ಬೆಂಗಳೂರು: ಗ್ರಾಮ ಆಡಳಿತ ಅಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಐದು ಸಾವಿರ ಅಭ್ಯರ್ಥಿಗಳು, ಈ ಹಿಂದಿನ ಸಿವಿಲ್ ಪೋಲಿಸ್, ಕೆಎಸ್ಆರ್ಪಿ, ಸಿಎಆರ್ /ಡಿಎಆರ್ ಕಾನ್ಸ್ಟೆಬಲ್, ಭೂಮಾಪಕ ಹುದ್ದೆಗಳ ಪರೀಕ್ಷೆಗಳಲ್ಲಿ ಎಷ್ಟು ಅಂಕ ಪಡೆದಿದ್ದಾರೆ ಎನ್ನುವ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ.
ಪಾರದರ್ಶಕತೆಯ ಭಾಗವಾಗಿ ಈ ಪಟ್ಟಿ ಹಾಕಿದ್ದು, ಅಂಕಗಳಲ್ಲಿ ಭಾರಿ ವ್ಯತ್ಯಾಸ ಇರುವ ಪ್ರಕರಣಗಳನ್ನು ಆಯಾ ಜಿಲ್ಲಾಧಿಕಾರಿಗಳಿಗೆ ಕಳುಹಿಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ಕೋರಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಕೆಎಸ್ಆರ್ಪಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ಹಾವೇರಿ ಜಿಲ್ಲೆಯ ಅಭ್ಯರ್ಥಿಯೊಬ್ಬ ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆಯಲ್ಲಿ ರಾಜ್ಯಕ್ಕೇ ಮೊದಲ ಸ್ಥಾನ ಪಡೆದಿದ್ದ. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅನುಮಾನ ವ್ಯಕ್ತವಾದ ನಂತರ ತನಿಖೆಗೆ ಆದೇಶಿಸಲಾಗಿತ್ತು. ಹಾವೇರಿ ಜಿಲ್ಲಾಧಿಕಾರಿ ಈ ಬಗ್ಗೆ ವರದಿ ನೀಡಿದ್ದು, ಆ ಅಭ್ಯರ್ಥಿ ಮೊಬೈಲ್ ನೋಡಿ ಪರೀಕ್ಷೆ ಬರೆದಿರುವುದು ಸಾಬೀತಾಗಿದೆ ಎಂದು ವಿವರಿಸಿದ್ದಾರೆ.
ಈ ಪ್ರಕರಣದ ಕುರಿತು ಹಾವೇರಿ ಪೊಲೀಸರು ತನಿಖೆ ನಡೆಸುತ್ತಿದ್ದು, ಅಕ್ರಮ ಎಸಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಪ್ರಾಧಿಕಾರವು ಪಾರದರ್ಶಕವಾಗಿ ಪರೀಕ್ಷೆ ನಡೆಸಿ, ಅರ್ಹರ ಆಯ್ಕೆಗೆ ಕಟಿಬದ್ಧವಾಗಿದೆ. ಕಷ್ಟಪಟ್ಟು ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳಿಗೆ ಸಣ್ಣ ಅನುಮಾನವೂ ಬೇಡ ಎಂದಿದ್ದಾರೆ.
ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ಪ್ರಸನ್ನ ಅವರು ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಕೊಠಡಿಗೆ ಇಬ್ಬರು ಮೇಲ್ವಿಚಾರಕರು: ಶಿಗ್ಗಾವಿ ಪರೀಕ್ಷಾ ಕೇಂದ್ರದಲ್ಲಿನ ಲೋಪಗಳನ್ನು ಗಮನದಲ್ಲಿ ಇಟ್ಟುಕೊಂಡು ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಇನ್ನು ಮುಂದೆ ಪ್ರತಿ ಪರೀಕ್ಷಾ ಕೊಠಡಿಗೆ ಇಬ್ಬರು ಮೇಲ್ವಿಚಾರಕರನ್ನು ನಿಯೋಜಿಸಲು ತೀರ್ಮಾನಿಸಲಾಗಿದೆ. ಒಬ್ಬರು ಕೊಠಡಿಯೊಳಗೆ ಹಿಂಭಾಗ ನಿಂತು ಗಮನಿಸಬೇಕು. ಮತ್ತೊಬ್ಬರು ಮುಂಭಾಗ ನಿಂತಿರುತ್ತಾರೆ. ಅಲ್ಲದೆ ಕೊಠಡಿಯಲ್ಲಿನ ಜಾಮರ್ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಗಮನಿಸುವ ಜವಾಬ್ದಾರಿ ಕೂಡ ಅವರಿಗೆ ನೀಡಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಪರೀಕ್ಷಾ ಕೇಂದ್ರದ ಹೊರಗೆ ತಪಾಸಣೆ ಮಾಡಿಯೇ ಅಭ್ಯರ್ಥಿಗಳನ್ನು ಒಳಗೆ ಬಿಡಬೇಕೆನ್ನುವ ನಿಯಮ ಇದ್ದರೂ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವುದು ಗೊತ್ತಾಗಿದೆ. ಹೀಗಾಗಿ ಇನ್ನು ಮುಂದೆ ಕೊಠಡಿ ಒಳಗೂ ಎರಡನೇ ಬಾರಿ ತಪಾಸಣೆ ಮಾಡಲು ತೀರ್ಮಾನಿಸಿದ್ದು, ಎಲ್ಲ ಅಭ್ಯರ್ಥಿಗಳು ಕಡ್ಡಾಯವಾಗಿ ಅರ್ಧ ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರದೊಳಗೆ ಇರಬೇಕು. ಕೊನೆ ಕ್ಷಣದಲ್ಲಿ ಬರುವ ಅಭ್ಯರ್ಥಿಗಳನ್ನು ಒಳಗೆ ಬಿಟ್ಟುಕೊಳ್ಳುವುದಿಲ್ಲ ಎಂದು ಹೇಳಿದರು.
