ಬೆಂಗಳೂರು: ‘ಸಿದ್ದರಾಮಯ್ಯ ಅವರ ವಿರುದ್ಧದ ಸ್ಟಿಂಗ್‌ ಸುದ್ದಿ ವಿಧಾನ ಪರಿಷತ್‌ ಚುನಾವಣೆ ಮೇಲೂ ಪರಿಣಾಮ ಬೀರಿದೆ. ವಿದ್ಯಾವಂತರು ಮತ ಹಾಕಿರುವ ಚುನಾವಣೆಯಲ್ಲಿ ಸಿದ್ದರಾಮಯ್ಯ ವಿರುದ್ಧದ ಷಡ್ಯಂತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸಾಧ್ಯತೆಯಿದೆ. ಹೀಗಾಗಿ ನಾಲ್ಕೂ ಸ್ಥಾನ ಸೋತಿದ್ದೇವೆ’ ಎಂದು ಶಾಸಕ ಕೆ.ಎನ್‌. ರಾಜಣ್ಣ ಅಭಿಪ್ರಾಯಪಟ್ಟರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರು 2028ರ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದರು. ಬಳಿಕ, ನಾನು ಪ್ರಚಾರಕ್ಕೆ ಹೋಗುವುದಿಲ್ಲ ಎಂದರು. ಇವೆಲ್ಲವೂ ಪಕ್ಷದ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡುತ್ತಿವೆ’ ಎಂದರು.

‘ಸಿದ್ದರಾಮಯ್ಯ ಅವರ ವೈಯಕ್ತಿಕ ಚಾರಿತ್ರ್ಯವಧೆ ಆಗಿದೆ. ಈ ಬಗ್ಗೆ ರಾಹುಲ್‌ಗಾಂಧಿ ಅವರಿಗೆ ತಿಳಿಸಿದ್ದಾರೆ ಎಂಬ ಮಾತಿದೆ. ಇದು ನಮ್ಮ ರಾಜ್ಯಕ್ಕೆ ಒಂದು ದೊಡ್ಡ ಕಳಂಕ, ಇದು ಕರ್ನಾಟಕ ಮಾದರಿ ಎಂಬಂತಾಗಿದೆ. ಕರ್ನಾಟಕಕ್ಕೆ ಇಂತಹ ಅಪಕೀರ್ತಿ ಬೇಡ, ಕನ್ನಡಿಗರು ತಲೆ ತಗ್ಗಿಸುವ ವಿಚಾರ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುನಿಸು ಶಮನವಾಗಲಿದೆ: ‘ಶಾಸಕ ಎಚ್.ಸಿ. ಮಹದೇವಪ್ಪ ಮತ್ತು ಸಿದ್ದರಾಮಯ್ಯ ನಡುವಿನ ಮುನಿಸು ಶಮನವಾಗಲಿದೆ, ಅನುಮಾನ ಬೇಡ. ಇಬ್ಬರ ನಡುವೆ ಏನೂ ಇರುವುದಿಲ್ಲ. ಮಧ್ಯದಲ್ಲಿ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಹೇಳುವವರಿಂದ ಈ ರೀತಿ ಆಗಿರುತ್ತದೆ’ ಎಂದರು.‌ನಾವೆಲ್ಲರೂ ರಾಜೀನಾಮೆ ನೀಡಬೇಕು: ‘ಆಗ್ನೇಯ ಪದವೀಧರ ಕ್ಷೇತ್ರದಲ್ಲಿ 35 ವಿಧಾನಸಭಾ ಕ್ಷೇತ್ರಗಳಲ್ಲಿ 26 ಜನ ನಾವೇ (ಕಾಂಗ್ರೆಸ್) ಶಾಸಕರು ಇದ್ದೇವೆ. ಆದರೂ ಗೆಲ್ಲುವುದಕ್ಕೆ ಆಗಿಲ್ಲ. ನನ್ನನ್ನು ಒಳಗೊಂಡಂತೆ ನಾವೆಲ್ಲಾ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಬೇಕು. ನಾವು ಕೂಡ ಇದರಲ್ಲಿ ತಪ್ಪು ಮಾಡಿದ್ದೇವೆ’ ಎಂದು ರಾಜಣ್ಣ ಹೇಳಿದರು. ‘ಹಿರಿಯೂರು ಉಪ ಚುನಾವಣೆ ಮೇಲೂ ಪರಿಣಾಮ ಬೀರುತ್ತದೆಯೇ’ ಎಂಬ ಪ್ರಶ್ನೆಗೆ, ‘ಉಪ ಚುನಾವಣೆಗಳು ಅಭ್ಯರ್ಥಿಗಳ ಮೇಲೆ ಹೋಗುತ್ತವೆ. ಅಲ್ಲಿ ಆಡಳಿತ ವಿರೋಧಿ ಅಲೆ ಕೂಡ ಗಣನೆಗೆ ಬರುತ್ತದೆ. ಅದನ್ನೆಲ್ಲಾ ಎದುರಿಸುವ ಶಕ್ತಿ ನಮ್ಮ ಪಕ್ಷ ಹಾಗೂ ಕಾರ್ಯಕರ್ತರಿಗೆ ಇದೆ’ ಎಂದರು.

ಸ್ಟಿಂಗ್‌ ಕಾರ್ಯಾಚರಣೆ ಪ್ರಕರಣದಲ್ಲಿ ಕುಮಾರಸ್ವಾಮಿ ಅವರ ದಿನಕ್ಕೊಂದು ಹೇಳಿಕೆ, ನಡವಳಿಕೆ, ಪಲಾಯನವಾದ ನೋಡಿದಾಗ ಅವರದ್ದೇ ಪಾತ್ರ ಇರಬೇಕೆಂಬ ಅನುಮಾನ ಬರುತ್ತಿದೆ

ವಿ.ಎಸ್‌. ಉಗ್ರಪ್ಪ ಮಾಜಿ ಸಂಸದ

261104-51-1683509421