ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಸ್ತುತ ಖಾಲಿ ಇರುವ ಹುದ್ದೆಗಳನ್ನು ಕರ್ನಾಟಕ ಲೋಕಸೇವಾ ಆಯೋಗದಿಂದ ಹೊರಗಿರಿಸಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಮೂಲಕ ಆದ್ಯತೆ ಮೇರೆಗೆ ಭರ್ತಿ ಮಾಡಿಕೊಳ್ಳಬೇಕು ಎಂದು ಗೃಹ, ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ವಿಕಾಸಸೌಧದಲ್ಲಿ ಶುಕ್ರವಾರ ನಡೆದ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿ ಹಾಗೂ ಸಂವಿಧಾನದ 371(ಜೆ) ವಿಧಿಯ ಅನುಷ್ಠಾನ ಕುರಿತ ಉಪಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
‘ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿ ಹಾಗೂ ಈ ಭಾಗದ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ನ್ಯಾಯಯುತ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಸಂವಿಧಾನದ 371 (ಜೆ) ವಿಧಿಯನ್ನು ಜಾರಿಗೆ ತರಲಾಗಿದೆ. ಈ ಮಹತ್ವದ ಸಂವಿಧಾನಾತ್ಮಕ ಆಶಯವನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಕಾಯ್ದೆಯ ಅನುಷ್ಠಾನದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಅಥವಾ ವಿಳಂಬ ಸಲ್ಲದು’ ಎಂದು ಸಚಿವರು ಎಚ್ಚರಿಸಿದರು.
ಸಂವಿಧಾನದತ್ತ ಹಕ್ಕು, ಭಿಕ್ಷೆಯಲ್ಲ: 371 (ಜೆ) ಕಾಯ್ದೆಯು ಕಲ್ಯಾಣ ಕರ್ನಾಟಕದ ಜನರ ಅಭಿವೃದ್ಧಿ ಮತ್ತು ಹಕ್ಕುಗಳ ರಕ್ಷಣೆಗಾಗಿ ಸಾಕಷ್ಟು ಶ್ರಮ ವಹಿಸಿ ಜಾರಿಗೆ ತಂದಿರುವ ಮಹತ್ವದ ಸಂವಿಧಾನಾತ್ಮಕ ಕ್ರಮವಾಗಿದೆ. ಆದರೆ, ಈ ಕಾಯ್ದೆಯ ಆಶಯಕ್ಕೆ ಅನುಗುಣವಾಗಿ ಸೌಲಭ್ಯಗಳನ್ನು ಒದಗಿಸುವ ವಿಚಾರದಲ್ಲಿ ಅಧಿಕಾರಿಗಳು ನಿರೀಕ್ಷಿತ ಗಂಭೀರತೆ ತೋರುತ್ತಿಲ್ಲ ಎಂಬುದು ಕಂಡುಬರುತ್ತಿದೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು.
‘ಕಲ್ಯಾಣ ಕರ್ನಾಟಕದ ಜನರು ಈ ಕಾಯ್ದೆಯಡಿ ಶಿಕ್ಷಣ, ಉದ್ಯೋಗ ಸೇರಿದಂತೆ ತಮಗೆ ದೊರೆಯಬೇಕಾದ ಸೌಲಭ್ಯಗಳನ್ನು ಅಧಿಕಾರಯುತವಾಗಿ ಕೇಳುತ್ತಿದ್ದಾರೆಯೇ ಹೊರತು ಯಾರ ಬಳಿಯೂ ಭಿಕ್ಷೆ ಬೇಡುತ್ತಿಲ್ಲ. ಇದು ಸಂವಿಧಾನವೇ ನೀಡಿರುವ ಅವರ ಹಕ್ಕು. ಹೀಗಾಗಿ, 371 (ಜೆ) ವಿಧಿಯ ಅನುಷ್ಠಾನವನ್ನು ಅಧಿಕಾರಿಗಳು ಹಗುರವಾಗಿ ಪರಿಗಣಿಸಬಾರದು. ಕಾಯ್ದೆಯ ಆಶಯವನ್ನು ಸಂಪೂರ್ಣವಾಗಿ ಜಾರಿಗೊಳಿಸುವ ಹೊಣೆಗಾರಿಕೆಯನ್ನು ಅರಿತು ಕಾರ್ಯನಿರ್ವಹಿಸಬೇಕು’ ಎಂದು ಪ್ರಿಯಾಂಕ್ ಖರ್ಗೆ ಪ್ರತಿಪಾದಿಸಿದರು.
ಸಣ್ಣ ನೀರಾವರಿ ಸಚಿವ ಡಾ.ಅಜಯ್ ಸಿಂಗ್ ಮಾತನಾಡಿ, ‘ಬೆಂಗಳೂರು, ಮೈಸೂರು ಮತ್ತು ಬೆಳಗಾವಿ ವಿಭಾಗಗಳಿಗೆ ವಿವಿಧ ಇಲಾಖೆಗಳ ಮೂಲಕ ನೀಡಲಾಗುತ್ತಿರುವ ಅಭಿವೃದ್ಧಿ ಅನುದಾನದ ಅನುಪಾತದಲ್ಲಿಯೇ ಕಲ್ಯಾಣ ಕರ್ನಾಟಕ ವಿಭಾಗಕ್ಕೂ ಆಯಾ ಇಲಾಖಾವಾರು ಸಮಾನ ಅನುದಾನ ಹಂಚಿಕೆ ಆಗಬೇಕು’ ಎಂದು ಪ್ರತಿಪಾದಿಸಿದರು.
ಉಳಿದ ವಿಭಾಗಗಳಿಗೆ ಆಯಾ ಇಲಾಖಾವಾರು ಪ್ರತಿ ವರ್ಷ ಒದಗಿಸುವಷ್ಟೇ ಅನುದಾನವನ್ನು ಕಲ್ಯಾಣ ಕರ್ನಾಟಕ ವಿಭಾಗಕ್ಕೂ ಒದಗಿಸಿ ತದನಂತರ ಹೆಚ್ಚುವರಿಯಾಗಿ ವಿಶೇಷ ಅನುದಾನ ಒದಗಿಸಿದಲ್ಲಿ ಮಾತ್ರ ಸಮಾನ ಅಭಿವೃದ್ಧಿ ಸಾಧಿಸಲು ಸಾಧ್ಯವಿದ್ದು ಎಲ್ಲಾ ಇಲಾಖಾ ಅಧಿಕಾರಿಗಳು ಈ ಕುರಿತು ಕ್ರಮವಹಿಸಲು ಸಮಿತಿ ನಿರ್ದೇಶನ ನೀಡಲು ಕೋರಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ, ಯೋಜನಾ ಇಲಾಖೆಯ ಕಾರ್ಯದರ್ಶಿ ಕೆ.ವಿ. ತ್ರಿಲೋಕಚಂದ್ರ ಭಾಗವಹಿಸಿದ್ದರು.
261107-34-1999581337

