ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ದುರುಪಯೋಗ ತಡೆಯುವುದಕ್ಕಾಗಿ ಮರುಪರಿಶೀಲನೆ ನಡೆಸಲು ನಿರ್ಧರಿಸಿದ್ದು, ಹೊಸ ಅರ್ಜಿ ನಮೂನೆ ಸಿದ್ಧಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ಗೃಹಲಕ್ಷ್ಮಿ ಯೋಜನೆಯಲ್ಲೂ ದುರುಪಯೋಗ ಆಗುತ್ತಿರುವುದು ಗಮನಕ್ಕೆ ಬಂದಿದೆ. ಮೃತರಾದ ಒಂದು ಲಕ್ಷ ಜನರ ಖಾತೆಗಳಿಗೆ ಹಣ ಹೋಗುತ್ತಿದೆ. ಕೆಲವು ಪ್ರಕರಣಗಳಲ್ಲಿ ಮೊಬೈಲ್ ನಂಬರ್ಗಳನ್ನು ಸರಿಯಾಗಿ ನಮೂದಿಸದೆ ಬೇರೆಯವರ ಖಾತೆಗೆ ಹಣ ಜಮೆಯಾಗಿವೆ. ಈ ಎಲ್ಲ ಲೋಪಗಳನ್ನು ಸರಿಪಡಿಸಲು ಹೊಸ ಅರ್ಜಿ ನಮೂನೆ ಸಿದ್ಧಪಡಿಸಲಾಗಿದೆ. ಭರ್ತಿ ಮಾಡುವಾಗ ಸರಿಯಾದ ದಾಖಲೆ ನೀಡುವ ಜತೆಗೆ, ಎಲ್ಲ ಮಹಿಳಾ ಫಲಾನುಭವಿಗಳು ತಮ್ಮದೇ ಮೊಬೈಲ್ ಸಂಖ್ಯೆ ನಮೂದಿಸಬೇಕು’ ಎಂದು ಸಲಹೆ ನೀಡಿದರು.
‘ಫಲಾನುಭವಿಗಳ ಬ್ಯಾಂಕ್ ಖಾತೆಗಳಿಂದ ಸಾಲದ ಬಾಕಿ ವಸೂಲಿ ಮಾಡುತ್ತಿರುವ ಕುರಿತು ದೂರುಗಳು ಬಂದಿವೆ. ಈ ಎಲ್ಲ ವಿಚಾರಗಳ ಕುರಿತು ಪರಿಶೀಲನೆ ನಡೆಸುತ್ತಿದ್ದೇವೆ. ಶೇ 30ರಿಂದ 35ರಷ್ಟು ಫಲಾನುಭವಿಗಳು ಬೇರೆ ವ್ಯಕ್ತಿಗಳ ಮೊಬೈಲ್ ನಂಬರ್ ಕೊಟ್ಟಿದ್ದಾರೆ. ಸಮೀಕ್ಷೆ ಮೂಲಕ ಅವರ ಸಮಸ್ಯೆಗಳನ್ನು ಆಲಿಸಲಿದ್ದೇವೆ’ ಎಂದರು.
‘ಗೃಹಜ್ಯೋತಿ ಯೋಜನೆಯ ಕುರಿತು ಈಚೆಗೆ ಸಮೀಕ್ಷೆ ನಡೆಸಲಾಗಿತ್ತು. ಈ ಸಮಯದಲ್ಲಿ ಬಹಳ ಜನ ಯೋಜನೆಯ ಸೌಲಭ್ಯ ಬೇಡ ಎಂದರು. ಕೆಲವರು ದಾಖಲೆ ನೀಡಲು ಹಿಂಜರಿದಿದ್ದಾರೆ. ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ನೆರವಾಗಲು ಪಂಚಾಯಿತಿ ಮಟ್ಟದಲ್ಲಿಯೂ ಗ್ಯಾರಂಟಿ ಅನುಷ್ಠಾನ ಸಮಿತಿ ರಚಿಸಲಾಗುತ್ತಿದೆ. ಸಮಿತಿ ಸದಸ್ಯರು ಅವರ ಸಮಸ್ಯೆಗಳಿಗೆ ಸ್ಪಂದಿಸ ಲಿದ್ದಾರೆ’ ಎಂದು ಭರವಸೆ ನೀಡಿದರು.
