ಬೆಂಗಳೂರು: ‘ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರವು ಸಂಪೂರ್ಣವಾಗಿ ವಿಫಲವಾಗಿದೆ. ರಾಜ್ಯ ಕಾಂಗ್ರೆಸ್‌ ನಾಯಕರು ಪ್ರಧಾನಿಯನ್ನಾಗಲಿ, ಕೇಂದ್ರ ಗೃಹ ಸಚಿವರನ್ನಾಗಲಿ ಭೇಟಿ ಮಾಡದೆ, ಸುಮ್ಮನೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು.

ಬಿಎಚ್‌ಇಎಲ್‌ ಕನ್ನಡ ಸಂಘವು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ನಂತರ ಸುದ್ದಿಗಾರರ ಜತೆ ಅವರು ಮಾತನಾಡಿದರು.

‘ರಾಜ್ಯ ಸರ್ಕಾರವು ಎರಡು ತಿಂಗಳಿಂದ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಕೇವಲ ಪತ್ರಗಳನ್ನು ಬರೆಯುವುದರಲ್ಲಿಯೇ ಕಾಲಹರಣ ಮಾಡುತ್ತಿದೆ. ₹3,000 ಕೋಟಿಯಿಂದ ಆರಂಭಿಸಿ ಈಗ ₹26,000 ಕೋಟಿ ಪರಿಹಾರ ಕೇಳುತ್ತಿದೆ. ಆದರೆ, ಮುಖ್ಯಮಂತ್ರಿ ಅಥವಾ ಕಂದಾಯ ಅಥವಾ ಕೃಷಿ ಸಚಿವರಾಗಲಿ ಒಮ್ಮೆಯಾದರೂ ನವದೆಹಲಿಗೆ ತೆರಳಿ, ಸೌಜನ್ಯಕ್ಕಾದರೂ ಪ್ರಧಾನಿ ಅಥವಾ ಗೃಹ ಸಚಿವರನ್ನು ಭೇಟಿ ಮಾಡಿಲ್ಲ. ಕೇಂದ್ರದ ಮನವೊಲಿಸುವ ಯಾವುದೇ ಪ್ರಾಮಾಣಿಕ ಪ್ರಯತ್ನ ಮಾಡದೆ, ಈಗ ಸರ್ವಪಕ್ಷ ನಿಯೋಗದ ನಾಟಕವಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ನಾನು ಮುಖ್ಯಮಂತ್ರಿ ಆಗಿದ್ದಾಗ ಇದೇ ರೀತಿಯ ಸಮಸ್ಯೆ ಎದುರಾಗಿತ್ತು. ರೈತರು ಸಂಕಷ್ಟದಲಿದ್ದರು. ಆದರೆ, ಆಗ ಕೇಂದ್ರ ಸರ್ಕಾರದ ಅನುದಾನಕ್ಕೆ ಕಾಯದೆ, ರಾಜ್ಯದ ಜನತೆಯ ತೆರಿಗೆ ಹಣದಲ್ಲಿ ₹25,000 ಕೋಟಿ ರೈತರ ಸಾಲ ಮನ್ನಾ ಮಾಡಿದ್ದೆ. ಈ ಸರ್ಕಾರ ಅಂತಹ ಕೆಲಸವನ್ನೇಕೆ ಮಾಡುತ್ತಿಲ್ಲ’ ಎಂದು ಪ್ರಶ್ನಿಸಿದರು.

‘ಹಾಲಿನ ದರವನ್ನು ₹8 ಏರಿಕೆ ಮಾಡುತ್ತಿರುವುದು ರೈತರಿಗೆ ನೇರವಾಗಿ ತಲುಪುವುದಾದರೆ ನನ್ನ ಸಂಪೂರ್ಣ ಸ್ವಾಗತವಿದೆ. ಆದರೆ, ವಿಪರೀತವಾಗಿ ಬೆಲೆ ಏರಿಕೆಯಿಂದ ಮಾರುಕಟ್ಟೆಯಲ್ಲಿ ನಂದಿನಿ ಹಾಲು ಮಾರಾಟವಾಗದೆ, ಭವಿಷ್ಯದಲ್ಲಿ ಖಾಸಗಿ ಡೇರಿಗಳು ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುವ ಅಪಾಯವಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

261107-15-1383915475