ಬೆಂಗಳೂರು: ಆನೇಕಲ್ನಿಂದ ಸರ್ಜಾಪುರ, ವರ್ತೂರು, ವಿಮಾನ ನಿಲ್ದಾಣ, ನೆಲಮಂಗಲವರೆಗಿನ ವರ್ತುಲ ರಸ್ತೆ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಗತ್ಯವಿರುವ ₹1,118.50 ಕೋಟಿ ಹೆಚ್ಚುವರಿ ಅನುದಾನವನ್ನು ರಾಜ್ಯ ಸಚಿವ ಸಂಪುಟ ಮಂಜೂರು ಮಾಡಿದೆ.
ಬೆಂಗಳೂರು ನಗರದ ಸುತ್ತಮುತ್ತಲಿನ ಸಂಚಾರ ದಟ್ಟಣೆ ನಿಯಂತ್ರಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಲಿರುವ 134 ಕಿ.ಮೀ. ಉದ್ದದ ಈ ವರ್ತುಲ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲು ಹೆಚ್ಚುವರಿ ಅನುದಾನ ಅಗತ್ಯವಾಗಿತ್ತು. ಕೆಆರ್ಡಿಎಲ್ ವತಿಯಿಂದ ಕೈಗೊಂಡಿದ್ದ ಈ ಪ್ರಮುಖ ರಸ್ತೆ ಯೋಜನೆಯು 2017ರಲ್ಲೇ ಮಂಜೂರಾಗಿತ್ತು. ಭೂಸ್ವಾಧೀನ ವೆಚ್ಚದಲ್ಲಿನ ಏರಿಕೆ, ಬೆಲೆ ಏರಿಕೆ, ವಿಳಂಬ ಹಾಗೂ ಕಾಮಗಾರಿ ಅನುಷ್ಠಾನದ ವೇಳೆ ಸೇರ್ಪಡೆಯಾದ ಹೆಚ್ಚುವರಿ ಕೆಲಸಗಳು ಯೋಜನಾ ವೆಚ್ಚ ಹೆಚ್ಚಾಗಲು ಮುಖ್ಯ ಕಾರಣಗಳಾಗಿವೆ. ಇದಕ್ಕೆ ಸಮ್ಮತಿ ನೀಡಲಾಗಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಸುದ್ದಿಗಾರರಿಗೆ ತಿಳಿಸಿದರು.
ನಗರದ ಸುಗಮ ಸಂಚಾರ ಹಾಗೂ ಸಾರ್ವಜನಿಕರ ಪ್ರಯಾಣದ ಅಗತ್ಯಗಳನ್ನು ಮನಗಂಡು, ಈ ಯೋಜನೆಯನ್ನು ಪೂರ್ಣಗೊಳಿಸಲು ಸಚಿವ ಸಂಪುಟವು ಹೆಚ್ಚುವರಿ ಅನುದಾನ ಮಂಜೂರು ಮಾಡಿದೆ. ಅಲ್ಲದೆ, ಕಾಮಗಾರಿ ವಿಳಂಬದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವಸಂಪುಟವು, ಬಾಕಿ ಇರುವ ಕಾಮಗಾರಿಯನ್ನು ಅತ್ಯಂತ ಶೀಘ್ರದಲ್ಲೇ ಮುಕ್ತಾಯಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ ಎಂದರು.
ನಗರದ ಹೊರವಲಯದ ಸಾರಿಗೆ ಸಂಪರ್ಕ ಜಾಲವನ್ನು ಮತ್ತಷ್ಟು ಉನ್ನತ ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಈ ರಸ್ತೆ ಅಭಿವೃದ್ಧಿ ಯೋಜನೆಯು ಈ ಭಾಗದ ಸರ್ವಾಂಗೀಣ ಪ್ರಗತಿಗೆ ಮುನ್ನುಡಿ ಬರೆಯಲಿದ್ದು, ಇದರ ಮೂಲಕ ಸ್ಥಳೀಯವಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಸಾಕಾರಗೊಳ್ಳಲಿವೆ. ಈ ಬೃಹತ್ ಸಂಪರ್ಕ ಜಾಲವು ಹೊಸಕೋಟೆ ಹಾಗೂ ನೆಲಮಂಗಲದಿಂದ ವಿಮಾನ ನಿಲ್ದಾಣದವರೆಗೆ ಮತ್ತು ಬಿಡದಿಯಿಂದ ವರ್ತೂರು ಮಾರ್ಗವಾಗಿ ಸರ್ಜಾಪುರಕ್ಕೆ ಅತ್ಯುತ್ತಮ ಹಾಗೂ ಸುಲಭ ಸಂಪರ್ಕ ಕಲ್ಪಿಸಲಿದೆ ಎಂದು ಹೇಳಿದರು.
ವರ್ತೂರಲ್ಲಿ ಎಲಿವೇಟೆಡ್ ಕಾರಿಡಾರ್: ವಾಹನ ದಟ್ಟಣೆ ಅಧಿಕವಾಗಿರುವ ವರ್ತೂರು ಭಾಗದಲ್ಲಿ ದೀರ್ಘಕಾಲದ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಲ್ಪಿಸುವ ಸಲುವಾಗಿ, ಈ ಯೋಜನೆಯ ಭಾಗವಾಗಿ ವರ್ತೂರಿನಲ್ಲಿ 1.92 ಕಿ.ಮೀ. ವ್ಯಾಪ್ತಿಯ ಎಲಿವೇಟೆಡ್ ಕಾರಿಡಾರ್ ನಿರ್ಮಾಣವಾಗಲಿದೆ.
ರೈಲ್ವೆ ಕ್ರಾಸಿಂಗ್ ಮೇಲ್ಸೇತುವೆಗಳು: ಸವಾರರ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕಾಗಿ ಗೊಲ್ಲಹಳ್ಳಿ, ಬಸವನಹಳ್ಳಿ, ರಾಜಾನುಕುಂಟೆ, ನಾರಾಯಣ ಪುರ, ಕಾಡುಗೋಡಿ ಹಾಗೂ ವರ್ತೂರು ಜಂಕ್ಷನ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ರೈಲ್ವೆ ಕ್ರಾಸಿಂಗ್ ಫ್ಲೈಓವರ್ಗಳು ನಿರ್ಮಾಣಗೊಳ್ಳಲಿವೆ.
261107-4-1118011061

