ಬೆಂಗಳೂರು: ‘ಎಚ್.ಡಿ. ದೇವೇಗೌಡರು 2010-11ರಲ್ಲಿ ಯಡಿಯೂರಪ್ಪಅವರಿಗೆ ಏನು ಬೈದಿದ್ದರು? ಎಚ್.ಡಿ. ಕುಮಾರಸ್ವಾಮಿ ಅವರ ಅಪ್ಪಾಜಿ, ಬಿ.ವೈ. ವಿಜಯೇಂದ್ರ ಅವರ ಅಪ್ಪಾಜಿಗೆ ಬೈದಿದ್ದ ಆ ವಿಡಿಯೊ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರಿಗೆ ತೋರಿಸಲಿ’ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಯಡಿಯೂರಪ್ಪ ವಿರುದ್ಧ ಅಂದು ದೇವೇಗೌಡರು ಆಡಿತ ಮಾತಿಗೆ ಬಿಜೆಪಿ ನಾಯಕರು ಏನು ಹೇಳುತ್ತಾರೆ? ಆ ಡ್ಯಾಷ್ ಡ್ಯಾಷ್ ಪದವನ್ನು ಮುಂದಿಟ್ಟುಕೊಂಡು ಏನಿವಾಗ (ಹೌದು ನಾನು ಹಳ್ಳಿಗುಗ್ಗು ಏನಿವಾಗ ಎಂದು ಜೆಡಿಎಸ್, ಬಿಜೆಪಿ ನಾಯಕರು ತಮ್ಮ ಫೋಟೋ ಹಾಕಿಕೊಂಡು ಪೋಸ್ಟರ್ ಬಿಡುಗಡೆ ಮಾಡಿದ್ದರು) ಎಂದು ಪೋಸ್ಟರ್ ಹಾಕಿಕೊಳ್ಳುತ್ತಾರಾ’ ಎಂದು ಪ್ರಶ್ನಿಸಿದರು.
‘ಇವತ್ತಲ್ಲ, ನಾಳೆ ಕುಮಾರಸ್ವಾಮಿ ತಾವೇ ತೋಡಿದ ಖೆಡ್ಡಾಕ್ಕೆ ಬೀಳುತ್ತಾರೆ. ಕೆಪಿಎಸ್‌ಸಿ ಹಗರಣದಲ್ಲಿ ನನ್ನ ಹೆಸರು ತಳುಕು ಹಾಕಲು ನಿರಂತರ ಪ್ರಯತ್ನ ನಡೆಸುತ್ತಿರುವ ಅವರು ಹಾಗೂ ಬಿಜೆಪಿ ಮುಖಂಡರು, ಕೆಪಿಎಸ್‌ಸಿ ಪದಚ್ಯುತ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಬಗ್ಗೆ ಏಕೆ ತುಟಿಬಿಚ್ಚುತ್ತಿಲ್ಲ’ ಎಂದು ಪ್ರಶ್ನಿಸಿದರು.
ನನ್ನನ್ನು ಸಿಲುಕಿಸಲು ಆರೋಪಿಗಳ ಮೇಲೆ ಇ.ಡಿ, ಐ.ಟಿ ಅಧಿಕಾರಿಗಳಿಗೆ ಯಾರು ಒತ್ತಡ ಹಾಕುತ್ತಿದ್ದಾರೆ ಎನ್ನುವುದು ಗೊತ್ತಿದೆ. ಯಾರು ಏನೇ ಹೇಳಿದರೂ ಇಂದಲ್ಲ, ನಾಳೆ ಸತ್ಯ ಹೊರಬರುತ್ತದೆ’ ಎಂದರು.
‘ನಾನು ಗುಗ್ಗು ಪದ ಬಳಸಿದ್ದನ್ನೇ ವಿವಾದ ಮಾಡುತ್ತಿದ್ದಾರೆ. ಅವಿವೇಕಿಗಳು ಹಳ್ಳಿ–ನಗರ ಎಲ್ಲೇ ಇದ್ದರೂ ಅವಿವೇಕಿಗಳೇ. ಇಂತಹ ವಿಷಯಗಳನ್ನು ಇಟ್ಟುಕೊಂಡು ತಿಪ್ಪರಲಾಗ ಹಾಕಿದರೂ ಅವರಿಗೆ 75 ಸೀಟು ಬರಲ್ಲ. ಮ್ಯಾಚ್ ಫಿಕ್ಸಿಂಗ್ ಮಾಡಿ, ದುಡ್ಡು ಕೊಟ್ಟು, ಕಣ್ಣೀರು ಸುರಿಸಿ, ವಚನ ಭ್ರಷ್ಟರಾಗಿ ಅಧಿಕಾರಕ್ಕೆ ಬರ್ತಾರೆ ಎನ್ನುವ ಭ್ರಮೆ ಈಗಿಲ್ಲ. ಕುಮಾರಸ್ವಾಮಿ ಸೀರಿಯಸ್ ರಾಜಕಾರಣಿ ಅಲ್ಲ. ಅಧಿಕಾರದಲ್ಲಿ ಇದ್ದಾಗ ತಾಜ್ ವೆಸ್ಟ್‌ಎಂಡ್, ಅಧಿಕಾರ ಇಲ್ಲದಿದ್ದಾಗ ಅವರಿಗೆ ಹಳ್ಳಿ ನೆನಪಾಗುತ್ತದೆ’ ಎಂದು ಟೀಕಿಸಿದರು.
