ಬೆಂಗಳೂರು: ಸರ್ಕಾರಿ ಶಾಲೆಗಳನ್ನು ಖಾಸಗಿ ಸಂಸ್ಥೆಗಳಿಗೆ ಜೋಡಣೆ ಮಾಡುವ ಮೂಲಕ ಸರ್ಕಾರ ಕನ್ನಡಕ್ಕೆ ಘೋರ ಅನ್ಯಾಯ ಮಾಡುತ್ತಿದೆ ಎಂದು ಸಾಹಿತಿ ಎಸ್‌.ಜಿ. ಸಿದ್ದರಾಮಯ್ಯ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಶುಕ್ರವಾರ ಹಮ್ಮಿಕೊಂಡಿದ್ದ ನೃಪತುಂಗ ಸಾಹಿತ್ಯ ಪ್ರಶಸ್ತಿ, ಮಯೂರವರ್ಮ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಕನ್ನಡದ ಪರಂಪರೆ, ಚರಿತ್ರೆಯನ್ನು ಎಷ್ಟೇ ಮಾತನಾಡಿದರೂ ವರ್ತಮಾನದ ಬಿಕ್ಕಟ್ಟಿಗೆ ಮುಖಾಮುಖಿ ಆಗದೇ ಇದ್ದರೆ ಪ್ರಯೋಜನವಿಲ್ಲ. ಕರ್ನಾಟಕ ಪಬ್ಲಿಕ್‌ ಸ್ಕೂಲ್‌ಗಳ ಮೂಲಕ ಕನ್ನಡ ಶಾಲೆಗಳನ್ನು ಕಡಿಮೆ ಮಾಡಲಾಗುತ್ತಿದೆ. ಸರ್ಕಾರಿ ಶಾಲೆಗಳನ್ನು ಖಾಸಗಿಯವರಿಗೆ ನೀಡುವುದು ಸರಿಯಲ್ಲ. ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಉಳಿಯದೇ ಇದ್ದರೆ ಆಡಳಿತ ಭಾಷೆಯಾಗಿಯೂ ಕನ್ನಡ ಉಳಿಯುವುದಿಲ್ಲ. ರಾಜ್ಯ ಭಾಷೆಯಾಗಿ ಬೆಳೆಯುವುದಿಲ್ಲ ಎಂದು ಹೇಳಿದರು.

‘ಈಗಲೂ ಕಾಲ ಮಿಂಚಿಲ್ಲ. ಸರ್ಕಾರ ಮನಸ್ಸು ಮಾಡಿದರೆ ಕನ್ನಡ ಶಾಲೆಗಳನ್ನು ಉಳಿಸಬಹುದು. 2017ರಲ್ಲಿ ಸರ್ಕಾರ ನೇಮಿಸಿದ ಸಮಿತಿಯೇ ಸರ್ಕಾರಿ ಶಾಲೆಗಳ ಸಬಲೀಕರಣ ವರದಿಯನ್ನು ಕೊಟ್ಟಿದೆ. ಅದರಂತೆ ಕಾರ್ಯನಿರ್ವಹಿಸಬೇಕು’ ಎಂದು ಆಗ್ರಹಿಸಿದರು.

ಪ್ರಶಸ್ತಿ ಪ್ರದಾನ ಮಾಡಿದ ಸಾರಿಗೆ ಸಚಿವ ಬೈರತಿ ಸುರೇಶ್‌ ಮಾತನಾಡಿ, ‘ಹೊರ ರಾಜ್ಯಗಳು ಮತ್ತು ಹೊರ ದೇಶಗಳಿಂದ ನಮ್ಮ ರಾಜ್ಯಕ್ಕೆ ಅಸಂಖ್ಯಾತ ಜನರು ಬರುತ್ತಾರೆ. ಇವರಲ್ಲಿ ಬಹುತೇಕರು ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರ ಮತ್ತು ಪ್ರೀತಿಗಳಿಗೆ ಮಾರು ಹೋಗಿ ಇಲ್ಲೇ ಉಳಿಯುತ್ತಿದ್ದಾರೆ. ಎಲ್ಲವನ್ನೂ, ಎಲ್ಲರನ್ನೂ ಒಳಗೊಳ್ಳುವ ಮನಸ್ಥಿತಿಯಲ್ಲಿ ಬೆಳೆದವರು ಕನ್ನಡಿಗರು’ ಎಂದು ವಿಶ್ಲೇಷಿಸಿದರು.

