ದೇಶವೊಂದು ಉಳಿದು, ಪ್ರಗತಿ ಕಾಣುವುದಕ್ಕೆ ಅಲ್ಲಿನ ನೀರಿನ ಸಮೃದ್ಧಿ ಅತಿಮುಖ್ಯ. ಅದಕ್ಕಾಗಿ ನದಿ, ಪರಿಸರಗಳನ್ನು ನಿರಂತರವಾಗಿ ಆರೋಗ್ಯಕರವಾಗಿ ಇಟ್ಟುಕೊಳ್ಳುವುದೇ ನಮ್ಮ ಮುಖ್ಯ ಗುರಿಯಾಗಬೇಕು
Prajavani Dharane Price Widget &<>"▲▼Prajavani Dharane

ಜಯಮಂಗಲಿ ಹೆಸರು ಕೇಳಿದ್ದೀರಾ?. ಜಯಮಂಗಲಿ, ಕಣಿಹಳ್ಳ, ಪಂಡರಿ, ವೀರವೈಷ್ಣವಿ, ಗುಂಡಾಲು ನದಿಗಳ ಹೆಸರು ಕೇಳಿದ್ದೀರಾ? ಕರ್ನಾಟಕದ ಭಾಷೆಗಳು, ನೆಲ, ಜಲ ಸಂಪತ್ತನ್ನು ಅನುಭವಿಸುತ್ತ ಬದುಕು ಕಟ್ಟಿಕೊಂಡಿರುವ ಯಾರನ್ನಾದರೂ ಕರ್ನಾಟಕದಲ್ಲಿ ಹರಿಯುವ ನದಿಗಳು ಯಾವುವೆಂದು ಕೇಳಿ. ಬಹುತೇಕರು ತಕ್ಷಣ ಹೇಳುವ ಹೆಸರುಗಳೆಂದರೆ, ಕೃಷ್ಣಾ, ಕಾವೇರಿ, ತುಂಗಭದ್ರಾ, ಭೀಮಾ, ಶರಾವತಿ, ನೇತ್ರಾವತಿ... ಹೆಚ್ಚುಕಡಿಮೆ ಇಷ್ಟೇ.

ಜಯಮಂಗಲಿ ತುಮಕೂರು ಜಿಲ್ಲೆಯ ದೇವರಾಯನದುರ್ಗದಲ್ಲಿ ಹುಟ್ಟಿ ಕೊರಟಗೆರೆ, ಮಧುಗಿರಿ ತಾಲ್ಲೂಕುಗಳಲ್ಲಿ ಸಾಗಿ, ಸುಮಾರು 84 ಕಿಮೀ ಹರಿದು, ಆಂದ್ರಪ್ರದೇಶದ ಹಿಂದುಪುರದ ಬಳಿ ಉತ್ತರ ಪಿನಾಕಿನಿ ನದಿಯನ್ನು ಸೇರುತ್ತದೆ. ಈ ಪುಟ್ಟ ನದಿಗೂ ಗರುಡಾಚಲ ಮತ್ತು ಸುವರ್ಣಮುಖಿ ಎನ್ನುವ ಎರಡು ಉಪನದಿಗಳಿವೆ. ಉತ್ತರ ಪಿನಾಕಿನಿ ನದಿಗೆ ಜಯಮಂಗಲಿಯೊಂದೇ ಉಪನದಿಯಲ್ಲ. ಚಿತ್ರಾವತಿ, ಪಾಪಾಗ್ನಿ ನದಿಗಳೂ ಉತ್ತರ ಪಿನಾಕಿನಿಯನ್ನು ಸೇರುತ್ತವೆ. ನೋಡಿ, ಉತ್ತರ ಪಿನಾಕಿನಿ ಒಂದು ಸ್ವತಂತ್ರ ನದಿಯಾಗಿ ಹರಿಯುವುದಿಲ್ಲ. ತನ್ನೊಳಗೆ ತನ್ನ ಉಪನದಿಗಳನ್ನೂ, ಜೊತೆಗೆ ಇನ್ನಷ್ಟು ತೊರೆ, ಹಳ್ಳಗಳನ್ನೂ ಸೇರಿಸಿಕೊಂಡು, ಆ ಒಟ್ಟೂ ಪರಿಸರದ ಭಾಗವಾಗಿ ಒಂದು ನದಿಯಾಗಿ ಹರಿಯುತ್ತದೆ. ಇದನ್ನೇ ಒಂದು ನದೀವ್ಯವಸ್ಥೆ (river system) ಎನ್ನುವುದು. ಇಂತಹ ನೂರಾರು ಕಿರುನದಿಗಳ ಹಲವಾರು ನದೀವ್ಯವಸ್ಥೆಗಳು ಕಾಲದಿಂದಲೂ ಕರ್ನಾಟಕದಲ್ಲಿ ಇವೆ. ಸಾಮಾನ್ಯವಾಗಿ ಇಂತಹ ನದೀವ್ಯವಸ್ಥೆಗಳನ್ನೇ ಪ್ರಮುಖ ನದಿಗಳೆಂದು ನಾವು ಗುರುತಿಸುತ್ತೇವೆ.