‘ಮೋದಿಗಿಂತ ಹೆಚ್ಚು ವಿದ್ಯಾವಂತ’
‘ಪ್ರಧಾನಿ ನರೇಂದ್ರ ಮೋದಿ ಅವರಿಗಿಂತ ಹೆಚ್ಚು ವಿದ್ಯಾವಂತ. ಅವರಿಗಿಂತ ಚೆನ್ನಾಗಿ ಇಂಗ್ಲಿಷ್, ಹಿಂದಿ, ಸಂಸ್ಕೃತ ಹಾಗೂ ಕನ್ನಡ ಮಾತನಾಡುತ್ತೇನೆ’ ಎಂದು ಪ್ರಿಯಾಂಕ್ ಹೇಳಿದರು.
ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಟೀಕೆಗೆ ಪ್ರತಿಕ್ರಿಯಿಸಿದ ಅವರು, ‘ನನ್ನ ವಿದ್ಯಾರ್ಹತೆ ಬಗ್ಗೆ ಅವರು ಚರ್ಚೆ ಮಾಡುತ್ತಾರೆ. ನಾನು ಗ್ರಾಫಿಕ್ ಡಿಸೈನರ್ ಎನ್ನುವುದು ಜಗತ್ತಿಗೇ ಗೊತ್ತಿದೆ. ವಿದ್ಯಾರ್ಹತೆಯನ್ನು ಅಫಿಡವಿಟ್‌ನಲ್ಲೇ ನಮೂದಿಸಿದ್ದೇನೆ. ಮೋದಿ ಅವರ ವಿದ್ಯಾರ್ಹತೆಯ ಮಾಹಿತಿಯನ್ನು ಮಾಹಿತಿ ಹಕ್ಕಿನಲ್ಲೂ ಕೊಡಲಿಲ್ಲ. ನಾರಾಯಣಸ್ವಾಮಿ ಜತೆ ಈ ಕುರಿತು ಚರ್ಚೆಗೆ ಸಿದ್ಧ’ ಎಂದರು.
ವಿವೇಕಿ ಆಗಿದ್ದರೆ ಕಮಿಷನ್ ಹೊಡೆಯುತ್ತಿದ್ದೆ: ಎಚ್‌ಡಿಕೆ ವ್ಯಂಗ್ಯ
‘ಹೌದು, ನಾನು ಅವಿವೇಕಿ ಆಗಿದ್ದರಿಂದಲೇ ರೈತರ ಕಷ್ಟಕ್ಕೆ ಸ್ಪಂದಿಸಿ ₹25,000 ಕೋಟಿ ಸಾಲವನ್ನು ಒಂದೇ ಕಂತಿನಲ್ಲಿ ಮನ್ನಾ ಮಾಡಿದೆ. ನಾನು ಅವರಂತೆ ವಿವೇಕಿ ಆಗಿದ್ದಿದ್ದರೆ, ಅದೇ ₹25,000 ಕೋಟಿ ಹಣವನ್ನು ರಸ್ತೆ ಮತ್ತು ಇತರ ಕಾಮಗಾರಿಗಳಿಗೆ ಸುರಿದು 30-40% ಕಮಿಷನ್ ಹೊಡೆಯುತ್ತಿದ್ದೆ’ ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ವಿರುದ್ಧ ಹಳ್ಳಿಗುಗ್ಗು ಎಂಬ ಪದ ಬಳಸಿರುವ ಬಗ್ಗೆ ಪ್ರಶ್ನಿಸಿದಾಗ ಅವರು ಹೀಗೆ ಹೇಳಿದರು.
‘ನಾನು ರಿಯಲ್ ಎಸ್ಟೇಟ್ ಮಾಡಿಲ್ಲ. ಬುದ್ಧ ಸಿದ್ಧಾರ್ಥನ ಹೆಸರಿನಲ್ಲಿ ಸ್ಮಾರಕ ಮಾಡುವುದಾಗಿ, ಸರ್ಕಾರಿ ಜಮೀನನ್ನು ಕಬಳಿಸಿಲ್ಲ’ ಎಂದು ಪ್ರಿಯಾಂಕ್ ಖರ್ಗೆ ಅವರ ಹೆಸರು ಹೇಳದೆಯೇ ತಿವಿದರು.
261107-4-291710319

