ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಅವರಿಗಿಂತ ನಾನು ಹೆಚ್ಚು ವಿದ್ಯಾವಂತ. ಮಾತ್ರವಲ್ಲ, ಅವರಿಗಿಂತ ಉತ್ತಮವಾಗಿ ಇಂಗ್ಲಿಷ್‌ ಮಾತನಾಡುತ್ತೇನೆ’ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ತಮ್ಮ ಶೈಕ್ಷಣಿಕ ಅರ್ಹತೆ ಪ್ರಶ್ನಿಸಿದ್ದ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಅರ್ಹತೆಯ ಕುರಿತು ಪ್ರಶ್ನೆ ಎತ್ತಿದರು.

ಛಲವಾದಿ ನಾರಾಯಣಸ್ವಾಮಿ ಅವರು, ‘ಪ್ರಿಯಾಂಕ್ ಖರ್ಗೆ ಅವರ ಪದವಿ ಏನು? ಅವರು ಎಂತಹ ಮೇಧಾವಿ ಎಂಬುದನ್ನು ಜನರಿಗೆ ತಿಳಿಸಲಿ?’ ಎಂದು ಆಗ್ರಹಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ‘ನರೇಂದ್ರ ಮೋದಿ ಅವರ ಶೈಕ್ಷಣಿಕ ಅರ್ಹತೆ ಏನು ಎಂಬುದು ನಿಮಗೆ ಗೊತ್ತಿದೆಯೇ? ಮಾಹಿತಿ ಹಕ್ಕು ಕಾಯ್ದೆಯಡಿ (RTI) ಕೇಳಿದರೂ ಅವರ ಪದವಿಯ ವಿವರ ಬಹಿರಂಗವಾಗುತ್ತಿಲ್ಲ. ಆದರೆ ನನ್ನ ಶೈಕ್ಷಣಿಕ ಅರ್ಹತೆ ಎಲ್ಲರಿಗೂ ಗೊತ್ತಿದೆ. ನಾನು ಗ್ರಾಫಿಕ್ ಡಿಸೈನರ್ ಎಂಬುದು ಇಡೀ ಜಗತ್ತಿಗೆ ತಿಳಿದಿದೆ. ಅದರಲ್ಲಿ ಸಮಸ್ಯೆ ಏನಿದೆ? ನಾನು ಮೋದಿ ಅವರಿಗಿಂತ ಹೆಚ್ಚು ವಿದ್ಯಾವಂತ. ಅವರಿಗಿಂತ ಉತ್ತಮವಾಗಿ ಇಂಗ್ಲಿಷ್ ಮಾತನಾಡುತ್ತೇನೆ’ ಎಂದಿದ್ದಾರೆ.

‘ಬಿಜೆಪಿಯವರು ನನ್ನನ್ನು ಕಾನ್ವೆಂಟ್‌ನಲ್ಲಿ ಓದಿದ ದಲಿತ ಎಂದು ಕರೆಯುತ್ತಾರೆ. ಆದರೆ ನಾನು ಅದಮಾರು ಮಠದವರು ನಡೆಸುವ ಶಾಲೆಯಲ್ಲಿ ಓದಿದ್ದೇನೆ. ಕಾನ್ವೆಂಟ್ ಶಾಲೆಗಳಿಗೆ ಹೋಗಿದ್ದು ಬಿಜೆಪಿಯ ನಾಯಕರ ಮಕ್ಕಳು’ ಎಂದು ತಿರುಗೇಟು ನೀಡಿದರು.

ಮೋದಿ ಭೇಟಿಯಿಂದ ಯಾವುದೇ ನಿರೀಕ್ಷೆಯಿಲ್ಲ

ಪ್ರಧಾನಿ ನರೇಂದ್ರ ಮೋದಿ ಅವರ ಕರ್ನಾಟಕ ಭೇಟಿಯ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಅವರ ಭೇಟಿಯ ಕುರಿತು ಯಾವುದೇ ನಿರೀಕ್ಷೆ ಇಟ್ಟುಕೊಂಡಿಲ್ಲ ಎಂದರು.

‘ಮೋದಿ ಅವರು ಕರ್ನಾಟಕಕ್ಕೆ ಬರುವುದು ಕನ್ನಡಿಗರ ತೆರಿಗೆ ಹಣ ತೆಗೆದುಕೊಂಡು ಹೋಗಲು ಮಾತ್ರ’ ಎಂದು ಆರೋಪಿಸಿದರು.