ಬೆಂಗಳೂರು: ‘ಪೊಲೀಸ್ ಠಾಣೆಗಳು ಸಿವಿಲ್ ವ್ಯಾಜ್ಯಗಳನ್ನು ಬಗೆಹರಿಸುವ ದಂಧೆಯಲ್ಲಿ ತೊಡಗಿ ತಮ್ಮ ಅಧಿಕಾರ ಚಲಾಯಿಸುತ್ತಿರುವ ಪರಿಣಾಮ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಸಂವಿಧಾನದ ಚೌಕಟ್ಟಿನಲ್ಲಿ ವೃತ್ತಿ ನಡೆಸಬೇಕಾದ ವಕೀಲರಿಗೆ ರಕ್ಷಣೆ ಇಲ್ಲ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಕೂಡಲೇ ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡು ನ್ಯಾಯ ಒದಗಿಸಬೇಕು’ ಎಂದು ‘ಬೆಂಗಳೂರು ವಕೀಲರ ಸಂಘ’ (ಎಎಬಿ) ಆಗ್ರಹಿಸಿದೆ.
ವಕೀಲರ ಮೇಲಿನ ಹಲ್ಲೆ ಹಾಗೂ ಕೊಲೆ ಪ್ರಕರಣಗಳನ್ನು ಖಂಡಿಸಿ, ಮಂಗಳವಾರ (ನ.3) ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲು ಎಎಬಿ ಕೊಟ್ಟಿದ್ದ ಕರೆಗೆ ವಕೀಲರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ಹೈಕೋರ್ಟ್, ಸಿಟಿ ಸಿವಿಲ್ ಕೋರ್ಟ್, ಮ್ಯಾಜಿಸ್ಟ್ರೇಟ್ ಕೋರ್ಟ್ ಹಾಗೂ ಮೆಯೊ ಹಾಲ್ ಕೋರ್ಟ್‌ಗಳ ವಕೀಲರು ದಿನದ ಕಲಾಪ ಬಹಿಷ್ಕರಿಸಿ ಬೀದಿಗಿಳಿದು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಬಳಿಕ ಹೈಕೋರ್ಟ್‌ನ ಗೋಲ್ಡನ್ ಗೇಟ್ ಮುಂಭಾಗ ಜಮಾಯಿಸಿ, ‘ವೃತ್ತಿನಿರತ ವಕೀಲರಿಗೆ ಸೂಕ್ತ ಭದ್ರತೆ ಮತ್ತು ಪರಿಣಾಮಕಾರಿ ಕಾನೂನು ರಕ್ಷಣೆ ಒದಗಿಸಬೇಕು’ ಎಂದು ಒಕ್ಕೊರಲ ಹಕ್ಕೊತ್ತಾಯ ಮಾಡಿದರು.
ಬೆಳಿಗ್ಗೆ ದಿನದ ಕಲಾಪ ಆರಂಭವಾಗುತ್ತಿದ್ದಂತೆಯೇ ಎಎಬಿ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಮತ್ತು ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಆರ್.ರಾಜಣ್ಣ ಅವರ ನೇತೃತ್ವದಲ್ಲಿ ಭಾರಿ ಸಂಖ್ಯೆಯ ಪದಾಂಕಿತ ಹಿರಿಯ ವಕೀಲರು ನ್ಯಾಯಮೂರ್ತಿ ಡಿ.ಕೆ.ಸಿಂಗ್ ಹಾಗೂ ನ್ಯಾಯಮೂರ್ತಿ ಎಚ್.ಶಾಂತಿಭೂಷಣ್ ಅವರಿದ್ದ ದ್ವಿಸದಸ್ಯ ನ್ಯಾಯಪೀಠದ ಮುಂದೆ ತಮ್ಮ ಅಹವಾಲು ಮಂಡಿಸಿದರು.
ವಕೀಲರ ರಕ್ಷಣೆಯ ಕುರಿತಾದ ಮನವಿಯನ್ನು ಸ್ವೀಕರಿಸಿದ ನ್ಯಾಯಪೀಠ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಳ್ಳುವುದಾಗಿ ತಿಳಿಸಿತು. ಇದೇ ವೇಳೆ ಕೋರ್ಟ್ ಹಾಲ್ 1ರಲ್ಲಿ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ದ್ವಿಸದಸ್ಯ ನ್ಯಾಯಪೀಠ ಪ್ರತಿಭಟನೆಗೆ ಕರೆ ಕೊಟ್ಟು ಕಲಾಪ ಬಹಿಷ್ಕಾರಕ್ಕೆ ಮುಂದಾದ ವಕೀಲರ ಸಂಘದ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲು ಮಾಡಿಕೊಂಡಿತು.
