ಬೆಂಗಳೂರು: ‘ಬ್ರಾಂಡ್ ಬೆಂಗಳೂರು ಹೆಸರಿನಲ್ಲಿ ಬಣ್ಣಬಣ್ಣದ ಕನಸುಗಳನ್ನು ಬಿತ್ತಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ವಾಸ್ತವದಲ್ಲಿ ನಗರದ ಕಸ ವಿಲೇವಾರಿ ಟೆಂಡರ್‌ಗಳನ್ನೇ ಗೋಲ್‌ಮಾಲ್ ಮತ್ತು ಅಕ್ರಮಗಳ ಆರೋಪ ಸುಳಿಗೆ ಸಿಲುಕಿಸಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಟೀಕಿಸಿದ್ದಾರೆ.

ಪ್ರಜಾವಾಣಿಯಲ್ಲಿ ನ.6ರಂದು ‘ಕಸ: ಶೇ 14ರಲ್ಲಿ ಮತ್ತೆ ಗೊಂದಲ’ ಶೀರ್ಷಿಕೆಯಡಿ ಪ್ರಕಟವಾಗಿದ್ದ ವಿಶೇಷ ವರದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಅವರು, ‘ಕಸ ವಿಲೇವಾರಿ ಗುತ್ತಿಗೆಯಲ್ಲೂ ಕಮಿಷನ್ ದಂಧೆ! ರಾಜ್ಯದ ರಾಜಧಾನಿಯನ್ನೇ ಕಸದ ತಿಪ್ಪೆಯನ್ನಾಗಿಸಿರುವ ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ’ ಎಂದಿದ್ದಾರೆ.

‘ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ (ಬಿಎಸ್‌ಡಬ್ಲ್ಯುಎಂಎಲ್‌) ಮೂಲಕ ನಡೆದಿರುವ ಕಸ ವಿಲೇವಾರಿ ಟೆಂಡರ್‌ಗಳಲ್ಲಿ ಸಚಿವ ಸಂಪುಟಕ್ಕೆ ತಪ್ಪು ಮಾಹಿತಿ ನೀಡಿರುವ ಆರೋಪ, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಪ್ರಶ್ನೆ ಹಾಗೂ ಶೇ 14ರಷ್ಟು ಜಿಎಸ್‌ಟಿ ಮತ್ತು ಪ್ರೀಮಿಯಂ ಹೆಸರಿನಲ್ಲಿ ನಡೆದಿರುವ ದರಗಳ ಗೋಲ್‌ಮಾಲ್ ಇಡೀ ಟೆಂಡರ್ ಪ್ರಕ್ರಿಯೆಯನ್ನೇ ಅನುಮಾನಾಸ್ಪದವಾಗಿಸಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡರೇ, ಸಿ.ವಿ.ರಾಮನ್ ನಗರ ಮತ್ತು ಬೆಂಗಳೂರು ದಕ್ಷಿಣ ಟೆಂಡರ್‌ಗಳಲ್ಲಿ ಜಿಎಸ್‌ಟಿ ಹಾಗೂ ಪ್ರೀಮಿಯಂ ಹೆಸರಿನಲ್ಲಿ ದರಗಳ ಗೋಲ್‌ಮಾಲ್ ಏಕೆ’ ಎಂದು ಪ್ರಶ್ನಿಸಿದ್ದಾರೆ.

‘ಕಸದ ಟೆಂಡರ್‌ಗಳಲ್ಲಿನ ಅಕ್ರಮ ಆರೋಪಗಳಿಗೆ ದಾಖಲೆ ಸಮೇತ ಉತ್ತರ ನೀಡಿ. ಸಂಪೂರ್ಣ ಟೆಂಡರ್ ಪ್ರಕ್ರಿಯೆಯನ್ನು ಬಹಿರಂಗಪಡಿಸಬೇಕು. ನಗರದ ಕಸ ಎತ್ತುವುದಕ್ಕೂ ಯೋಗ್ಯತೆಯಿಲ್ಲದ ಕಾಂಗ್ರೆಸ್ ಸರ್ಕಾರವನ್ನು ಬೆಂಗಳೂರಿನ ಜನತೆ ಶೀಘ್ರದಲ್ಲೇ ಕಸದ ಬುಟ್ಟಿಗೆ ಎಸೆಯುವುದು ಖಚಿತ’ ಎಂದಿದ್ದಾರೆ.

261107-4-1179337562