ಎಸ್‌.ಜಿ. ಸಿದ್ದರಾಮಯ್ಯ, ಮೂಡ್ನಾಕೂಡು ಚಿನ್ನಸ್ವಾಮಿ ಮತ್ತು ಸರಜೂ ಕಾಟ್ಕರ್‌ ಅವರಿಗೆ ಕ್ರಮವಾಗಿ 2023, 2024 ಮತ್ತು 2025ನೇ ಸಾಲಿ ನೃಪತುಂಗ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗುಣವಂತ ಮಂಜು, ಗಂಗಪ್ಪ ತಳವಾರ, ರೇಣುಕಾ ಹೆಳವರ, ಸಿದ್ದರಾಮ ಕೊಪ್ಪರ, ದ್ಯಾಮವ್ವ ನಡುವಿನಕೇರಿ, ಫಾತಿಮಾ ರಲಿಯಾ, ಪ್ರಿಯಾಂಕ ಮಾವಿನಕರ, ಸುನೀತಾ ಜೆ., ಮಂಜುಳಾ ಹುಲಿಕುಂಟೆ, ಕೆ.ಎಸ್. ಶೋಭಾ ಚಂದ್ರು, ಚಾಂದ್‌ ಪಾಷ, ಸಂಘಮಿತ್ರೆ ನಾಗರಘಟ್ಟ, ವಿಶಾಲ್‌ ಮ್ಯಾಸರ್‌, ಬಸವರಾಜ ಹೂಗಾರ, ಬಸವರಾಜ ಉಮೇಶ ನಡಗಡ್ಡಿ ಅವರಿಗೆ ಮಯೂರವರ್ಮ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

‘ಜಾತ್ಯತೀತ ದೇಶದ ಸಾಂಕೇತಿಕ ಪ್ರತಿನಿಧಿ ಬಸ್‌’

‘ಜಾತ್ಯತೀತ ದೇಶವು ಹೊಂದಿರುವ ಒಂದು ಸಾಂಕೇತಿಕ ಪ್ರತಿನಿಧಿ ಎಂದರೆ ಅದು ಚಲಿಸುವ ಬಸ್ಸು’ ಎಂದು ಮೂಡ್ನಾಕೂಡು ಚಿನ್ನಸ್ವಾಮಿ ತಿಳಿಸಿದರು.

‘ಭಾರತದಲ್ಲಿ ಜನರು ಬೇರೆ ಬೇರೆ ಜಾತಿಗಳಿಗೆ ಅನುಗುಣವಾಗಿ ಜೀವಿಸುತ್ತಾರೆ. ಬಸ್ಸುಗಳಲ್ಲಿ ಹಾಗಿಲ್ಲ. ಎಲ್ಲರೂ ಬಸ್‌ಗೆ ಹತ್ತುವುದು ಒಂದೇ ರೀತಿಯಾಗಿ. ಬಸ್‌ನಲ್ಲಿ ಸಮಾನವಾಗಿ ಕುಳಿತುಕೊಳ್ಳಬೇಕಾಗುತ್ತದೆ. ಅಲ್ಲಿ ಮೇಲು-ಕೀಳಿನ ವ್ಯತ್ಯಾಸವಿಲ್ಲ, ವರ್ಗಗಳೂ ಇಲ್ಲ. ಏಕೆಂದರೆ, ಬಸ್‌ ಏರಿದ ಮೇಲೆ ಬಡವರಿಗೊಂದು, ಶ್ರೀಮಂತರಿಗೊಂದು ಎಂಬ ಆಸನದ ವ್ಯವಸ್ಥೆ ಇರುವುದಿಲ್ಲ. ಹೀಗಾಗಿ ನಿಜವಾದ ಜಾತ್ಯತೀತ ಘಟಕವಾಗಿರುವ ನಮ್ಮ ಬಸ್‌ಗಳು ಸಮಾನತೆಯ ದ್ಯೋತಕ’ ಎಂದು ವಿಮರ್ಶಿಸಿದರು.

261107-4-2053706070