ನಂತರ ಹೈಕೋರ್ಟ್‌ನ ಗೋಲ್ಡನ್ ಗೇಟ್ ಮುಂದೆ ಸಮಾವೇಶಗೊಂಡ ವಕೀಲರನ್ನು ಉದ್ದೇಶಿಸಿ ಮಾತನಾಡಿದ ವಿವೇಕ್ ಸುಬ್ಬಾರೆಡ್ಡಿ, ‘ಪೊಲೀಸ್ ಠಾಣೆಗಳು ಕ್ರಿಮಿನಲ್ ನ್ಯಾಯ ವಿತರಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿವೆ. ಆಫ್ರಿಕಾದ ಪೊಲೀಸ್ ನ್ಯಾಯಪೀಠಗಳ ರೀತಿಯಲ್ಲಿ ಪರ್ಯಾಯ ಕೋರ್ಟ್‌ಗಳಂತೆ ವ್ಯವಹರಿಸುತ್ತಾ, ಸಿವಿಲ್ ವ್ಯಾಜ್ಯಗಳ ಡೀಲ್ ಕೇಂದ್ರಗಳಾಗಿವೆ. ಇದರ ದುಷ್ಪರಿಣಾಮದಿಂದ ವಕೀಲರ ಪ್ರಾಣ ಪಣಕ್ಕಿಟ್ಟು ವೃತ್ತಿ ನಡೆಸುವಂತಾಗಿದೆ’ ಎಂದು ಆರೋಪಿಸಿದರು.
ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಆರ್.ರಾಜಣ್ಣ ಮಾತನಾಡಿ, ‘ಎಎಬಿಯ ಈ ಹೋರಾಟಕ್ಕೆ ರಾಜ್ಯ ವಕೀಲರ ಪರಿಷತ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ’ ಎಂದರು. ಉಪಾಧ್ಯಕ್ಷ ಶಿವಮೂರ್ತಿ, ‘ರಾಜ್ಯದ 191 ವಕೀಲರ ಸಂಘಗಳೂ ಈ ಪ್ರತಿಭಟನೆಗೆ ಬೇಷರತ್ತಾಗಿ ಸಾಥ್ ನೀಡಿವೆ’ ಎಂದರು.
ಪ್ರತಿಭಟನೆಯಲ್ಲಿ ಪದಾಂಕಿತ ಹಿರಿಯ ವಕೀಲ ಎಂ.ಅರುಣ್ ಶ್ಯಾಮ್, ರಾಜ್ಯ ವಕೀಲರ ಪರಿಷತ್ ಸದಸ್ಯರಾದ ಎಂ.ದೇವರಾಜ್, ಎಸ್.ಎಫ್ ಗೌತಮ್ ಚಂದ್, ಎಂ.ಎನ್.ಮಧುಸೂಧನ್, ಎಎಬಿ ಪ್ರಧಾನ ಕಾರ್ಯದರ್ಶಿ ಎಚ್.ವಿ.ಪ್ರವೀಣ್ ಗೌಡ, ಉಪಾಧ್ಯಕ್ಷ ಸಿ.ಎಸ್.ಗಿರೀಶ್ ಕುಮಾರ್ ಮತ್ತು ಖಜಾಂಚಿ ಶ್ವೇತಾ ರವಿಶಂಕರ್, ಪದಾಧಿಕಾರಿಗಳಾದ ಸಂಧ್ಯಾ ಯು ಪ್ರಭು, ಎಸ್.ರಾಜು, ಎಂ.ಚಾಮರಾಜ್, ಎಚ್.ಎಸ್.ತಮ್ಮಯ್ಯ, ಆತ್ಮ ವಿ.ಹಿರೇಮಠ, ಸಿಟಿ ಸಿವಿಲ್ ಕೋರ್ಟ್‌ನ ಅಂಬರೀಷ್ ಗೌಡ, ಕುಮಾರ್ ಆರ್.ಎಸ್.ಗೌಡ, ಮುನಿರಾಜು, ಮಮತಾ, ಮ್ಯಾಜಿಸ್ಟ್ರೇಟ್ ಕೋರ್ಟ್‌ನ ಶಿವಶಂಕರ್, ಪ್ರಭು, ಅನಿಲ್, ಸುಜಾತ ಗೌಡ ಹಾಗೂ ಮೆಯೋ ಹಾಲ್‌ನ ನಟೇಶ್, ಭಕ್ತವತ್ಸಲ, ರವಿಲಾ ಸೇರಿದಂತೆ ಹಿರಿ–ಕಿರಿಯ ನೂರಾರು ವಕೀಲರು ನೆರೆದಿದ್ದರು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಸಂದಣಿ ಹೆಚ್ಚಾಗಿ ಮೆಟ್ರೊ ನಿಲ್ದಾಣ ಮತ್ತು ವಿಧಾನ ಸೌಧ ಗೇಟ್ ಮುಂಭಾಗದಲ್ಲಿ ವಕೀಲರ ದಂಡೇ ಬೀಡುಬಿಟ್ಟಿತ್ತು.
