ಯಾವುದೇ ರಾಜ್ಯದಲ್ಲಿ ಒಂದು ರಾಜ್ಯ ಭಾಷೆ ಇದ್ದರೆ, ಹಲವು ಸ್ವತಂತ್ರ ಭಾಷೆಗಳು, ಉಪಭಾಷೆಗಳು ಇರುತ್ತವೆ. ಸ್ವತಂತ್ರ ಭಾಷೆಗಳನ್ನು ಸಹ ಭಾಷೆ ಎಂದೂ ಕರೆಯಲಾಗುತ್ತದೆ. ಉಪ ಭಾಷೆ ಅಂದರೆ ಶಬ್ದವೇ ತಿಳಿಸುವಂತೆ ಅದು ರಾಜ್ಯ ಭಾಷೆಯ ಕವಲು ಎಂಬುದು ಗೊತ್ತಾಗುತ್ತದೆ.

ಕರ್ನಾಟಕದಲ್ಲಿ ಕನ್ನಡವೇ ರಾಜ್ಯ ಭಾಷೆ. ರಾಜ್ಯದಲ್ಲಿ 72 ಭಾಷೆಗಳನ್ನು ಗುರುತಿಸಲಾಗಿದೆ. ಅದರಲ್ಲಿ ಹೆಚ್ಚಿನವು ಉಪಭಾಷೆಗಳಾಗಿವೆ. ತುಳು, ಕೊಡವ, ಬ್ಯಾರಿ ಮುಂತಾದ ಕೆಲವು ಭಾಷೆಗಳಷ್ಟೇ ಸಹಭಾಷೆ ಅಥವಾ ಸ್ವತಂತ್ರ ಭಾಷೆಗಳಾಗಿವೆ. 

ಉಪಭಾಷೆ ಮತ್ತು ಸಹಭಾಷೆಗೆ ಏನು ವ್ಯತ್ಯಾಸ ಎಂಬುದನ್ನು ತಿಳಿದರೆ ಮುಂದೆ ಭಾಷೆಗಳನ್ನು ಹೇಗೆ ಗುರುತಿಸಬಹುದು ಎಂಬುದು ಸುಲಭವಾಗಿ ಅರಿಯಬಹುದು.

ಹವ್ಯಕ ಬ್ರಾಹ್ಮಣ ಸಮುದಾಯ ಮಾತನಾಡುವ ಹವಿಗನ್ನಡ, ಕೊಡಗು–ಸುಳ್ಳದ ಗೌಡರ ಭಾಷೆ ಅರೆಗನ್ನಡ, ಕುಂದಾಪುರ ಪ್ರದೇಶದ ಎಲ್ಲ ಸಮುದಾಯಗಳು ಮಾತನಾಡುವ ಕುಂದಗನ್ನಡ ಅಲ್ಲದೇ ಬೇರೆ ಬೇರೆ ಬುಡಗಟ್ಟುಗಳು ಕೂಡ ತಮ್ಮದೇ ವಿಶಿಷ್ಟ ಕನ್ನಡಗಳನ್ನು ಮಾತನಾಡುತ್ತಾರೆ.  ಹಾಲಕ್ಕಿ ಕನ್ನಡ, ಸೋಲಿಗ ಕನ್ನಡ ಮುಂತಾದವುಗಳೆಲ್ಲ ಸೇರಿವೆ. ಇವೆಲ್ಲ ಉಪಭಾಷೆಗಳು. ಯಾಕಂದರೆ ಅವೆಲ್ಲವೂ ಕನ್ನಡವನ್ನೇ ಹೋಲುವ, ಕನ್ನಡದ್ದೇ ಭಾಷೆಗಳು. ಪ್ರದೇಶ ಇಲ್ಲವೇ ಸಮುದಾಯಕ್ಕೆ ಸೀಮಿತವಾಗಿ ತಮ್ಮದೇ ವಿಶಿಷ್ಟ ಶೈಲಿಯನ್ನು ಹೊಂದಿರುವಂಥವು.. ಕನ್ನಡ ಬರುವವರಿಗೆ ಈ ಭಾಷೆಗಳು ಅರ್ಥವಾಗುತ್ತವೆ. ಪ್ರತಿಕ್ರಿಯಾತ್ಮಕವಾಗಿ ಮಾತನಾಡಲು ಕಷ್ಟವಾದರೂ ಅವರು ಏನು ಹೇಳುತ್ತಾರೆ ಎಂಬುದು ಗೊತ್ತಾಗಿ ಬಿಡುತ್ತವೆ.

ಆದರೆ, ತುಳು, ಬ್ಯಾರಿ ಮುಂತಾದ ಭಾಷೆಗಳು ಕನ್ನಡ ನಾಡಿನ ಭಾಷೆಗಳೇ ಆಗಿದ್ದರೂ ಕನ್ನಡ ಗೊತ್ತಿದ್ದ ಕೂಡಲೇ ಅರ್ಥವಾಗುವುದಿಲ್ಲ. ಅವು ಪ್ರತ್ಯೇಕ ಭಾಷೆಗಳು. ಅರ್ಥ ಮಾಡಿಕೊಳ್ಳಬೇಕಿದ್ದರೆ ಕಲಿಯಲೇ ಬೇಕು. ಅಕ್ಕಪಕ್ಕದ ರಾಜ್ಯಗಳ ತಮಿಳು, ತೆಲುಗು, ಮರಾಠಿ, ಕೊಂಕಣಿಗಳ ರೀತಿಯಲ್ಲೇ ಈ ಭಾಷೆಗಳು ವಿಭಿನ್ನವಾಗಿವೆ.