ಇಂದು ಈ ನದೀವ್ಯವಸ್ಥೆಗಳ ಸ್ಥಿತಿಗತಿ ಏನಾಗಿದೆ? ಒಂದು ಕಾಲದಲ್ಲಿ ಸಮೃದ್ಧವಾಗಿ ಹರಿಯುತ್ತಿದ್ದ ಜಯಮಂಗಲಿಯಂತಹ ನದಿಗಳಲ್ಲಿ ಇಂದು ಬಹುತೇಕ ಹರಿವೇ ಇಲ್ಲವಾಗಿದೆ ಏಕೆ? ಬೆಂಗಳೂರಿನ ಹೃದಯಭಾಗದಲ್ಲಿ ಹರಿಯುವ ವೃಷಭಾವತಿ ‘ನಾಗರಭಾವಿ ಮೋರಿ’ ಎಂದು ಹೀನಾಯವಾಗಿ ಕರೆಸಿಕೊಳ್ಳುವುದು ಏಕೆ? ನಂದಿದುರ್ಗ ಬೆಟ್ಟಸಾಲಿನಲ್ಲಿ ಹುಟ್ಟಿ ಹರಿದು ಅವಿಭಜಿತ ಕೋಲಾರ ಜಿಲ್ಲೆಗೆ ಅಷ್ಟಿಷ್ಟು ನೀರುಣಿಸುತ್ತಿದ್ದ ನದಿಗಳು ಇಂದು ಹೇಳಹೆಸರಿಲ್ಲದಂತಾಗಿವೆ ಏಕೆ? ಎತ್ತಿನಹೊಳೆ ತಿರುವು ಯೋಜನೆಯಿಂದ ಬರಪೀಡಿತ ಜಿಲ್ಲೆಗಳಿಗೆ ನೀರು ಹರಿಸುವ ಯೋಜನೆ ಇನ್ನೂ ಮರೀಚಿಕೆಯಾಗಿಯೇ ಕಾಣುತ್ತಿರುವುದು ಏಕೆ? ಕಾವೇರಿಯಲ್ಲಿ ಹರಿಯುವ ನೀರಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಗ್ಗುತ್ತಿರುವುದು ಏಕೆ? ಅದರಲ್ಲಿ ಹರಿಯುವ ನೀರು ಇನ್ನು ಕೆಲವೇ ವರ್ಷಗಳಲ್ಲಿ ಮಾನವ ಬಳಕೆಗೆ ಯೋಗ್ಯವಲ್ಲ ಎನ್ನುವಷ್ಟು ಕಲುಷಿತಗೊಳ್ಳುತ್ತದೆ ಎನ್ನುವ ಆತಂಕ ನಮ್ಮಲ್ಲಿ ಸುಳಿಯುತ್ತಿರುವುದು ಏಕೆ?

