ಬೆಂಗಳೂರು: ಉಡುಪಿ ಜಿಲ್ಲೆಯಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆಗಳಿಗೆ ಸಂಬಂಧಿಸಿದಂತೆ ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಅವರು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಜೊತೆಗೂಡಿ ಉಡುಪಿ ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗೊಂದಿಗೆ ಮಂಗಳವಾರ ವಿಧಾನಸೌಧದಲ್ಲಿ ಸುದೀರ್ಘ ಸಭೆ ನಡೆಸಿದರು.

ಸಭೆಯಲ್ಲಿ ಪ್ರಮುಖವಾಗಿ ಸರ್ಕಾರಿ ಭೂಮಿಯಲ್ಲಿ ಕಟ್ಟಲಾಗಿರುವ ಮನೆಗಳ ಸಕ್ರಮ, ಬಗರ್ ಹುಕುಂ ಜಮೀನುಗಳ ವಿತರಣೆಯಲ್ಲಾಗುತ್ತಿರುವ ವಿಳಂಬ, ಗೋಡಂಬಿ ಪ್ಲಾಂಟೇಶನ್‌ಗಳ ಲೀಸ್ ಅವಧಿ ವಿಸ್ತರಣೆ ಹಾಗೂ ಡೀಮ್ಡ್ ಫಾರೆಸ್ಟ್ ಸರ್ವೆಯಲ್ಲಿನ ಅಡೆತಡೆಗಳ ಕುರಿತಂತೆ ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು.

ಶಾಸಕ ಸುನಿಲ್‌ಕುಮಾರ್ ಮಾತ ನಾಡಿ, ಜಿಲ್ಲೆಯಲ್ಲಿ 94 ಸಿ ಅಡಿ ಸರ್ಕಾರಿ ಜಾಗದಲ್ಲಿ ಕಟ್ಟಲಾಗಿರುವ ಮನೆಗಳ ಸಕ್ರಮಕ್ಕೆ ಸಲ್ಲಿಸಲಾದ ಅರ್ಜಿಗಳನ್ನು ಅಧಿಕಾರಿಗಳು ಹಲವು ಕಾರಣ ನೀಡಿ ತಿರಸ್ಕರಿಸುತ್ತಿದ್ದಾರೆ. ಸರ್ಕಾರಿ ಜಾಗಗಳಲ್ಲಿ ಮನೆ ನಿರ್ಮಿಸಿಕೊಂಡವರೆಲ್ಲ ಬಡವರು. ಒಮ್ಮೆ ಅರ್ಜಿ ತಿರಸ್ಕರಿದರೆ ಜನರು ಮತ್ತೆ ಅರ್ಜಿ ಸಲ್ಲಿಸುವಂತಿಲ್ಲ.‌

ಅದೇ ರೀತಿ ಶಾಸಕರ ನೇತೃತ್ವದ ಸಮಿತಿಗಳು ವಿಲೇ‌ವಾರಿ ಮಾಡಿದ ಬಗರ್ ಜಮೀನುಗಳ ಸರ್ವೇ ಕಾರ್ಯದಲ್ಲಿ ವಿಳಂಬವಾಗುತ್ತಿದೆ ಎಂದರು.

ಅದಕ್ಕೆ ಉತ್ತರಿಸಿದ ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ, ಫಾರಂ 94ಸಿ ಅಡಿಯಲ್ಲಿ ಮನೆಗಳ ಸಕ್ರಮಕ್ಕೆ ಆಗುತ್ತಿರುವ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಬಗೆಹರಿಸಲಾಗುವುದು ಎಂದರು.

ಕಟಾರಿಯಾ ಅವರು ಸದ್ಯದಲ್ಲೇ ಕಂದಾಯ ಇಲಾಖೆಯ ತಾಂತ್ರಿಕ ಸಮಿತಿಯನ್ನು ಉಡುಪಿ ಜಿಲ್ಲೆಗೆ ಕಳುಹಿಸಿ ಭೂಮಿ ವಿತರಣೆ ಹಾಗೂ ಸರ್ವೇ ಸಂಬಂಧಿತ ಎಲ್ಲ ಸಮಸ್ಯೆಗಳ ಅಧ್ಯಯನ ಮಾಡಿ ಪರಿಹಾರ ಕಂಡು ಹಿಡಿಯಲಾಗುವುದು ಎಂದರು.

ಬಗರ್ ಹುಕಂ ಭೂಮಿ ಮಂಜೂರಿಗೆ ಸಂಬಂಧ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಿದ್ದು ನೈಜ ಅರ್ಜಿಗಳನ್ನು ಪರಿಗಣಿಸಲಾಗುವುದು ಎಂದು ಕಟಾರಿಯಾ ತಿಳಿಸಿದರು.

ಶಾಸಕ ಕಿರಣಕುಮಾರ ಕೊಡ್ಗಿ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಗೋಡಂಬಿ ಪ್ಲಾಂಟೇಶನ್‌ಗಳಿಗೆ ನೀಡಲಾಗಿರುವ ಜಮೀನುಗಳ ಲೀಸ್ ಅವಧಿ ಮುಕ್ತಾಯಗೊಂಡಿದ್ದು ಅವುಗಳ ನವೀಕರಣ ಮಾಡಬೇಕು ಎಂದು ಒತ್ತಾಯಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಕಟಾರಿಯಾ ಅವರು ಸರ್ಕಾರ ಗೋಡಂಬಿ ಪ್ಲಾಂಟೇಶನ್‌ಗಳಿಗೆ ಕಡಿಮೆ‌ ದರದಲ್ಲಿ ಭೂಮಿ ಲೀಸ್ ನೀಡುವುದನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ನ್ಯಾಯಾಲಯದ್ದೂ ಇದೇ ಅಭಿಪ್ರಾಯವಾಗಿದೆ. ಗೋಡಂಬಿ ಪ್ಲಾಂಟೇಶನ್ ಗಾಗಿ ಲೀಸ್ ಮೇಲೆ ಭೂಮಿ ಪಡೆಯಲಿಚ್ಛಿಸುವವರು ವಾಣಿಜ್ಯ ದರ ಕೊಟ್ಟು ಪಡೆಯಬಹುದು ಎಂದರು.

ವಾರಾಹಿ ಯೋಜನೆಗೆ ಹೆಚ್ಚುವರಿಯಾಗಿ 17 ಎಕರೆ ಭೂಮಿ ನೀಡಲು ‌ಅಗತ್ಯ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಲು ಸಭೆ ನಿರ್ಣಯಿಸಿತು.

ಸಭೆಯಲ್ಲಿ ಶಾಸಕರಾದ ಯಶಪಾಲ್ ಸುವರ್ಣ, ಗುರುರಾಜ್ ಗಂಟಿಹೊಳೆ, ಗುರ್ಮೆ ಸುರೇಶ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಉಡುಪಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಭಾಗವಹಿಸಿದ್ದರು.

ರಾಜ್ಯದಾದ್ಯಂತ ಡೀಮ್ಡ್ ಫಾರೆಸ್ಟ್‌ ಸರ್ವೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಭೂ ಮಂಜೂರಾತಿಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಆದ್ಯತೆ ಮೇರೆಗೆ ವಿಲೇವಾರಿ ಮಾಡಬೇಕು

ರಾಮಲಿಂಗಾರೆಡ್ಡಿ, ಅರಣ್ಯ ಸಚಿವ

261104-28-1850402173