ಗೃಹಲಕ್ಷ್ಮಿ ಯೋಜನೆಗೆ ಇದುವರೆಗೆ ₹86,838 ಕೋಟಿ ವೆಚ್ಚ ಮಾಡಲಾಗಿದೆ. ₹1 ಲಕ್ಷ ಕೋಟಿ ಮೊತ್ತಕ್ಕೆ ತಲುಪಿದಾಗ ಎಲ್ಲ ಜಿಲ್ಲೆಗಳಲ್ಲೂ ಗೃಹಲಕ್ಷ್ಮಿಯರ ಸಮಾವೇಶ ನಡೆಸಲಾಗುವುದು ಎಂದು ಶಿವಕುಮಾರ್ ಹೇಳಿದರು.
‘ಸಿದ್ದರಾಮಯ್ಯ ಅವರ ಜತೆಗೆ ತೆರಳಿ ಮೈಸೂರಿನಲ್ಲಿ ಚಾಮುಂಡೇಶ್ವರಿಯ ಮಡಿಲಿಗೆ ₹2 ಸಾವಿರ ಇಟ್ಟು, ಈ ಗೃಹಲಕ್ಷ್ಮಿ ಯೋಜನೆಯನ್ನು ಜಾರಿ ಮಾಡುವ ಶಕ್ತಿ ಕೊಡುವಂತೆ ಪ್ರಾರ್ಥಿಸಿದ್ದೆವು. ಜನರು 136 ಸೀಟು ಕೊಟ್ಟು ಆಶೀರ್ವಾದ ಮಾಡಿದರು. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ’ ಎಂದರು.
‘ಎಂತಹ ಪರಿಸ್ಥಿತಿ ಎದುರಾದರೂ ಯೋಜನೆಗಳನ್ನು ಸ್ಥಗಿತಗೊಳಿಸುವುದಿಲ್ಲ. ಯಾವ ಫಲಾನುಭವಿಯೂ ಗೃಹಲಕ್ಷ್ಮಿ ನೆರವನ್ನು ಬಡ್ಡಿ ವ್ಯವಹಾರ, ಚೀಟಿ ವ್ಯವಹಾರಕ್ಕೆ ಬಳಸಿಕೊಳ್ಳಬಾರದು. ಇಂತಹ ಪ್ರಕರಣಗಳು ಕಂಡುಬಂದರೆ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.
‘ರಾಜ್ಯ ಸರ್ಕಾರಕ್ಕೆ ಮಹಿಳೆಯರು ಹೊರೆಯಾದರೆ?’
‘ಗೃಹಲಕ್ಷ್ಮಿ’ ಹಣ ಫಲಾನುಭವಿಗಳ ಹಕ್ಕಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್ನಲ್ಲಿ ವಾದ ಮಂಡಿಸಿದೆ. ಈ ಮೂಲಕ ಮಹಿಳೆಯರು ರಾಜ್ಯ ಸರ್ಕಾರಕ್ಕೆ ಹೊರೆ ಆಗಿದ್ದಾರೆ ಎಂಬ ಅರ್ಥದಲ್ಲಿ ತನ್ನ ಅಭಿಪ್ರಾಯ ದಾಖಲಿಸಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್ಕುಮಾರ್ ಅವರು ಟೀಕಿಸಿದ್ದಾರೆ.
‘ಚುನಾವಣೆ ಸಂದರ್ಭದಲ್ಲಿ ಮನೆ ಮನೆಗೆ ಹೋಗಿ ಮಹಿಳೆಯರಿಗೆ ತಿಂಗಳಿಗೆ ₹2,000 ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಮತ ಪಡೆಯುವಾಗ ಮಹಿಳೆಯರಿಗೆ ನೀಡಿದ ಭರವಸೆ ಅಧಿಕಾರ ಸಿಕ್ಕ ಬಳಿಕ ಹೊರೆ ಎನಿಸುತ್ತಿದೆಯೇ. ವರ್ಷಕ್ಕೆ ₹24,000 ನೀಡುತ್ತೇವೆಂದು ಹೇಳಿ, ಈಗ ಎರಡು ತಿಂಗಳ ಹಣವನ್ನೂ ಕೊಡಲಾಗದ ಸ್ಥಿತಿಗೆ ಸರ್ಕಾರ ತಲುಪಿದೆಯೇ’ ಎಂದು ಅವರು ‘ಎಕ್ಸ್’ ನಲ್ಲಿಪ್ರಶ್ನಿಸಿದ್ದಾರೆ.
