ಬೆಂಗಳೂರು: ‘ಕರ್ನಾಟಕದ ಖಾದಿ ಉತ್ಪನ್ನಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿ, ಜಾಗತಿಕ ಮಾರುಕಟ್ಟೆಯಲ್ಲಿ ಖಾದಿಗೆ ಬೇಡಿಕೆ ಹೆಚ್ಚಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಯೋಜನೆ ರೂಪಿಸಬೇಕು’ ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ವಿಜಯಾನಂದ ಎಸ್. ಕಾಶಪ್ಪನವರ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಖಾದಿ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಖಾದಿ, ಉಣ್ಣೆ ಮತ್ತು ರೇಷ್ಮೆ ಸಂಘ- ಸಂಸ್ಥೆಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ರಾಜ್ಯದ ಗ್ರಾಮೀಣ ಪ್ರದೇಶಗಳ ಸಾವಿರಾರು ಕಸುಬುದಾರರ ಜೀವನಾಧಾರವಾಗಿರುವ ಈ ಉದ್ಯಮಕ್ಕೆ ಆಧುನಿಕ ಮಾರುಕಟ್ಟೆ ಮತ್ತು ಜಾಗತಿಕ ಬ್ರ್ಯಾಂಡಿಂಗ್ ಅಗತ್ಯವಿದೆ. ಇದಕ್ಕಾಗಿ ಜಾಗತಿಕ ಮಟ್ಟದಲ್ಲಿ ಖಾದಿಯ ರಾಯಭಾರಿಗಳಾಗಿ ಕಾರ್ಯನಿರ್ವಹಿಸುವ ವ್ಯಕ್ತಿಗಳನ್ನು ಗುರುತಿಸಿ ನೇಮಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಖಾದಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ಅನುದಾನವನ್ನು ಹೆಚ್ಚಿಸುವ ಉದ್ದೇಶದಿಂದ 2027–28ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ₹100 ಕೋಟಿ ಮೊತ್ತದ ವಿಶೇಷ ಪ್ರಸ್ತಾವನೆ ಸಿದ್ಧಪಡಿಸಿ. ಖಾದಿ ಉತ್ಪಾದನಾ ಸಂಸ್ಥೆಗಳ ಮೂಲಸೌಕರ್ಯ ಅಭಿವೃದ್ಧಿ, ಆಧುನಿಕ ಯಂತ್ರೋಪಕರಣಗಳ ಅಳವಡಿಕೆ, ಸಾಮಾನ್ಯ ಸೇವಾ ಕೇಂದ್ರಗಳ ಸ್ಥಾಪನೆ, ಮಾರುಕಟ್ಟೆ ವಿಸ್ತರಣೆ, ಬ್ರ್ಯಾಂಡಿಂಗ್, ಡಿಜಿಟಲ್ ಹಾಗೂ ಆನ್‌ಲೈನ್ ಮಾರುಕಟ್ಟೆ ವ್ಯವಸ್ಥೆ, ಕಸುಬುದಾರರ ಕಲ್ಯಾಣ ಸೇರಿದಂತೆ ವಿವಿಧ ಉದ್ದೇಶಗಳಿಗೆ ಬಳಸುವಂತೆ ಸಮಗ್ರ ಯೋಜನೆ ರೂಪಿಸಿ’ ಎಂದು ನಿರ್ದೇಶನ ನೀಡಿದರು.

ಖಾದಿ ಉತ್ಪನ್ನಗಳ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸ ಹೆಚ್ಚಿಸಲು ಕಾವೇರಿ ಎಂಪೋರಿಯಂ ಮಾದರಿಯಲ್ಲಿ ಜಿಲ್ಲಾಕೇಂದ್ರಗಳಲ್ಲಿ ಖಾದಿ ಶೋರೂಂಗಳನ್ನು ಸ್ಥಾಪಿಸುವ ಕುರಿತು ಪರಿಶೀಲನೆ ನಡೆಸಲಾಗುವುದು

ವಿಜಯಾನಂದ ಎಸ್. ಕಾಶಪ್ಪನವರ, ಸಚಿವ

261107-4-460353446