ಸ್ಥಾನಮಾನವನ್ನು ನೀಡಲಾಗಿತ್ತು. ನಂತರ ಭಾರತೀಯ ಭಾಷೆಗಳಿಗೂ ಈ ಸ್ಥಾನಮಾನ ನೀಡಬೇಕೆಂಬ ಬೇಡಿಕೆ ಬಲಗೊಂಡಿತು.

ತಮಿಳು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಬೇಕೆಂಬ ಬೇಡಿಕೆಯು ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆಯಿತು. ತಮಿಳು ಭಾಷೆಯ ಪ್ರಾಚೀನ ಸಾಹಿತ್ಯ ಪರಂಪರೆ ಮತ್ತು ಸ್ವತಂತ್ರ ಬೆಳವಣಿಗೆಯನ್ನು ಆಧರಿಸಿ ಶಾಸ್ತ್ರೀಯ ಸ್ಥಾನಮಾನ ನೀಡಬೇಕೆಂದು ಹಲವು ವಿದ್ವಾಂಸರು ಪ್ರತಿಪಾದಿಸಿದರು. 2004ರಲ್ಲಿ ಕೇಂದ್ರ ಸರ್ಕಾರ ತಮಿಳು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಿತು. 2005ರಲ್ಲಿ ಸಂಸ್ಕೃತಕ್ಕೂ ಈ ಸ್ಥಾನಮಾನ ದೊರೆಯಿತು.

ತಮಿಳು ಮತ್ತು ಸಂಸ್ಕೃತ ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ ದೊರೆತ ನಂತರ ಕನ್ನಡಕ್ಕೆ ಏಕೆ ಈ ಗೌರವ ನೀಡಲಾಗಿಲ್ಲ ಎಂಬ ಪ್ರಶ್ನೆ ಕನ್ನಡದ ಸಾಹಿತಿಗಳು, ಭಾಷಾತಜ್ಞರು ಮತ್ತು ಬುದ್ಧಿಜೀವಿಗಳಲ್ಲಿ ಮೂಡಿತು. ಕನ್ನಡ ಭಾಷೆಯು ತಮಿಳಿನಷ್ಟೇ ಪ್ರಾಚೀನವಾದ ಸಾಹಿತ್ಯ ಪರಂಪರೆ ಮತ್ತು ವಿಶಿಷ್ಟ ಭಾಷಾ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದನ್ನು ಅವರು ವಿವಿಧ ದಾಖಲೆಗಳು ಮತ್ತು ಸಂಶೋಧನೆಗಳ ಮೂಲಕ ಪ್ರತಿಪಾದಿಸಿದರು.

ಕನ್ನಡದ ಪ್ರಾಚೀನತೆಯನ್ನು ಸಾಬೀತುಪಡಿಸಲು ಹಲವಾರು ಐತಿಹಾಸಿಕ ಆಧಾರಗಳನ್ನು ಮುಂದಿಡಲಾಯಿತು. ಕೊಡಗಿನ ಬ್ರಹ್ಮಗಿರಿ ಪ್ರದೇಶದ ಅಶೋಕನ ಶಾಸನದಲ್ಲಿ ಕಂಡುಬರುವ ‘ಇಸಿಲ’ ಎಂಬ ಪದ, ಐದನೇ ಶತಮಾನದ ಹಲ್ಮಿಡಿ ಶಾಸನ ಹಾಗೂ ಒಂಬತ್ತನೇ ಶತಮಾನದ ಕವಿರಾಜಮಾರ್ಗ ಕೃತಿ ಕನ್ನಡದ ಪ್ರಾಚೀನತೆ ಮತ್ತು ಸಾಹಿತ್ಯಿಕ ಬೆಳವಣಿಗೆಗೆ ಪ್ರಮುಖ ಸಾಕ್ಷಿಗಳಾಗಿದ್ದವು.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿಸಿಕೊಡುವ ಹೋರಾಟದಲ್ಲಿ ಅನೇಕ ಹಿರಿಯ ಸಾಹಿತಿಗಳು ಮತ್ತು ಭಾಷಾ ತಜ್ಞರು ಮಹತ್ವದ ಪಾತ್ರ ವಹಿಸಿದರು. ದೇ. ಜವರೇಗೌಡ, ಪ್ರೊ. ಚಿದಾನಂದಮೂರ್ತಿ, ಎಲ್. ಎಸ್. ಶೇಷಗಿರಿರಾವ್ ಮತ್ತು ಪ್ರೊ. ಜಿ. ಎಸ್. ಶಿವರುದ್ರಪ್ಪ ಮೊದಲಾದವರು ಕನ್ನಡದ ಪ್ರಾಚೀನತೆ, ಸಾಹಿತ್ಯಿಕ ಶ್ರೀಮಂತಿಕೆ ಮತ್ತು ಭಾಷಾ ವೈಶಿಷ್ಟ್ಯಗಳನ್ನು ಎತ್ತಿಹಿಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು, ಸಂಶೋಧಕರು, ರಾಜಕೀಯ ಮುಖಂಡರು ಮತ್ತು ಕನ್ನಡ ಅಭಿಮಾನಿಗಳು ಈ ಬೇಡಿಕೆಗೆ ಬೆಂಬಲ ನೀಡಿದರು. ಸಭೆಗಳು, ವಿಚಾರ ಸಂಕಿರಣಗಳು, ಮನವಿಗಳು ಮತ್ತು ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯಲಾಯಿತು.