‘ಗ್ಯಾರಂಟಿ ಹೆಸರಿನಲ್ಲಿ ಮಹಿಳೆಯರ ವಿಶ್ವಾಸ ಗಳಿಸಿ, ಈಗ ಅವರ ಹಕ್ಕಿನ ಹಣದ ಬಗ್ಗೆಯೇ ಪ್ರಶ್ನೆ ಎತ್ತುವುದು ಯಾವ ನ್ಯಾಯ? ಮಹಿಳೆಯರಿಗೆ ಭಾಷಣ, ಸಮರ್ಥನೆ, ಕೋರ್ಟ್ ವಾದಗಳು ಬೇಕಿಲ್ಲ. ಕೊಟ್ಟ ಮಾತಿನಂತೆ ಖಾತೆಗೆ ಹಣ ಜಮೆ ಮಾಡಿ’ ಎಂದು ಸುನಿಲ್ ಆಗ್ರಹಿಸಿದ್ದಾರೆ.
‘ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಕರ್ನಾಟಕದ ಇತಿಹಾಸದಲ್ಲಿ ಹಿಂದೆಂದೂ ಕಾಣದಂತಹ ಬೇಜವಾಬ್ದಾರಿ ಸರ್ಕಾರ. ರೈತರು ಹಾಗೂ ಮಹಿಳೆಯರ ವಿಚಾರದಲ್ಲಿ ಹಿಂದಿನ ಯಾವೊಂದು ಸರ್ಕಾರವೂ ಇಷ್ಟೊಂದು ಸಂವೇದನಾ ರಹಿತವಾಗಿ ವರ್ತಿಸಿರಲಿಲ್ಲ’ ಎಂದು ಅವರು ಹೇಳಿದ್ದಾರೆ.
ಯೋಜನೆಯ ₹5,000 ಕೋಟಿ ಎಲ್ಲಿ ಹೋಯಿತು?
‘ಗೃಹಲಕ್ಷ್ಮಿ ಯೋಜನೆಯಡಿ ನಾಪತ್ತೆಯಾಗಿದೆ ಎನ್ನಲಾಗುತ್ತಿರುವ ₹5,000 ಕೋಟಿ ಮೊತ್ತದ ಕುರಿತು ಸರ್ಕಾರ ಈವರೆಗೂ ಸಮರ್ಪಕ ಸ್ಪಷ್ಟನೆ ನೀಡಿಲ್ಲ. ಈ ಹಣದ ನಿಗೂಢತೆ ಬಗ್ಗೆ ಸರ್ಕಾರ ಉತ್ತರ ನೀಡಬೇಕು’ ಎಂದು ವಿಧಾನಪರಿಷತ್ ವಿರೋಧಪಕ್ಷದ ಮುಖ್ಯಸಚೇತಕ ಎನ್.ರವಿಕುಮಾರ್ ಒತ್ತಾಯಿಸಿದ್ದಾರೆ.
‘ಕಳೆದ ವರ್ಷ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲದ ಅಧಿವೇಶನದಲ್ಲಿ ₹5,000 ಕೋಟಿ ನಾಪತ್ತೆ ಆದ ವಿಷಯವನ್ನು ಪ್ರಸ್ತಾಪಿಸಲಾಗಿತ್ತು. ಆ ಕುರಿತು ಈವರೆಗೂ ಸರ್ಕಾರ ಉತ್ತರ ನೀಡಿಲ್ಲ’ ಎಂದು ದೂರಿದ್ದಾರೆ. ‘ಗೃಹಲಕ್ಷ್ಮಿ ಯೋಜನೆಯಡಿ ಹಣ ನೀಡುವುದು ಹಕ್ಕು ಅಲ್ಲ ಎಂದು ನ್ಯಾಯಾಲಯಕ್ಕೆ ಸರ್ಕಾರ ತಿಳಿಸಿದೆ. ಸರ್ಕಾರವೇ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವಾಗ, ಆ ಭರವಸೆಯಂತೆ ಹಣವನ್ನು ಕೇಳುವುದು ಮಹಿಳೆಯರ ಹಕ್ಕು. ಅವರ ಹಕ್ಕನ್ನು ನಿರಾಕರಿಸಲು ಸರ್ಕಾರಕ್ಕೆ ಸಾಧ್ಯವಿಲ್ಲ’ ಎಂದು ರವಿಕುಮಾರ್ ಹೇಳಿದ್ದಾರೆ.
ಕೆಲ ರಾಜ್ಯಗಳು ಕರ್ನಾಟಕದ ಗ್ಯಾರಂಟಿ ಯೋಜನೆಯನ್ನು ನಕಲು ಮಾಡಿವೆ. ಆದರೆ, ಪೂರ್ಣ ಪ್ರಮಾಣದಲ್ಲಿ ಜಾರಿಗೆ ತಂದಿಲ್ಲ. ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯ ಸರ್ಕಾರ ದೇಶಕ್ಕೇ ಮಾದರಿಯಾಗಿದೆ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ
261107-51-567300989