ಶತಶತಮಾನಗಳಿಂದ ಆರೋಗ್ಯಕರವಾಗಿ ಹರಿಯುತ್ತಿದ್ದ, ಜೀವ ಪೋಷಿಸುತ್ತಿದ್ದ ನಮ್ಮ ನದಿಗಳು ಕಳೆದ ಐವತ್ತು ಅರವತ್ತು ವರ್ಷಗಳಿಂದೀಚೆಗೆ ವೇಗವಾಗಿ, ತೀಕ್ಷ್ಣವಾಗಿ ಸೊರಗುತ್ತಿರುವ, ರೋಗಗ್ರಸ್ತವಾಗುತ್ತಿರುವ, ಸಾಯುತ್ತಿರುವ ಸಮಸ್ಯೆಗಳಿಗೆ ಕಾರಣಗಳೇನು ಎಂದು ಅನೇಕರಿಗೆ ತಿಳಿದೇ ಇದೆ. ಆಳುವ ಸರ್ಕಾರಗಳಿಗೂ ತಿಳಿದಿದೆ. ಸಿನೆಮಾಗಳು ‘ರಾಮ್ ತೇರಿ ಗಂಗಾ ಮೈಲಿ ಹೋಗಯೀ...’ ಎಂದು ಗೋಳಿಟ್ಟು ಹಾಡಿಯೂ ಆಯಿತು. ಗಂಗಾ ನದಿಯನ್ನು ಮತ್ತೆ ಪವಿತ್ರಗೊಳಿಸಲು ‘ನಮಾಮಿ ಗಂಗೆ’ ಎನ್ನುವ ಬಹುಶತಕೋಟಿ ಯೋಜನೆಯೂ ತಯಾರಾಯಿತು. ಗಂಗೆ ಶುದ್ಧವಾಯಿತೇ? ಒತ್ತುವರಿ, ಮಾಲಿನ್ಯ ತಗ್ಗಿತೇ? ಹೆಣಗಳು ತೇಲುವ ಜಲಸ್ಮಶಾನವಾಗುವುದು ನಿಂತಿತೇ?

ಈ ಸಮಸ್ಯೆ, ಆತಂಕಗಳು ದಿನೇದಿನೇ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಮಾನವ ಹಕ್ಕುಗಳಂತೆಯೇ ನದಿಗಳಿಗೂ ಜೀವಿಸುವ ಹಕ್ಕನ್ನು ನೀಡಬೇಕು, ಪ್ರತಿ ನದಿಯನ್ನೂ ಒಂದು ಲಿವಿಂಗ್ ಪರ್ಸನ್ ಎಂದು ಪರಿಗಣಿಸಬೇಕು ಎಂಬ ದೇಶವ್ಯಾಪಿ ಬೇಡಿಕೆಯೊಂದು ನ್ಯಾಯಾಲಯದವರೆಗೂ ಹಬ್ಬಿತು.

ಉತ್ತರಾಖಂಡದ ಹೈಕೋರ್ಟು ಅದಕ್ಕೆ ಮನ್ನಣೆಯನ್ನೂ ನೀಡಿ ತೀರ್ಪು ನೀಡಿತು. ಆದರೆ ಅದೇ ರಾಜ್ಯದ ಸರಕಾರ ‘ಆ ತೀರ್ಪನ್ನು ಪ್ರಾತ್ಯಕ್ಷಿಕವಾಗಿ ಜಾರಿಗೆ ತರುವುದು ಕಷ್ಟ’ ಎಂದು ಸುಪ್ರೀಂ ಕೋರ್ಟಿನ ಮೊರೆ ಹೋಗಿ ಆ ತೀರ್ಪಿಗೆ ತಡೆ ತಂದಿತು.

ದೇಶದ ಬಹುಸಂಖ್ಯಾತರು ಗಂಗೆ ಪವಿತ್ರ ಎಂದು ಪೂಜಿಸುವ ದೇಶದಲ್ಲಿಯೇ ಅದರ ಆರೋಗ್ಯಕರ ಹರಿವಿಗೆ ಇಚ್ಛಾಶಕ್ತಿಯ ಕೊರತೆ ಇದೆ ಎಂದಾದರೆ, ಇನ್ನು ತುಂಗೆ, ಭದ್ರೆ, ಜಯಮಂಗಲಿಯರ ಗತಿ ಏನು?

