ಬೆಂಗಳೂರು, ನ.4; ಉತ್ತಮ ಶಿಕ್ಷಣ ಪಡೆದು, ಸ್ವಂತ ದುಡಿಮೆಯಿಂದ ಜೀವನ ನಿರ್ವಹಣೆ ಮಾಡಲು ಸಾಮರ್ಥ್ಯವಿರುವ ಹಾಗೂ ಸ್ವಾವಲಂಬಿಯಾಗಿರುವ ಹೆಂಡತಿಗೆ ಗಂಡನಿಂದ ಜೀವನಾಂಶ (Maintenance) ಪಡೆಯುವ ಅರ್ಹತೆಯಿರುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್​ ಮಹತ್ವದ ತೀರ್ಪು ನೀಡಿದೆ. ಕಾನೂನಿನ ಪ್ರಕಾರ ಪತಿಯು ತನ್ನ ಪತ್ನಿಯನ್ನು ಎಲ್ಲಾ ಸಂದರ್ಭಗಳಲ್ಲೂ ಕಡ್ಡಾಯವಾಗಿ ಪೋಷಿಸಲೇಬೇಕು ಎಂದು ಎಲ್ಲೂ ಹೇಳಿಲ್ಲ. ಪತ್ನಿಯು ತನ್ನನ್ನು ತಾನು ನಿರ್ವಹಿಸಿಕೊಳ್ಳಲು ಸಾಧ್ಯವಾಗದಿರುವುದು ಜೀವನಾಂಶ ಕೋರಲು ಇರುವ ಪ್ರಮುಖ ಪೂರ್ವಾಪೇಕ್ಷಿತ ಶರತ್ತಾಗಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಪತಿಯು ನೀಡಬೇಕಾಗಿದ್ದ ಮಾಸಿಕ 20,000 ರೂಪಾಯಿ ಜೀವನಾಂಶದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಚಿಲಕೂರು ಸುಮಾಲತಾ ಅವರಿದ್ದ ಪೀಠವು ಈ ಮಹತ್ವದ ಆದೇಶ ಹೊರಡಿಸಿದೆ.

“ಪತಿಯ ಆದಾಯವು ಪತ್ನಿಗಿಂತ ಎಷ್ಟೇ ಹೆಚ್ಚಿದ್ದರೂ, ಪತ್ನಿಯು ಉತ್ತಮ ಶಿಕ್ಷಣ ಪಡೆದು, ತಿಂಗಳಿಗೆ 54,700 ರೂಪಾಯಿಗಳಷ್ಟು ಗಳಿಕೆ ಮಾಡುತ್ತಿದ್ದರೆ ಹಾಗೂ ತನ್ನ ಜೀವನವನ್ನು ತಾನೇ ನೋಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದರೆ, ಆಕೆಯನ್ನು ಗಂಡನ ಮೇಲೆ ಅವಲಂಬಿತಳಾಗಿದ್ದಾಳೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಆರ್ಥಿಕ ಸ್ವಾವಲಂಬನೆ ಹಾಗೂ ಸ್ವಂತ ಗಳಿಕೆ ಇರುವುದು ಜೀವನಾಂಶದ ಅರ್ಜಿಯನ್ನು ವಜಾಗೊಳಿಸಲು ಸೂಕ್ತ ಆಧಾರವಾಗಿದೆ,” ಎಂದು ನ್ಯಾಯಪೀಠ ಹೇಳಿದೆ.

ಪೋಷಕರನ್ನು ಸಾಕುವಾಗ ಗಂಡನ ಹಣ ಬೇಕಿಲ್ಲ:

ಪತಿಯು ಕಂಪ್ಯೂಟರ್ ಸೈನ್ಸ್ ಎಂಜಿನಿಯರ್ ಆಗಿದ್ದು ವರ್ಷಕ್ಕೆ 40 ಲಕ್ಷ ರೂ. ಗಳಿಸುತ್ತಾನೆ ಎಂದು ಪತ್ನಿ ವಾದಿಸಿದ್ದರು. ಪತ್ನಿಯೂ ಐಟಿ ಕ್ಷೇತ್ರದಲ್ಲಿ ಉದ್ಯೋಗಿಯಾಗಿದ್ದು ವರ್ಷಕ್ಕೆ 10 ಲಕ್ಷ ರೂ. ಗಳಿಸುತ್ತಿದ್ದರು. ವಿಚಾರಣೆ ವೇಳೆ, “ನನ್ನ ಸ್ವಂತ ಗಳಿಕೆಯಿಂದ ತಿಂಗಳಿಗೆ 35,000 ರೂ. ವ್ಯಯಿಸಿ ಪೋಷಕರನ್ನು ನಾನೇ ಸಾಕುತ್ತಿದ್ದೇನೆ” ಎಂದು ಪತ್ನಿ ಹೇಳಿಕೊಟ್ಟಿದ್ದರು. ಈ ಹೇಳಿಕೆಯನ್ನು ಉಲ್ಲೇಖಿಸಿದ ಹೈಕೋರ್ಟ್, “ತನ್ನ ಆದಾಯದಲ್ಲಿ ಪೋಷಕರನ್ನೇ ಪೋಷಿಸುವ ಸಾಮರ್ಥ್ಯವಿರುವ ಮಹಿಳೆ, ತನಗೆ ಬದುಕಲು ಗಂಡನ ನೆರವು ಬೇಕು ಎನ್ನುವುದು ಒಪ್ಪಲು ಸಾಧ್ಯವಿಲ್ಲ,” ಎಂದು ಹೇಳಿದೆ.

ಇದನ್ನೂ ಓದಿ: ಸ್ವಾತಂತ್ರ್ಯ ಬಂದು 80 ವರ್ಷಗಳಾದರೂ ಇಲ್ಲ ಕರೆಂಟ್, ನೆಟ್‌ವರ್ಕ್: ಬೆಳಗಾವಿಯ ಗವಳಿವಾಡ ಗ್ರಾಮಸ್ಥರ ನರಕಯಾತನೆ

ದಂಪತಿಗಳ ನಡುವಿನ ಸಂಬಂಧ ಮತ್ತೆ ಹಾಳಾಗಬಾರದು ಹಾಗೂ ಭವಿಷ್ಯದಲ್ಲಿ ರಾಜಿ ಸಂಧಾನಕ್ಕೆ ಅವಕಾಶ ಇರಲಿ ಎಂಬ ಉದ್ದೇಶದಿಂದ, ಪತಿಯು ಇದುವರೆಗೆ ಪತ್ನಿಗೆ ಪಾವತಿಸಿರುವ ಜೀವನಾಂಶದ ಹಣವನ್ನು ಹಿಂತಿರುಗಿಸುವಂತೆ ಯಾವುದೇ ಕಾನೂನು ಪ್ರಕ್ರಿಯೆ ನಡೆಸಬಾರದು ಎಂದು ಹೈಕೋರ್ಟ್ ಸೂಚಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