ಈ ಹೋರಾಟವು ಕೇವಲ ಒಂದು ಅಧಿಕೃತ ಸ್ಥಾನಮಾನವನ್ನು ಪಡೆಯುವ ಪ್ರಯತ್ನವಾಗಿರಲಿಲ್ಲ. ಅದು ಕನ್ನಡ ಭಾಷೆಯ ಅಸ್ಮಿತೆ, ಸ್ವಾಭಿಮಾನ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಚಳವಳಿಯಾಗಿತ್ತು.

ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಗಲು ಸಹಕಾರಿಯಾಗಿದ್ದು ಮುಳಬಾಗಿಲು ತಾಲ್ಲೂಕಿನ ಮೂಡಿಯನೂರು ಗ್ರಾಮದಲ್ಲಿ ಸಿಕ್ಕಿದ ತಾಮ್ರದ ತಾಳೆಗಿರಿ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವ ವಿಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಿ 2018ರಲ್ಲಿ ಮದ್ರಾಸ್ ಹೈಕೋರ್ಟ್‌ನಲ್ಲಿ ವಕೀಲ ಆರ್.ಗಾಂಧಿ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ತಿರಸ್ಕರಿಸಿತು. ಈ ತಾಳೆಗೆರೆಗಳನ್ನು ಕೋರ್ಟ್‌ಗೆ ಪೂರಕ ದಾಖಲೆಗಳಾಗಿ ಕರ್ನಾಟಕ ಸರ್ಕಾರ ಸಲ್ಲಿಸಿತ್ತು. ಕನ್ನಡಕ್ಕೆ ಪ್ರಾಚೀನ ಇತಿಹಾಸ ಇದೆ ಎಂಬುದಕ್ಕೆ ಈ ತಾಳೆಗಿರಿಗಳೇ ಸಾಕ್ಷಿ ಎಂಬುದನ್ನು ಮದ್ರಾಸ್‌ ಕೋರ್ಟ್‌ ಕೂಡ ಪರಿಗಣಿಸಿತ್ತು.ತಾಳೆ‌ಗರಿಯೇ ಸಾಕ್ಷ್ಯ

ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಬೇಕೆಂಬ ಬೇಡಿಕೆ ಬಲಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ತಜ್ಞರ ಸಮಿತಿಯ ಮೂಲಕ ಈ ವಿಷಯವನ್ನು ಪರಿಶೀಲಿಸಿತು. ಸಮಿತಿಯು ಲಭ್ಯವಿದ್ದ ದಾಖಲೆಗಳನ್ನು ಪರಿಶೀಲಿಸಿ, ಕನ್ನಡ ಮತ್ತು ತೆಲುಗು ಭಾಷೆಗಳು ಶಾಸ್ತ್ರೀಯ ಸ್ಥಾನಮಾನ ಪಡೆಯಲು ಅರ್ಹವೆಂದು ಶಿಫಾರಸು ಮಾಡಿತು.

2008ರ ಅಕ್ಟೋಬರ್ 31ರಂದು ಅಂದಿನ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವೆ ಅಂಬಿಕಾ ಸೋನಿ ಅವರು ಕನ್ನಡ ಮತ್ತು ತೆಲುಗು ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ ನೀಡಿರುವುದಾಗಿ ಘೋಷಿಸಿದರು. ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳು ನವೆಂಬರ್ 1ರಂದು ರಾಜ್ಯೋತ್ಸವ ಆಚರಿಸುವ ಸಂದರ್ಭದಲ್ಲಿ ಈ ಘೋಷಣೆ ಹೊರಬಂದದ್ದು ವಿಶೇಷ ಮಹತ್ವವನ್ನು ಪಡೆದಿತ್ತು.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತಿರುವುದರಿಂದ ಕನ್ನಡ ಭಾಷೆಯ ಅಧ್ಯಯನ, ಸಂಶೋಧನೆ ಮತ್ತು ಪ್ರಾಚೀನ ಸಾಹಿತ್ಯದ ಸಂರಕ್ಷಣೆಗೆ ಹೆಚ್ಚಿನ ಅವಕಾಶಗಳು ಸೃಷ್ಟಿಯಾದವು. ಈ ಸ್ಥಾನಮಾನದ ಪ್ರಮುಖ ಉದ್ದೇಶಗಳಲ್ಲಿ ಕನ್ನಡದ ಪ್ರಾಚೀನ ಕೃತಿಗಳನ್ನು ಸಂರಕ್ಷಿಸುವುದು, ಹಸ್ತಪ್ರತಿಗಳನ್ನು ಅಧ್ಯಯನ ಮಾಡುವುದು, ಸಂಶೋಧನೆಗೆ ಉತ್ತೇಜನ ನೀಡುವುದು ಮತ್ತು ಕನ್ನಡದ ವೈಭವವನ್ನು ಇತರ ಭಾಷೆಗಳ ಜನರಿಗೆ ಪರಿಚಯಿಸುವುದು ಸೇರಿವೆ.

ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಅಧ್ಯಯನಕ್ಕೆ ಉತ್ತೇಜನ ನೀಡುವುದು, ಪ್ರಾಚೀನ ಸಾಹಿತ್ಯವನ್ನು ಪ್ರಕಟಿಸುವುದು, ಅನುವಾದ ಕಾರ್ಯಗಳನ್ನು ಕೈಗೊಳ್ಳುವುದು ಮತ್ತು ಯುವ ಸಂಶೋಧಕರಿಗೆ ಅವಕಾಶ ಕಲ್ಪಿಸುವುದು ಶಾಸ್ತ್ರೀಯ ಸ್ಥಾನಮಾನದ ಮಹತ್ವದ ಉದ್ದೇಶಗಳಾಗಿವೆ.