ಉಪ ಭಾಷೆಯಲ್ಲದೇ ಕನ್ನಡವೇ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಬೇರೆಯಾಗುತ್ತದೆ. ಪ್ರತಿ ಭಾಷೆಯೂ 25ರಿಂದ 30 ಕಿಲೋಮೀಟರ್‌ಗೆ ಬದಲಾಗುತ್ತವೆ. ಧ್ವನಿ, ಶಬ್ದ, ಲಯಗಳೆಲ್ಲ ಬೇರೆಯಾಗಿರುತ್ತದೆ. ಗಡಿ ಪ್ರದೇಶಗಳಾಗಿದ್ದರೆ ಪಕ್ಕದ ಭಾಷೆಗಳ ಪ್ರಭಾವವೂ ಆಗಿರುತ್ತದೆ.

ಮೇಲ್ನೋಟಕ್ಕೆ ಮೈಸೂರು ಕನ್ನಡ, ಧಾರವಾಡ ಕನ್ನಡ, ಮಂಗಳೂರು ಕನ್ನಡ, ಹೈದರಾಬಾದ್‌ ಕನ್ನಡ, ಬೆಳಗಾವಿ ಕನ್ನಡ ಎಂದು ವಿಭಾಗಿಸುತ್ತವೆಯಾದರೂ ಸ್ವಲ್ಪ ಆಳಕ್ಕೆ ಹೋದರೆ ಮತ್ತೆ ಈ ಭಾಷೆಗಳಲ್ಲಿ ವ್ಯತ್ಯಾಸ ಕಾಣಬಹುದು. ಮೈಸೂರು ಕನ್ನಡ ಎಂದು ಮೈಸೂರು, ಬೆಂಗಳೂರು, ಮಂಡ್ಯ, ಹಾಸನ ಸುತ್ತಮುತ್ತಲ ಕನ್ನಡವನ್ನು ಕರೆಯಲಾಗುತ್ತದೆ. ಆದರೆ, ಬೆಂಗಳೂರಿನ ಕನ್ನಡಕ್ಕೂ, ಮಂಡ್ಯದ ಕನ್ನಡಕ್ಕೂ, ಮೈಸೂರಿನ ಕನ್ನಡಕ್ಕೂ ಹಾಸನದ ಕನ್ನಡಕ್ಕೂ ವ್ಯತ್ಯಾಸವಿದೆ.

ಅದೇ ರೀತಿ ಧಾರವಾಡ ಕನ್ನಡವು ಹುಬ್ಬಳ್ಳಿ–ಧಾರವಾಡದಲ್ಲಿ ಒಂದು ರೀತಿ ಇದ್ದರೆ, ಗದಗ, ಹಾವೇರಿಗಳಲ್ಲಿ ಬೇರೆ ಇದೆ. ಮಂಗಳೂರು ಕನ್ನಡ ಎಂದು ಕರಾವಳಿಯ ಕನ್ನಡವನ್ನು ಕರೆಯಲಾಗುತ್ತದೆ. ಇಲ್ಲಿಯೂ ಮಂಗಳೂರು ಕನ್ನಡ, ಉಡುಪಿ ಕನ್ನಡ, ಕಾರವಾರ ಕನ್ನಡ ಬೇರೆ ಬೇರೆಯಾಗಿವೆ. ತುಳು, ಕೊಂಕಣಿ ಭಾಷೆಗಳ ಪ್ರಭಾವವನ್ನು ಈ ಭಾಗದ ಕನ್ನಡದಲ್ಲಿ ಕಾಣಬಹುದು.

ಹೈದರಾಬಾದ್ ಕರ್ನಾಟಕ ಕನ್ನಡವು ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ ಭಾಗಗಳಲ್ಲಿ ಮಾತನಾಡುವ ಕನ್ನಡ. ಇದು ಉರ್ದು, ಮರಾಠಿ ಮತ್ತು ಸಂಸ್ಕೃತದ ಪ್ರಭಾವವನ್ನು ಹೊಂದಿದೆ. ಅಷ್ಟು ಮಾತ್ರವಲ್ಲ, ಪ್ರತಿ ಜಿಲ್ಲೆಗೂ ಇಲ್ಲಿಯೂ ವ್ಯತ್ಯಾಸವನ್ನು ಕಾಣಬಹುದು. ಬೆಳಗಾವಿ ಕನ್ನಡ ಎಂದು ಬೆಳಗಾವಿ, ವಿಜಯಪುರ, ಬಾಗಲಕೋಟೆ ಭಾಗದ ಕನ್ನಡವನ್ನು ಕರೆಯಲಾಗುತ್ತದೆ. ಇಲ್ಲಿಯೂ ಮರಾಠಿ ಪ್ರಭಾವದ ಜಿಲ್ಲೆಯಿಂದ ಜಿಲ್ಲೆಗೆ ವಿಭಿನ್ನವಾದ ಕನ್ನಡ ಇದೆ.