ದೇಶವೊಂದು ಉಳಿದು, ಪ್ರಗತಿ ಕಾಣುವುದಕ್ಕೆ ಅಲ್ಲಿನ ನೀರಿನ ಸಮೃದ್ಧಿ ಅತಿಮುಖ್ಯ. ಅದಕ್ಕಾಗಿ ನದಿ, ಪರಿಸರಗಳನ್ನು ನಿರಂತರವಾಗಿ ಆರೋಗ್ಯಕರವಾಗಿ ಇಟ್ಟುಕೊಳ್ಳುವುದೇ ನಮ್ಮ ಮುಖ್ಯ ಗುರಿಯಾಗಬೇಕು. ಈ ವಿಚಾರಗಳು ನಮ್ಮ ನೀತಿ ನಿರೂಪಕರಿಗೆ ತಿಳಿದಿದೆ ಅಲ್ಲವೇ? ಆದರೂ ಇತ್ತೀಚಿನ ದಶಕಗಳಲ್ಲಿ ಭಾರತದಲ್ಲಿ, ಕರ್ನಾಟಕದಲ್ಲಿಯೂ, ಯೋಜನಾ ಸಂಸ್ಥೆಗಳು ನೈಸರ್ಗಿಕ ಸಂಪತ್ತಿನ ಬಳಕೆಯನ್ನು ಮರುಹಂಚಿಕೆ, ಮರುವಿನ್ಯಾಸ ಮಾಡುವ ಹೆಸರಿನಲ್ಲಿ ನದಿಗಳ ತಿರುವು, ಜೋಡಣೆ ಯೋಜನೆಗಳನ್ನು ಮುಂದಿಡುತ್ತಿವೆ. ಅವಕ್ಕೆ ‘ಅಭಿವೃದ್ಧಿ’ ಎನ್ನುವ ಹಣೆಪಟ್ಟಿ ಕಟ್ಟುತ್ತಿವೆ.

ಸೋಜಿಗವೆಂದರೆ, ಅನೇಕ ಸಾರಿ ಸ್ಥಳೀಯ ಜನಜೀವನ, ದೀರ್ಘಕಾಲಿಕ ಸಾಮಾಜಿಕ-ಆರ್ಥಿಕ ಮತ್ತು ಪರಿಸರದ ದೃಷ್ಟಿಯಿಂದ ಕೆಲವು ಯೋಜನೆಗಳು ಕಾರ್ಯಸಾಧುವಲ್ಲ, ಉದ್ದೇಶ ಈಡೇರುವುದೇ ಅನುಮಾನ ಎನ್ನುವ ವಿಚಾರಗಳೂ ಆ ಸಂಸ್ಥೆಗಳಿಗೆ ತಿಳಿದೇ ಇರುತ್ತದೆ. ಆದರೂ ಅಂತಹ ಯೋಜನೆಗಳನ್ನು ಹಮ್ಮಿಕೊಂಡು ಜನರಲ್ಲಿ ಆತಂಕ ಉಂಟುಮಾಡಿದಾಗ, ಅವುಗಳ ಹಿಂದೆ ಮರೆಮಾಚಿದ ಉದ್ದೇಶಗಳಿರಬಹುದು ಎನ್ನುವ ಅನುಮಾನ ಸಹಜವಾಗಿ ಮೂಡುತ್ತದೆ. ಸರ್ಕಾರಗಳು ಇಂತಹ ಜನವಿರೋಧಿ, ನಿಸರ್ಗ ವಿರೋಧಿ ಕೆಲಸಗಳಿಗೆ ಕೈಯಿಟ್ಟಾಗ ನಮ್ಮ ದೇಶದ ನೈಸರ್ಗಿಕ ಸಂಪತ್ತುಗಳನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗುತ್ತದೆ ಅಲ್ಲವೇ? ಹಾಗಾದರೆ, ನಾವೇನು ಮಾಡಬಹುದು?

