ಬೆಂಗಳೂರು: ಬಸ್ ಪ್ರಯಾಣ ದರ ಹೆಚ್ಚಳದ ಅಧಿಕೃತ ಪ್ರಕಟಣೆ ಬುಧವಾರ ಹೊರ ಬೀಳಲಿದ್ದು ಬೆಂಗಳೂರು ನಗರದಲ್ಲಿ ಬಸ್‌ ಪ್ರಯಾಣ ದರವು ಗಣನೀಯವಾಗಿ ಏರಿಕೆಯಾಗಲಿದೆ. ಆದರೆ, ದೂರದ ಪ್ರಯಾಣಕ್ಕೆ ಹೆಚ್ಚು ಹೊರೆಯಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಸಾರಿಗೆ ಸಚಿವ ಬೈರತಿ ಸುರೇಶ್‌ ಅವರು ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿ, ಬಸ್‌ ಪ್ರಯಾಣ ದರ ಹೆಚ್ಚಳದ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಂಡಿದ್ದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಲಿದ್ದಾರೆ. ಈ ಸಭೆಯಲ್ಲಿ ಸಾರಿಗೆ ನಿಗಮಗಳ ಮುಖ್ಯಸ್ಥರು ಕೂಡ ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.

ನಿವೃತ್ತ ಐಎಎಸ್ ಅಧಿಕಾರಿ ಅತುಲ್ ಕುಮಾರ್ ತಿವಾರಿ ಅಧ್ಯಕ್ಷತೆಯಲ್ಲಿರುವ ಮೂವರು ಸದಸ್ಯರ ‘ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿ’ಯು ವರದಿ ಸಲ್ಲಿಸಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ ಬಸ್‌ ಪ್ರಯಾಣ ದರವನ್ನು ಶೇ 25ರಷ್ಟು ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವ್ಯಾಪ್ತಿಯಲ್ಲಿ ಶೇ 40ರಷ್ಟು ಹೆಚ್ಚಿಸಲು ಸಮಿತಿ ಶಿಫಾರಸು ಮಾಡಿದೆ. ದರಗಳನ್ನು ಹೆಚ್ಚಿಸದಿದ್ದರೆ ಸಾರಿಗೆ ನಿಗಮಗಳು ‘ತೀವ್ರ ಸಂಕಷ್ಟ’ಕ್ಕೆ ಸಿಲುಕಲಿವೆ ಎಂದೂ ಸಮಿತಿಯು ಎಚ್ಚರಿಸಿದೆ.

‘ಸಮಿತಿ ನೀಡಿರುವ ವರದಿಯಲ್ಲಿ ಪ್ರಯಾಣ ದರ ಹೆಚ್ಚಳ ಪ್ರಸ್ತಾವ ಜಾಸ್ತಿ ಇದೆ. ಆ ವರದಿಯನ್ನು ಒಪ್ಪಿಕೊಂಡಿದ್ದರೂ ವಾಸ್ತವದಲ್ಲಿ ದರ ಏರಿಕೆ ‘ಅಷ್ಟೊಂದು ಇರುವುದಿಲ್ಲ’ ಎಂದು ಬೈರತಿ ಸುರೇಶ್‌ ಅವರು ಸುದ್ದಿಗಾರರಿಗೆ ಮಂಗಳವಾರ ತಿಳಿಸಿದರು.

ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ₹7.81 ಹೆಚ್ಚಳವಾಗಿರುವುದರಿಂದ, ವಾರ್ಷಿಕ ಇಂಧನ ವೆಚ್ಚವು ₹395 ಕೋಟಿ ಏರಿಕೆಯಾಗಿದೆ ಎಂದು ನಿಗಮಗಳು ಅಂದಾಜಿಸಿವೆ. 2025ರ ಜನವರಿಯಲ್ಲಿ ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ಬಸ್ ದರಗಳನ್ನು ಏಕರೂಪವಾಗಿ ಶೇ 15ರಷ್ಟು ಹೆಚ್ಚಿಸಲಾಗಿತ್ತು.

261104-22-2077104520