ಜಡ್ಜ್‌ಗಳ ಮೇಲೆ ಹಲ್ಲೆಯಾಗಿದ್ದರೆ..?
ಇವತ್ತು ರಾಜ್ಯದಲ್ಲಿ ಯಾರು ಯಾರ ಆಸ್ತಿಯನ್ನು ಬೇಕಾದರೂ ಬರೆಸಿಕೊಳ್ಳಬಹುದು ಎಂಬ ದುಃಸ್ಥಿತಿ ಬಂದೊದಗಿದೆ. ಹಾಗಾಗಿ, ಪೀಠಾಸೀನ ಉಪವಿಭಾಗಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಯುವ ಅರೆ ನ್ಯಾಯಿಕ ಪ್ರಕ್ರಿಯೆಯನ್ನು ಕೂಡಲೇ ತೆಗೆದುಹಾಕಬೇಕು.
ಆರ್.ರಾಜಣ್ಣ
ಸಂವಿಧಾನ ಕಾಪಾಡಬೇಕಾದರೆ ವಕೀಲರ ರಕ್ಷಣೆ ಆಗಬೇಕು. ರಾಜ್ಯದಲ್ಲಿ ಇವತ್ತು ವಕೀಲರಿಗೇ ರಕ್ಷಣೆ ಇಲ್ಲದಂತಾಗಿದೆ. ಹೀಗಾದರೆ, ಸಾಮಾನ್ಯ ಜನರಿಗೆ ಹೇಗೆ ತಾನೇ ರಕ್ಷಣೆ ಸಿಗುತ್ತದೆ?
ಎಂ.ದೇವರಾಜ್
ಒಂದು ವೇಳೆ ಹೈಕೋರ್ಟ್ ವಕೀಲರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲು ಮಾಡಿದರೆ ನಾವು ಎದುರಿಸಲು ಸಿದ್ಧ. ಅಕಸ್ಮಾತ್ ಯಾವುದಾದರೂ ಜಡ್ಜ್ ಮೇಲೆ ಹಲ್ಲೆ ಅಥವಾ ಅಕ್ರಮಣ ನಡೆದಿದ್ದರೆ ಅವರು ಪ್ರಕರಣ ದಾಖಲಿಸುತ್ತಿರಲಿಲ್ಲವೇ?
ಎಸ್.ಎಫ್.ಗೌತಮ್ ಚಂದ್
ಗೃಹ ಸಚಿವರಿಗೆ ಮನವಿ ಸಲ್ಲಿಕೆ
ವಕೀಲರ ಮೇಲಿನ ಹಲ್ಲೆ ಮತ್ತು ಹತ್ಯೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ವಕೀಲರ ರಕ್ಷಣಾ ಕಾಯ್ದೆಯನ್ನು ಮತ್ತಷ್ಟು ಬಲಪಡಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ, ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳು, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಸಲ್ಲಿಸಿದರು.
ವಕೀಲರಾದ ಮಂಜುನಾಥ್, ಅನ್ನಪೂರ್ಣೇಶ್ವರಿ ನಗರದ ಶ್ರೀರಾಮ್ ಅವರ ಹತ್ಯೆ ಹಾಗೂ ಗೌರಿಬಿದನೂರಿನ ವೆಂಕಟರಮಣ ಸನ್ನಕ್ಕಿ ಅವರ ಮೇಲಿನ ಕೊಲೆ ಯತ್ನದ ಪ್ರಕರಣಗಳ ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವಕೀಲರ ರಕ್ಷಣಾ ಕಾಯ್ದೆಗೆ ಕಠಿಣ ಹಾಗೂ ಜಾಮೀನು ರಹಿತ ಅಪರಾಧದ ಅಂಶಗಳನ್ನು ಸೇರ್ಪಡೆಗೊಳಿಸಿ, ಕನಿಷ್ಠ 10 ವರ್ಷಗಳ ಶಿಕ್ಷೆಗೆ ಅವಕಾಶ ಕಲ್ಪಿಸಬೇಕು. ಪೊಲೀಸ್ ಠಾಣೆಗಳಿಗೆ ತೆರಳುವ ವಕೀಲರು ಹಾಗೂ ಸಾರ್ವಜನಿಕರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಲು ಪ್ರಮಾಣಿತ ಕಾರ್ಯಾಚರಣಾ ವಿಧಾನ(ಎಸ್‌ಒಪಿ) ರೂಪಿಸಿ ಎಲ್ಲ ಠಾಣೆಗಳಲ್ಲಿ ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು ವಕೀಲರ ಸಂಘದ ಬೇಡಿಕೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
261104-4-836163143