ಪೀಪಲ್ಸ್ ರಿಜಿಸ್ಟ್ರಿ

ಮೊದಲ ಹಂತವಾಗಿ ಸ್ಥಳೀಯರಾದ ನಾವೇ ನಮ್ಮೆಲ್ಲ ನದಿಗಳ ಆರೋಗ್ಯ ತಪಾಸಣೆ ಮಾಡುವುದು. ನದಿಗಳ ಪರಿಸರ, ಆರೋಗ್ಯ ಅನಾರೋಗ್ಯ, ಜೀವಪೋಷಣೆ, ನದೀವ್ಯವಸ್ಥೆಗಳ ಸಾಮಾಜಿಕ ಸಾಂಸ್ಕೃತಿಕ ಮಹತ್ವ, ಶೋಷಣೆ, ಅಳಿವು ಉಳಿವಿನ ಬಗ್ಗೆ ನಾವು ಚಿಂತಿಸುವಾಗ ಅವು ಹರಿಯುವ ಪಾತ್ರಗಳಷ್ಟೇ ಅಲ್ಲ, ಆ ನದೀವ್ಯವಸ್ಥೆಗಳ ಒಟ್ಟೂ ಸ್ಥಿತಿಗತಿಗಳ ಬಗ್ಗೆ ಮಾತಾಡಬೇಕಾಗುತ್ತದೆ. ಏಕೆಂದರೆ, ಒಂದೊಂದು ನದೀವ್ಯವಸ್ಥೆಯ ಪ್ರಾಕೃತಿಕ ಮತ್ತು ಭೌಗೋಳಿಕ ಲಕ್ಷಣವೂ ವಿಭಿನ್ನ, ವಿಶಿಷ್ಠ.

ಇಂದು ನಮ್ಮಲ್ಲಿ ಹಲವಾರು ಜಿಪಿಎಸ್ ಡೇಟಾ ಕಲೆಕ್ಷನ್ ಟೂಲ್ ಗಳಿವೆ. ಅವನ್ನು ಬಳಸಿಕೊಂಡು ಒಂದು ಸಮೀಕ್ಷೆಯನ್ನು ಡಿಸೈನ್ ಮಾಡಬಹುದು. ಮುಂದಿನ ಒಂದು ವರ್ಷದಲ್ಲಿ ನಮ್ಮೆಲ್ಲ ಸಣ್ಣ, ದೊಡ್ಡ ನದಿಗಳ ಸಾಮಾಜಿಕ, ವೈಜ್ಞಾನಿಕ ಆಡಿಟ್ ಮಾಡಬಹುದು. ಒಂದೊಂದೂ ನದಿಯ ಬಹು ಆಯಾಮದ ಡೇಟಾವನ್ನು ಸಂಗ್ರಹಿಸಿ, ಆಯಾ ನದಿಗೆ ಒದಗಿರುವ ಆಪತ್ತು, ಅದರ ಉಳಿವು, ಆರೋಗ್ಯ ಕುರಿತು ನದಿಗೊಂದು ವರದಿಯನ್ನು ಹೊರತರಬಹುದು. ಆಯಾ ನದಿಗೆ ಮನುಷ್ಯನಿಂದ ಆಗುತ್ತಿರುವ ವಿಪತ್ತುಗಳನ್ನು ಪ್ರಮುಖವಾಗಿ ಪಟ್ಟಿ ಮಾಡಬಹುದು. ವಿಪತ್ತಿನ ಅಂಶಗಳನ್ನು ಹೈಲೈಟ್ ಮಾಡಬಹುದು. ಪರಿಹಾರ ಮತ್ತು ಸಂರಕ್ಷಣೆಯ ಕ್ರಮಗಳನ್ನು ಗ್ರಾಮ, ತಾಲ್ಲೂಕು ಮಟ್ಟದಲ್ಲಿ ನಮ್ಮ ಮಿತಿಯಲ್ಲಿ ಜಾರಿಗೊಳಿಸುವುದು ನಮ್ಮ ಮುಂದಿನ ನಡೆಯಾಗಬೇಕು. ನಮ್ಮ ಮಿತಿಯನ್ನು ಮೀರಿದ ಕ್ರಮಗಳಿಗಾಗಿ ಸರ್ಕಾರಗಳನ್ನು ಆಗ್ರಹಿಸಬಹುದು. ನಾಡಿನ ನೆಲ, ಜಲ, ಭಾಷೆಯ ರಕ್ಷಣೆ ಕೇವಲ ರಾಜಕೀಯ ಘೋಷಣೆಯಾಗದೇ, ಸಾಮಾಜಿಕ, ಪ್ರಾಕೃತಿಕ ರಕ್ಷಣೆಯ ಯೋಜನೆಯೂ ಆಗಲು ಇದೊಂದು ಅವಕಾಶ.

