ಬೆಂಗಳೂರು: ಹಾಲು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ, ಆಮ್‌ ಆದ್ಮಿ ಪಕ್ಷದಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.

ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಪ್ರತಿಭಟನಕಾರರು, ಏರಿಕೆ ಆಗಿರುವ ಅಗತ್ಯ ವಸ್ತುಗಳ ಬೆಲೆಯನ್ನು ತಕ್ಷಣವೇ ಇಳಿಸಬೇಕು ಎಂದು ಆಗ್ರಹಿಸಿದರು.

ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಮಾತನಾಡಿ, ‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನಸಾಮಾನ್ಯರ ಬದುಕು ನೆಮ್ಮದಿಯಿಂದ ಸಾಗುತ್ತಿಲ್ಲ. ನಂದಿನಿ ಹಾಲಿನ ದರವನ್ನು ಲೀಟರ್‌ಗೆ ₹8 ಏರಿಕೆ ಮಾಡಿದೆ. ಹಿಂದೆ ಯಾವುದೇ ಸರ್ಕಾರದ ಅವಧಿಯಲ್ಲೂ ಇಷ್ಟು ದೊಡ್ಡ ಮೊತ್ತವನ್ನು ಹೆಚ್ಚಿಸಿರಲಿಲ್ಲ. ತಕ್ಷಣವೇ ಹಾಲಿನ ದರವನ್ನು ಇಳಿಕೆ ಮಾಡಬೇಕು’ ಎಂದು ಆಗ್ರಹಿಸಿದರು.

‘ರೈತರಿಗೆ ನ್ಯಾಯಯುತ ಬೆಲೆ ನೀಡುವುದು ಸರ್ಕಾರದ ಕರ್ತವ್ಯವೇ ಹೊರತು, ಅದರ ಸಂಪೂರ್ಣ ಹೊರೆಯನ್ನು ಸಾಮಾನ್ಯ ಗ್ರಾಹಕರ ಮೇಲೆ ಹೇರುವುದು ಯಾವ ನ್ಯಾಯ? ರೈತರಿಗೆ ನೇರವಾಗಿ ಸೂಕ್ತ ಆರ್ಥಿಕ ನೆರವು ನೀಡುವ ಬದಲು ಹಾಲಿನ ದರ ಹೆಚ್ಚಿಸಿ ಬಡ ಕುಟುಂಬಗಳ ಮಕ್ಕಳಿಗೆ ಸಿಗಬೇಕಾದ ಪೌಷ್ಟಿಕ ಆಹಾರವನ್ನೇ ದುಬಾರಿಗೊಳಿಸಿರುವುದು ಖಂಡನೀಯ. ರೈತರಿಗೂ ನ್ಯಾಯ ಸಿಗಬೇಕು, ಗ್ರಾಹಕರಿಗೂ ಕೈಗೆಟುಕುವ ದರದಲ್ಲಿ ಹಾಲು ದೊರೆಯಬೇಕು. ಇದಕ್ಕಾಗಿ ಸರ್ಕಾರ ತನ್ನ ಆರ್ಥಿಕ ನೀತಿಯಲ್ಲಿ ಸಮತೋಲನ ಕಾಯ್ದುಕೊಳ್ಳಬೇಕು’ ಎಂದು ಆಗ್ರಹಿಸಿದರು.

ಬೆಂಗಳೂರಿನ ಜೀವನಾಡಿ ಆಗಿರುವ ಬಿಎಂಟಿಸಿ ಸೇರಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಹೆಚ್ಚಿಸಲು ರಾಜ್ಯ ಸರ್ಕಾರವು ಸಿದ್ಧತೆ ನಡೆಸಿರುವುದು ಮತ್ತೊಂದು ಜನವಿರೋಧಿ ನಿರ್ಧಾರ ಎಂದು ಆಕ್ರೋಶ ಹೊರಹಾಕಿದರು.

ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಸತೀಶ್ ಕುಮಾರ್ ಮಾತನಾಡಿ, ಬೆಂಗಳೂರಿನಲ್ಲಿ ಈಗಾಗಲೇ ವಾಹನ ದಟ್ಟಣೆ, ದುಬಾರಿ ಜೀವನ ವೆಚ್ಚ ಮತ್ತು ಅಸ್ಥಿರ ಜೀವನದಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರದ ಕೊಳ್ಳೆ ಹೊಡೆಯುವ ನೀತಿಯಿಂದ ಉದ್ಯೋಗಿಗಳು, ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ದಿನಗೂಲಿ ನೌಕರರ ಕುಟುಂಬಗಳ ತಿಂಗಳ ವೆಚ್ಚ ಮತ್ತಷ್ಟು ಹೆಚ್ಚಾಗಿ ಬೀದಿಗೆ ಬೀಳುವ ಪರಿಸ್ಥಿತಿಯಲ್ಲಿ ಇದೆ. ಜನರ ಬದುಕಿನ ಮೂಲ ಅಗತ್ಯಗಳನ್ನೇ ದುಬಾರಿಗೊಳಿಸುವ ಬದಲು ಶಿಕ್ಷಣ, ಆರೋಗ್ಯ, ಆಹಾರ ಮತ್ತು ಸಾರ್ವಜನಿಕ ಸಾರಿಗೆಯನ್ನು ಕೈಗೆಟುಕುವ ದರದಲ್ಲಿ ಒದಗಿಸುವ ಜನಪರ ಆಡಳಿತವನ್ನು ಸರ್ಕಾರ ಜಾರಿಗೆ ತರಬೇಕು’ ಎಂದು ನಾಯಕರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಬೆಂಗಳೂರು ನಗರ ಅಧ್ಯಕ್ಷ ಶಶಿಧರ್ ಆರಾಧ್ಯ, ವಿಜಯ್ ಶರ್ಮಾ, ರವಿಕುಮಾರ್, ದಿಲೀಪ್ ಕುಮಾರ್, ಇರ್ಷಾದ್‌ ಅಹ್ಮದ್, ಲಾಲಿ ಸುಲೇಮಾನ್, ಪುಷ್ಪ ಕೇಶವ್, ಲಕ್ಷ್ಮಿ ಪಾಲ್ಗೊಂಡಿದ್ದರು.

261104-4-1211215583