ಬೆಂಗಳೂರು: ‘ರಾಜ್ಯದಲ್ಲಿ 2028ರಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚಿಸುವ ಸಂಕಲ್ಪದೊಂದಿಗೆ ನಾವೆಲ್ಲರೂ ಕೆಲಸ ಮಾಡಬೇಕು ಎಂದು ಪಕ್ಷದ ನಾಯಕರಿಗೆ ತಿಳಿಸಿದ್ದೇನೆ’ ಎಂದು ಬಿಜೆಪಿ ರಾಜ್ಯ ಘಟಕದ ಉಸ್ತುವಾರಿ ಹರೀಶ್‌ ದ್ವಿವೇದಿ ತಿಳಿಸಿದರು.

ರಾಜ್ಯ ಉಸ್ತುವಾರಿಯಾಗಿ ನೇಮಕವಾದ ನಂತರ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ, ಬಿಜೆಪಿ ರಾಜ್ಯ ಘಟಕದ ನಾಯಕರ ಜತೆಗೆ ಅವರು ಸೋಮವಾರ ಸಭೆ ನಡೆಸಿದ್ದರು. ಈ ಕುರಿತು ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದರು.

‘ನಿನ್ನೆ ರಾಜ್ಯ ಘಟಕದ ಅಧ್ಯಕ್ಷ, ರಾಜ್ಯ ಪದಾಧಿಕಾರಿಗಳ ಸಭೆ ಮತ್ತು ರಾಜ್ಯ ಪ್ರಮುಖರ ಸಮಿತಿ ಸದಸ್ಯರ ಜತೆಗೆ ಸಭೆ ನಡೆಸಿದ್ದೆ. ನಾವೆಲ್ಲರೂ ರಾಜ್ಯ ಪದಾಧಿಕಾರಿಗಳ ಸಭೆ ಹಾಗೂ ಕೋರ್ ಕಮಿಟಿ ಸಭೆ ನಡೆಸಿದೆವು. ಅದೊಂದು ಪರಿಚಯಾತ್ಮಕ ಸಭೆಯಾಗಿತ್ತು. ಆ ಸಭೆಯಲ್ಲಿ ನಮ್ಮ ಸಂಘಟನೆಯ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಮತ್ತು ಸಂಘಟನೆಯನ್ನು ಮತ್ತಷ್ಟು ಸಕ್ರಿಯಗೊಳಿಸುವುದು ಸೇರಿ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಿದ್ದೇವೆ’ ಎಂದು ಮಾಹಿತಿ ನೀಡಿದರು.

‘ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದೇನೆ. ಅವರ ನೇತೃತ್ವದಲ್ಲಿ ಬಿಜೆಪಿ ಕರ್ನಾಟಕದಲ್ಲಿ ವರ್ಷಗಳಿಂದ ಆಡಳಿತ ಹಾಗೂ ವಿರೋಧ ಪಕ್ಷವಾಗಿ ಅತ್ಯಂತ ಪ್ರಭಾವಿ ರೀತಿಯಲ್ಲಿ ಕೆಲಸ ಮಾಡಿದೆ. ಅವರ ಮಾರ್ಗದರ್ಶನ ಪಡೆದುಕೊಂಡಿದ್ದೇವೆ. ಮುಂಬರುವ ದಿನಗಳಲ್ಲಿ ನಾವೆಲ್ಲರೂ ಒಟ್ಟಾಗಿ ಕರ್ನಾಟಕದಲ್ಲಿ ಕಾಂಗ್ರೆಸ್‍ನ ಈ ದುರಾಡಳಿತದಿಂದ ಜನರಿಗೆ ಹೇಗೆ ಮುಕ್ತಿ ಕೊಡಿಸಬೇಕು ಎಂಬುದರ ಕುರಿತು ಚರ್ಚಿಸಿದ್ದೇವೆ’ ಎಂದು ತಿಳಿಸಿದರು.