ಸಂಕ್ಷಿಪ್ತ ಮಾಹಿತಿ – ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ಕರುನಾಡೋತ್ಸವ: ರೋಗಗ್ರಸ್ತಗೊಂಡಿರುವ ಕರ್ನಾಟಕದ ನದಿಗಳ ಸಂರಕ್ಷಣೆಗೆ ಇಲ್ಲಿದೆ ಮಾರ್ಗ

ಒಂದು ಸಾಲಿನಲ್ಲಿಕರ್ನಾಟಕದ ನದಿಗಳ ಆರೋಗ್ಯವನ್ನು ರಕ್ಷಿಸಲು ಸ್ಥಳೀಯ ಮಟ್ಟದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸಿ, ನದಿಗಳ ಸಂರಕ್ಷಣೆಗೆ ಪೀಪಲ್ಸ್ ರಿಜಿಸ್ಟ್ರಿ ಸಿದ್ಧಪಡಿಸುವ ಮಹತ್ವದ ಯೋಜನೆಯನ್ನು ಲೇಖನವು ಪ್ರಸ್ತಾಪಿಸುತ್ತದೆ.ಏನು? ಏಕೆ? ಹೇಗೆ?

ನಮ್ಮ ನದಿಗಳ ಸ್ಥಿತಿ ಏನಾಗಿದೆ?

ಜಯಮಂಗಲಿಯಂತಹ ನದಿಗಳು ಇಂದು ಹರಿವಿಲ್ಲದೆ ಸೊರಗಿವೆ, ವೃಷಭಾವತಿಯಂತಹ ನದಿಗಳು ಕಲುಷಿತಗೊಂಡಿವೆ ಮತ್ತು ಪ್ರಮುಖ ನದಿಗಳಲ್ಲಿ ನೀರಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಗ್ಗುತ್ತಿದೆ.

ನದಿಗಳ ಸಂರಕ್ಷಣೆಗೆ ಏಕೆ ಆದ್ಯತೆ ನೀಡಬೇಕು?

ದೇಶದ ಅಭಿವೃದ್ಧಿ ಮತ್ತು ಜನಜೀವನದ ಉಳಿವಿಗೆ ನದಿಗಳ ನೀರಿನ ಸಮೃದ್ಧಿ ಅತಿಮುಖ್ಯವಾಗಿದೆ; ನದಿಗಳನ್ನು ಜೀವಂತ ವ್ಯಕ್ತಿಗಳೆಂದು ಪರಿಗಣಿಸಿ ಗೌರವಿಸುವುದು ಅಗತ್ಯ.

ಪೀಪಲ್ಸ್ ರಿಜಿಸ್ಟ್ರಿ ಎಂದರೇನು?

ಇದು ಸ್ಥಳೀಯರು ಸ್ವಯಂಪ್ರೇರಿತರಾಗಿ ತಮ್ಮ ಭಾಗದ ನದಿಗಳ ಆರೋಗ್ಯ, ಪರಿಸರ ಮತ್ತು ಮಾಲಿನ್ಯದ ಕುರಿತು ವೈಜ್ಞಾನಿಕ ಸಮೀಕ್ಷೆ ನಡೆಸಿ ಸಿದ್ಧಪಡಿಸುವ ಸಮಗ್ರ ವರದಿಯಾಗಿದೆ.

ಈ ಸಮೀಕ್ಷೆಯನ್ನು ಹೇಗೆ ಕೈಗೊಳ್ಳಬಹುದು?