ಪರೀಕ್ಷಾ ಕೇಂದ್ರಗಳ ಮೇಲೆ ವೆಬ್ ಕಾಸ್ಟಿಂಗ್ ಮೂಲಕ ನಿಗಾ ಇಡಲು ಜಿಲ್ಲಾ ಮಟ್ಟದಲ್ಲಿ ವ್ಯವಸ್ಥೆ ಮಾಡಲು ಸೂಚಿಸಲಾಗಿತ್ತು. ಇನ್ನು ಮುಂದೆ ಆಯಾ ಪರೀಕ್ಷಾ ಕೇಂದ್ರದಲ್ಲೂ ಸಿಸಿಟಿವಿಗಳ ಮೇಲೆ ನಿಗಾ ಇಡಲು ಒಬ್ಬ ಮೇಲ್ವಿಚಾರಕರನ್ನು ನಿಯೋಜಿಸಲು ತೀರ್ಮಾನಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
‘ಸುಳ್ಳು ಸುದ್ದಿ ಹಾಕಬೇಡಿ’
ಶಿಗ್ಗಾವಿ ಪ್ರಕರಣ ಬಯಲಿಗೆ ಬರಲು ನೆರವಾದವರನ್ನು ಅಭಿನಂದಿಸಿದ ಪ್ರಸನ್ನ, ‘ಮುಂದಿನ ದಿನಗಳಲ್ಲಿ ಏನೇ ಅನುಮಾನ ಬಂದರೂ ಅವುಗಳನ್ನು ಇ-ಮೇಲ್ ಮೂಲಕ ಕೆಇಎ ಗಮನಕ್ಕೆ ತನ್ನಿ’ ಎಂದು ಮನವಿ ಮಾಡಿದ್ದಾರೆ.
‘ಒಂದೇ ಹೆಸರಿನ ಹಲವರು ಪರೀಕ್ಷೆ ಬರೆದಿರುತ್ತಾರೆ. ಹೀಗಾಗಿ ಯಾರದೊ ಅಂಕಗಳನ್ನು ಇನ್ಯಾರಿಗೊ ಜೋಡಿಸಿ ಸಾಮಾಜಿಕ ಮಾಧ್ಯಮದಲ್ಲಿ ಅನಗತ್ಯ ಟೀಕೆ ಮಾಡುತ್ತಿರುವುದನ್ನು ಕೆಇಎ ಗಂಭೀರವಾಗಿ ಪರಿಗಣಿಸಿದೆ. ಉದಾಹರಣೆಗೆ ಶಿವರಾಜ್ ಪಾಟೀಲ ಎಂಬ ಪ್ರತ್ಯೇಕ ಅಭ್ಯರ್ಥಿಗಳಿದ್ದರೂ ಇಬ್ಬರೂ ಒಂದೇ ಎನ್ನುವ ಹಾಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವುದು ಕಳವಳದ ವಿಚಾರ. ಹೀಗಾಗಿ ಏನೇ ಅನುಮಾನ/ದಾಖಲೆಗಳು ಇದ್ದರೂ ಗಮನಕ್ಕೆ ತಂದು, ವಾಸ್ತವ ಸ್ಥಿತಿ ತಿಳಿಯಿರಿ. ಅದು ಬಿಟ್ಟು ಸುಳ್ಳು ಸುದ್ದಿ ಹಬ್ಬಿಸುವುದು ಸರಿಯಲ್ಲ’ ಎಂದು ಹೇಳಿದ್ದಾರೆ.
261104-4-1536581050