‘ಬಿಜೆಪಿ ಮತ್ತು ಜೆಡಿಎಸ್‌ ಮಧ್ಯೆ ಈಗ ಮೈತ್ರಿ ಇದೆ. ಮೈತ್ರಿ ಚೆನ್ನಾಗಿಯೂ ಇದೆ. ಆದರೆ ಅದನ್ನು ಮುಂದುವರೆಸುವ ಕುರಿತು ನಾನು ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗುವುದಿಲ್ಲ. ಪಕ್ಷದ ವರಿಷ್ಠರು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಬಿ.ವೈ.ವಿಜಯೇಂದ್ರ ಅವರು ಯುವ ನಾಯಕರು. ಪಕ್ಷ ಅವರ ಅಧ್ಯಕ್ಷತೆಯಲ್ಲಿಯೇ ಮುಂದಿನ ಚುನಾವಣೆ ಎದುರಿಸಲಿದೆ’ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಎಸ್‍ಐಆರ್ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ, ‘ಮೋದಿಯವರ ಅಧಿಕಾರಾವಧಿಯಲ್ಲಿ ಮಾತ್ರ ಎಸ್‌ಐಆರ್‌ ನಡೆಯುತ್ತಿಲ್ಲ. ಪಂಡಿತ್ ಜವಾಹರಲಾಲ್ ನೆಹರೂ ಅವರಿಂದ ಹಿಡಿದು ಇಂದಿರಾ ಗಾಂಧಿಯವರವರೆಗೂ ಕಾಲಕಾಲಕ್ಕೆ ಎಸ್‍ಐಆರ್ ನಡೆಯುತ್ತಲೇ ಬಂದಿದೆ. ಎಸ್‍ಐಆರ್ ಏಕೆ ಮಾಡಲಾಗುತ್ತದೆ? ಯಾರಾದರೂ ಮೃತಪಟ್ಟಿದ್ದರೆ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು, ಯಾರಾದರೂ ವಾಸಸ್ಥಳ ಬದಲಾಯಿಸಿದ್ದರೆ ಅಥವಾ ಒಂದೇ ವ್ಯಕ್ತಿಯ ಹೆಸರು ಎರಡು ಕಡೆ ಮತದಾರರ ಪಟ್ಟಿಯಲ್ಲಿದ್ದರೆ ಅದನ್ನು ಸರಿಪಡಿಸಲು ಮಾಡಲಾಗುತ್ತದೆ. ಅಂದರೆ ಮತದಾರರ ಪಟ್ಟಿಯ ಶುದ್ಧೀಕರಣಕ್ಕಾಗಿ ಎಸ್‍ಐಆರ್ ಮಾಡಲಾಗುತ್ತದೆ’ ಎಂದರು.

‘ಕಾಂಗ್ರೆಸ್ ಚುನಾವಣೆಯಲ್ಲಿ ಸೋತಾಗ ಆತ್ಮಾವಲೋಕನ ಮಾಡಿಕೊಳ್ಳುವ ಬದಲು, ಚುನಾವಣಾ ಆಯೋಗ, ಇವಿಎಂ ಹಾಗೂ ಸುಪ್ರೀಂ ಕೋರ್ಟ್ ಅನ್ನು ದೂಷಿಸುತ್ತದೆ. ಕಾಂಗ್ರೆಸ್ ಎಂದಿಗೂ ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ಗೌರವಿಸುವುದಿಲ್ಲ. ಗಾಂಧಿ ಪರಿವಾರವೇ ಸರ್ವಸ್ವ ಎಂದು ಅವರು ಭಾವಿಸುತ್ತಾರೆ. ಆದರೆ ದೇಶದ ಪ್ರಜ್ಞಾವಂತ ಮತದಾರರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಪ್ರಜ್ಞಾವಂತ ಮತದಾರರು, ಶಿಕ್ಷಕರು ಮತ್ತು ಪದವೀಧರರು ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ-ಎನ್‍ಡಿಎ ಅಭ್ಯರ್ಥಿಗಳನ್ನು ಭರ್ಜರಿ ಅಂತರದಿಂದ ಗೆಲ್ಲಿಸುವ ಮೂಲಕ ಸ್ಪಷ್ಟ ಸಂದೇಶ ನೀಡಿದ್ದಾರೆ’ ಎಂದು ಹೇಳಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಗೋವಿಂದ ಕಾರಜೋಳ ಇದ್ದರು.