ಪ್ರತಿ ತಾಲ್ಲೂಕಿನ ಕಾಲೇಜು ವಿದ್ಯಾರ್ಥಿಗಳು, ಯುವಕರು ಮತ್ತು ಸಂಘಟನೆಗಳು ಜಿಪಿಎಸ್ ಮತ್ತು ಸ್ಥಳೀಯ ಸಂಪನ್ಮೂಲ ಬಳಸಿಕೊಂಡು ಬೇಸಿಗೆ ಮತ್ತು ಮಳೆಗಾಲದಲ್ಲಿ ಸಮೀಕ್ಷೆ ನಡೆಸಬಹುದು.

ಈ ಯೋಜನೆಯ ಮುಂದಿನ ಗುರಿ ಏನು?

2027ರ ವೇಳೆಗೆ ರಾಜ್ಯದ ಎಲ್ಲಾ ನದಿಗಳ ಸಮಗ್ರ ವರದಿಯನ್ನು ಸಿದ್ಧಪಡಿಸಿ, ನದಿಗಳ ಸಂರಕ್ಷಣೆಯನ್ನು ಕೇವಲ ಘೋಷಣೆಯಾಗಿ ಉಳಿಸದೆ ಒಂದು ದೊಡ್ಡ ಜನಾಂದೋಲನವಾಗಿಸುವುದು ಇದರ ಗುರಿ.

&ಪ್ರಮುಖ ಅಂಕಿಅಂಶಗಳು84 ಕಿಮೀಜಯಮಂಗಲಿ ನದಿಯ ಹರಿವಿನ ಉದ್ದ2027ಯೋಜನೆಯ ಆಶಯದ ವರ್ಷಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ರಾಜ್ಯದ ಎಲ್ಲ ನದಿಗಳ ಸಮೀಕ್ಷೆಯನ್ನು ಒಂದು ತಂಡ ಹೇಗೆ ಮಾಡಲಾದೀತು? ಹಣಕಾಸು ಎಲ್ಲಿಂದ? ಒಂದು ವರ್ಷದಲ್ಲಿ ಸಾಧ್ಯವೇ? ಈ ಆತಂಕಗಳು ಬೇಕಿಲ್ಲ. ಪ್ರತಿ ತಾಲ್ಲೂಕಿನಲ್ಲಿ ಒಂದು ಕಾಲೇಜು ಅಥವಾ ಒಂದು ಸಂಘಟನೆ ಸ್ವಯಂ ಪ್ರೇರಿತವಾಗಿ ಅಲ್ಲಿನ ಸ್ಥಳೀಯ ನದಿಯ ಸಮೀಕ್ಷೆಯನ್ನು ಕೈಗೊಂಡರೆ ಸಾಕು, ಆ ನದಿಯ ವರದಿ ಸಿದ್ಧವಾಗುತ್ತದೆ. ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ಯುವಕರ, ವಿದ್ಯಾರ್ಥಿಗಳ ಒಂದು ತಂಡ ಬೇಸಿಗೆ ಮತ್ತು ಮಳೆಗಾಲದ ಎರಡು ವಾರಾಂತ್ಯಗಳಲ್ಲಿ ಎರಡು ಸಮೀಕ್ಷೆಗಳನ್ನು ಕೈಗೊಂಡರೆ ಸಮೀಕ್ಷೆಯೇ ಪೂರ್ಣಗೊಳ್ಳುತ್ತದೆ. ಇದಕ್ಕೆ ಸರ್ಕಾರದ, ಯಾವುದೇ ಕಾರ್ಪೋರೇಟ್ ಅಥವಾ ಏಜೆನ್ಸಿಯ ಪ್ರಾಯೋಜನೆ ಅಗತ್ಯವಿಲ್ಲ. ಪ್ರಾಯೋಜನೆ ಪಡೆಯದೆಯೇ ನಡೆಸಬೇಕು ಏಕೆಂದರೆ, ಇದು ನಿಜಕ್ಕೂ ಪೀಪಲ್ಸ್ ರಿಜಿಸ್ಟ್ರಿಯೇ ಆಗಬೇಕು. ವಿವಿಧ ನದಿಗಳ ಡೇಟಾಗಳನ್ನು ಒಂದೆಡೆ ಕ್ರೋಡೀಕರಿಸಿ, ಸಂಸ್ಕರಿಸಲು ಒಂದು ನೋಡಲ್ ಏಜೆನ್ಸಿ ಬೇಕಾಗಬಹುದಷ್ಟೇ. ರಾಜ್ಯದ ಹಲವು ವಿಷಯ ತಜ್ಞರ ಸಹಕಾರದೊಂದಿಗೆ ಇಡೀ ರಾಜ್ಯದ ನದಿಗಳ ಒಂದು ಸಮಗ್ರ ವರದಿಯನ್ನು ತಯಾರಿಸಬಹುದು. ಇವೆಲ್ಲವೂ ಪ್ರಾಕ್ಟಿಕಲ್ ಆಗಿ, ದೊಡ್ಡ ಸಂಪನ್ಮೂಲದ ಅಗತ್ಯವೇ ಇಲ್ಲದೆ ಸಾಧ್ಯವಿದೆ ಎನ್ನುವುದೇ ಹೆಗ್ಗಳಿಕೆಯಾದೀತು.

ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಒಂದೊಂದು ತಾಲ್ಲೂಕಿನಲ್ಲೂ ಒಂದೊಂದು ಸಂಘಟನೆಯೋ, ಕಾಲೇಜೋ ಮುಂದೆ ಬರುತ್ತದೆಂದು ನಿರೀಕ್ಷಿಸಬಹುದೇ? ರಾಜ್ಯದ ಜನರಲ್ಲಿ ಪ್ರಚುರಪಡಿಸಲು ಯಾವುದಾದರೂ ಒಂದು ಸುದ್ದಿಸಂಸ್ಥೆ ಮುಂದಾಗಬಹುದೇ? 2027 ರಲ್ಲಿ ಈ ಯೋಜನೆ ಹಮ್ಮಿಕೊಳ್ಳಬಹುದೇ?

ಯೋಜನೆ ಪ್ರಾಥಮಿಕ ರೂಪುರೇಷೆಯ ಕರಡೊಂದು ಈಗಾಗಲೇ ತಯಾರಿದೆ. ಆಸಕ್ತರು ಸಂಪರ್ಕಿಸಬಹುದು: conservecauvery@gmail.com

( ಲೇಖಕರು: ಚಲನಚಿತ್ರ ನಿರ್ದೇಶಕರು, ನದಿ ಸಂರಕ್ಷಣೆ ಹೋರಾಟಗಾರರು)

ಕರುನಾಡೋತ್ಸವ ಇಂದಿನ ವಿಶೇಷ ಲೇಖನಗಳು: ಮಂಗಳವಾರ, 03 ನವೆಂಬರ್ 2026ಪ್ರಜಾವಾಣಿ ಕರುನಾಡೋತ್ಸವ| ಸಂಚಿ ಹೊನ್ನಮ್ಮ: ಸ್ತ್ರೀಪರ ಚಿಂತನೆಯ ಕಾವ್ಯ ಕೋಗಿಲೆಕರುನಾಡೋತ್ಸವ: ಕರ್ನಾಟಕದ ಸಮುದ್ರ ತಟದ ಬೆವರುಪ್ಪು ಮತ್ತು ಸಾಮರಸ್ಯದ ಸಂಸ್ಕೃತಿಕರುನಾಡೋತ್ಸವ ’ಪದ ಕಟ್ಟು‘ ಭಾಗ–3: ಇಂದಿನ ಸವಾಲುಕರುನಾಡೋತ್ಸವ: ವಚನ ಸಾಹಿತ್ಯದ ಬೇರು, ಶರಣ ಪರಂಪರೆಯ ದಾರಿದೀಪ ದೇವರದಾಸಿಮಯ್ಯಪ್ರಜಾವಾಣಿ ಕರುನಾಡೋತ್ಸವ | ಸಾಹಿತಿಗಳ ಊರು–ಮನೆಯ ಈಗಿನ ಸ್ಥಿತಿಗತಿ: ಶಿವರಾಮ ಕಾರಂತ