ಬೆಂಗಳೂರು: ರಾಜ್ಯದಲ್ಲಿ ₹1.5 ಲಕ್ಷ ಕೋಟಿ ಹೂಡಿಕೆ ಆಕರ್ಷಿಸಿ, 2030ರ ವೇಳೆಗೆ 20 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಆಯೋಜಿಸಿರುವ ಮೂರು ದಿನಗಳ ‘ಬೆಂಗಳೂರು ಕೌಶಲ ಶೃಂಗಸಭೆ’ಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ 2032ರ ಹೊತ್ತಿಗೆ ರಾಜ್ಯವನ್ನು 1 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಬೆಳೆಸುವ ಗುರಿ ಇದೆ. ಈಗಾಗಲೇ ಶೇಕಡಾ 75ರಷ್ಟು ಹೂಡಿಕೆ ಪ್ರಸ್ತಾವನೆಗಳು ನೈಜವಾಗಿ ಬಂದಿವೆ. ಕೌಶಲ್ಯಾಭಿವೃದ್ಧಿಗಾಗಿಯೇ `ನಿಪುಣ ಕರ್ನಾಟಕ’ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ ಎಂದು ಹೇಳಿದರು.
ಕೌಶಲಾಭಿವೃದ್ಧಿ ಮತ್ತು ಜೀವನೋಪಾಯ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮಾತನಾಡಿ, ಬೆಂಗಳೂರು ಕೇವಲ ತಂತ್ರಜ್ಞಾನದ ರಾಜಧಾನಿಯಾಗಿ ಉಳಿಯದೆ, ಜಾಗತಿಕ ಮಟ್ಟದ ಕೌಶಲ ಮತ್ತು ಯುವಶಕ್ತಿಯ ಕೇಂದ್ರವಾಗಬೇಕು ಎಂದು ಹೇಳಿದರು.
ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಕರ್ನಾಟಕವನ್ನು ಜ್ಞಾನ ಮತ್ತು ಕೌಶಲದ ಕೇಂದ್ರವಾಗಿ ಬೆಳೆಸಲಾಗಿದೆ. ರಾಜ್ಯವು ವಿಶ್ವದ ನಾಲ್ಕನೇ ಅತಿದೊಡ್ಡ ತಂತ್ರಜ್ಞಾನ ಕ್ಲಸ್ಟರ್ ಆಗಿದ್ದು, ಸ್ಟಾರ್ಟ್ಅಪ್ಗಳ ಸಂಖ್ಯೆಯಲ್ಲಿ ವಿಶ್ವದಲ್ಲಿ ಎಂಟನೇ ಸ್ಥಾನದಲ್ಲಿದೆ ಎಂದರು.
‘ಕರ್ನಾಟಕ ಕೌಶಲ ಸಂಪದ’ ‘ಕರ್ನಾಟಕ ಟ್ಯಾಲೆಂಟ್ ಲ್ಯಾಂಡ್ಸ್ಕೇಪ್’, ‘ಕರ್ನಾಟಕ ವರ್ಕ್ಫೋರ್ಸ್ ಬ್ಲೂಪ್ರಿಂಟ್–2030’ ಬಿಡುಗಡೆ ಮಾಡಲಾಯಿತು.
ಸಚಿವರಾದ ಬಸವರಾಜ ರಾಯರಡ್ಡಿ, ರಿಜ್ವಾನ್ ಅರ್ಷದ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕೌಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಿವಕಾಂತಮ್ಮ ನಾಯಕ, ಇಲಾಖೆ ಪ್ರಧಾನ ಕಾರ್ಯದರ್ಶಿ ಸುಬೋದ್ ಯಾದವ್, ಉದ್ಯಮಿ ಗುರುಪ್ರಸಾದ್ ಮುದ್ಲಾಪುರ, ರಂಗೇಶ್ ರಾಘವನ್, ಕೌಶಲ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಇ.ವಿ. ರಮಣರೆಡ್ಡಿ ಇದ್ದರು.
6500 ಪ್ರತಿನಿಧಿಗಳು
ಮೂರು ದಿನಗಳ ಶೃಂಗಸಭೆಯಲ್ಲಿ ದೇಶ, ವಿದೇಶಗಳ 6,500 ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಯುವ ಉದ್ಯೋಗ ಸೇತು ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬುಧವಾರ ಚಾಲನೆ ನೀಡಲಿದ್ದಾರೆ.
261104-4-1734671598