ಜನ ಪಾಠ ಕಲಿಸಲಿದ್ದಾರೆ: ಜಿತೇಂದ್ರ ಸಿಂಗ್

ಬೆಂಗಳೂರು:ಎಸ್‍ಐಆರ್ ವಿಷಯದಲ್ಲಿ ಅಪಪ್ರಚಾರ ಮಾಡುವ ಕಾಂಗ್ರೆಸ್ ಪಕ್ಷಕ್ಕೆ ಜನತೆಯೇ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ಕೊಡಲಿದ್ದಾರೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಪ್ರಜಾಪ್ರಭುತ್ವ ಪದ್ಧತಿಯಲ್ಲಿ ಸತ್ತವರ ಹೆಸರು ರದ್ದು ಮಾಡುವುದು, ಅಕ್ರಮ ನುಸುಳುಕೋರರ ಹೆಸರು ರದ್ದತಿ, ಎರಡು ಕಡೆ ಮತದಾನದ ಸಮಸ್ಯೆ ನಿವಾರಣೆ ಮಾಡಿ ನಿಷ್ಪಕ್ಷಪಾತ ಚುನಾವಣೆ ನಡೆಸಲು ಎಸ್‍ಐಆರ್ ಅನಿವಾರ್ಯ’ ಎಂದರು.

‘ಸುಮಾರು 13 ಕೋಟಿ ಜನರ ಹೆಸರು ರದ್ದಾಗಿದೆ ಎಂದು ಕಾಂಗ್ರೆಸ್ ಟೀಕಿಸುತ್ತಿದೆ. ಇದರ ಪೈಕಿ 6.3 ಕೋಟಿ ಮತಗಳು ಊರಿನ ಬದಲಾವಣೆ ಕಾರಣಕ್ಕಾಗಿ ರದ್ದಾಗಿವೆ. ಅವರಿಗೆ ಎರಡು ಕಡೆ ಮತ ಇರುವುದು ಸಾಧ್ಯವಿಲ್ಲ ಎಂದು ತಿಳಿಸಿದರು. ಸುಮಾರು 3 ಕೋಟಿ ಜನರು ಮೃತಪಟ್ಟಿದ್ದಾರೆ. ಸುಮಾರು 1 ಕೋಟಿ ಜನರು ಎರಡು ಕಡೆ ಮತಪಟ್ಟಿಯಲ್ಲಿ ಹೆಸರು ಹೊಂದಿದ್ದರು. ಇವರೆಲ್ಲರನ್ನೂ ಮತದಾರರ ಪಟ್ಟಿಯಿಂದ ತೆಗೆದುಹಾಕಿದ್ದು ಕಾಂಗ್ರೆಸ್‌ ಮತ್ತು ಟಿಎಂಸಿಗೆ ತೊಂದರೆಯಾಗಿದೆ. ಹೀಗಾಗಿ ಬೀದಿಗಿಳಿದು ಕೂಗುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.

‘ಜನರು, ಯುವಜನತೆ ಜಾಗೃತರಾಗಿದ್ದಾರೆ. ಸುಳ್ಳು, ಸತ್ಯವನ್ನು ಅವರು ಅರಿತುಕೊಳ್ಳುತ್ತಿದ್ದಾರೆ ಎಂದರು. ಬೀದಿಯಲ್ಲಿ ಪ್ರತಿಭಟನೆ, ಘೋಷಣೆ ಕೂಗುವುದರಿಂದ ಚುನಾಯಿತ ಸರ್ಕಾರದ ಬದಲಾವಣೆ ಅಸಾಧ್ಯ ಎಂಬುದನ್ನು ವಿರೋಧ ಪಕ್ಷಗಳು ಅರ್ಥಮಾಡಿಕೊಳ್ಳಬೇಕು’ ಎಂದರು.

ರಾಜ್ಯಸಭಾ ಸದಸ್ಯ ಲೆಹರ್‌ ಸಿಂಗ್‌ ಸಿರೋಯಾ, ಶಾಸಕ ಎಸ್‌.ಸುರೇಶ್‌ ಕುಮಾರ್‌ ಉಪಸ್ಥಿತರಿದ್ದರು.

261104-51-1939868676